ಜಿಲ್ಲೆಯಲ್ಲಿ ಕಳೆದ ಒಂದೆರಡು ತಿಂಗಳಿನಿಂದ ಕೆಂಪು ಕಲ್ಲು ಹಾಗೂ ಮರಳು ಸಿಗದೆ ಕಟ್ಟಡ ನಿರ್ಮಾಣ ಕಾಮಗಾರಿಗಳು ಪೂರ್ಣವಾಗಿ ಸ್ಥಗಿತವಾಗಿದೆ. ಇದರಿಂದ ನಿರ್ಮಾಣ ಕಾರ್ಮಿಕರ ಜತೆಗೆ ಈ ಉದ್ಯಮವನ್ನು ನಂಬಿದ ಕೂಲಿ ಕಾರ್ಮಿಕರು ಉದ್ಯಮಿಗಳು ಸೇರಿದಂತೆ ಹಲವು ತೀವ್ರವಾಗಿ ಆರ್ಥಿಕ ತೊಂದರೆಗೆ ಸಿಲುಕಿದ್ದಾರೆ. ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ನೀಡಿರುವ ಭರವಸೆಯಂತೆ ಸಮಸ್ಯೆ ಬಗೆಹರಿಸದಿದ್ದರೆ ಪ್ರತಿಭಟನೆ ಅನಿವಾರ್ಯ ಎಂದು ದ.ಕ. ಜಿಲ್ಲಾ ಸಿವಿಲ್ ಗುತ್ತಿಗೆದಾರರ ಸಂಘ ತಿಳಿಸಿದೆ.
ಇಂದು ಪ್ರೆಸ್ ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಮಹಾಬಲ ಕೊಟ್ಟಾರಿ, ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಬೇಕಾದ ಉತ್ತಮ ಗುಣಮಟ್ಟದ ಮರಳು ಹಲವು ವರ್ಷಗಳಿಂದ ಲಭ್ಯವಾಗದೆ ಗುತ್ತಿಗೆದಾರರು ಈಗಾಗಲೇ ಆರ್ಥಿಕವಾಗಿ ಸಂಕಷ್ಟಕ್ಕೆ ಈಡಾಗಿದ್ದಾರೆ. ಇದೀಗ ಒಂದೆರಡು ತಿಂಗಳಿನಿಂದ ಕಾನೂನಿನ ನೆಪವೊಡ್ಡಿ ಕೆಂಪು ಮುರಕಲ್ಲಿನ ಗಣಿಗಾರಿಕೆ ನಿರ್ಬಂಧಿಸಿರುವ ಕಾರಣ ಮತ್ತಷ್ಟು ಸಮಸ್ಯೆ ಹೆಚ್ಚಾಗಿದೆ ಎಂದು ಆರೋಪಿಸಿದರು.
ಇದನ್ನೂ ಓದಿ: ಕೈದಿಗೆ ಮಾದಕ ವಸ್ತು ಪೂರೈಕೆ: ಮಂಗಳೂರು ಜೈಲು ಮೇಲೆ ಪೊಲೀಸ್-ಎಸ್‌ಎಎಫ್ ತಂಡ ದಾಳಿ
ಕರಾವಳಿ ಜಿಲ್ಲೆಗಳಿಗೆ ಪ್ರತ್ಯೇಕ ಮರಳು ನೀತಿ ರೂಪಿಸುವ ಬಗ್ಗೆ ಹಲವು ವರ್ಷಗಳಿಂದ ಸರ್ಕಾರದ ಪ್ರತಿನಿಧಿಗಳು ಹೇಳುತ್ತಾ ಬಂದಿದ್ದರೂ ಈವರೆಗೆ ಕಾರ್ಯರೂಪಕ್ಕೆ ಬಂದಿಲ್ಲ. ಕೆಂಪು ಕಲ್ಲು ಕೂಡಾ ಇದೀಗ ಅಲಭ್ಯವಾಗಿದೆ. ಇದರಿಂದ ನಿರ್ಮಾಣ ಕ್ಷೇತ್ರದಲ್ಲಿ ತಲ್ಲಣ ಸೃಷ್ಠಿಯಾಗಿದೆ. ಗ್ರಾಮಾಂತರ ಭಾಗಗಳಲ್ಲಿ ಒಂದು ಅಥವಾ ಎರಡು ಮಹಡಿ ಮನೆಗಳನ್ನು ಕಾಂಕ್ರಿಟ್ ಪಿಲ್ಲರ್ ಇಲ್ಲದೆ ಕೆಂಪು ಕಲ್ಲು ಬಳಸಿ ಮಧ್ಯಮ ಹಾಗೂ ಬಡ ವರ್ಗದ ಜನರ ಮನೆ ನಿರ್ಮಾಣ ಮಾಡುತ್ತಿದ್ದರು. ಕೆಂಪು ಕಲ್ಲು ಹಾಗೂ ಮರಳು ಸಿಗದೆ ಅವರ ಕನಸಿಗೆ ಈಗ ತೊಂದರೆಯಾಗಿದೆ.
