2025ರ ಮೊದಲ ಐದು ತಿಂಗಳಲ್ಲಿ 453 ಜನರು ರೈಲ್ವೆ ಹಳಿಗಳ ಮೇಲೆ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ರೈಲ