ಇದನ್ನೂ ಓದಿ: ಮಂಗಳೂರು | ಜು.14-17ರವರೆಗೆ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ
ಗುತ್ತಿಗೆದಾರರು ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ರಾಜ್ಯದ ಬೊಕ್ಕಸಕ್ಕೆ ತೆರಿಗೆ ರೂಪದಲ್ಲಿ ದುಡಿಮೆಯ ಪಾಲನ್ನು ಭರಿಸುತ್ತಿದ್ದೇವೆ. ಇದೀಗ ನಮ್ಮ ಜಿಲ್ಲೆಯ ಕಾರ್ಮಿಕ ವರ್ಗವಲ್ಲದೆ, ಹೊರ ಜಿಲ್ಲೆ, ರಾಜ್ಯಗಳ ಕಾರ್ಮಿಕರು ಕೂಡಾ ಕೆಲಸ ಇಲ್ಲದೇ ಉಪವಾಸ ಬೀಳುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇದು ಹೀಗೇ ಮುಂದುವರಿದರೆ ಜಿಲ್ಲೆಯ ಆರ್ಥಿಕತೆಗೆ ಪರಿಣಾಮ ಬೀರಲಿದೆ. ಈ ಸಮಸ್ಯೆ ಬಗ್ಗೆ ಜಿಲ್ಲಾಡಳಿತ ಹಾಗೂ ಸರ್ಕಾರದ ಗಮನಕ್ಕೆ ತಂದರು, ಸಚಿವ ಸಂಪುಟ ಸಭೆ ನಡೆಸಿ ಈ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ. ಈ ಸಮಸ್ಯೆ ಶೀಘ್ರ ಬಗೆಹರಿಸದಿದ್ದರೆ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಲಿದೆ ಎಂದರು.
ಸ್ಯಾಂಡ್ ಬಝಾರ್ ಆ್ಯಪ್ ನಲ್ಲೂ ಮರಳು ಲಭ್ಯವಿಲ್ಲ
ಜಿಲ್ಲಾಡಳಿತ ಸ್ಯಾಂಡ್ ಬಝಾರ್ ಆ್ಯಪ್ ಮೂಲಕ ಮರಳು ಪಡೆಯಲು ತಿಳಿಸಿದೆ. ಆದರೆ ಈಗ ಆ್ಯಪ್‌ನಲ್ಲೂ ಮರಳು ಇಲ್ಲ. ಗಣಿ ಇಲಾಖೆಯವರು ಈ ಬಗ್ಗೆ ಸ್ಪಂದಿಸುತ್ತಿಲ್ಲ. ಆ್ಯಪ್ ಮೂಲಕ ಸಿಗುವ ಮರಳಿನ ದರ ಹೆಚ್ಚಾಗಿದ್ದು, ಮರಳಿನ ಗುಣಮಟ್ಟ ಮನೆ ನಿರ್ಮಾಣಕ್ಕೆ ಪೂರಕವಾಗಿಲ್ಲ ಎಂದು ಉಪಾಧ್ಯಕ್ಷ ಸತೀಶ್ ಕುಮಾರ್ ಹೇಳಿದರು.
ಇದನ್ನೂ ಓದಿ: ಕೇಂದ್ರದಿಂದ ಮಂಗಳೂರಿಗೆ 100 ಎಲೆಕ್ಟ್ರಿಕ್ ಬಸ್: ಸಂಸದ ಕ್ಯಾ.ಬ್ರಿಜೇಶ್ ಚೌಟ
ಸುದ್ದಿಗೋಷ್ಠಿಯಲ್ಲಿ ಸಂಘದ ಜೊತೆ ಕಾರ್ಯದರ್ಶಿ ಲಕ್ಷ್ಮಿ ಪ್ರಸಾದ್, ಕೋಶಾಧಿಕಾರಿ ಸುರೇಶ್ ಜೆ, ಸದಸ್ಯರಾದ ಚಂದನ್, ಕೇಶವ ಚನ್ನಪ್ಪ ಮೊದಲಾದವರು ಇದ್ದರು.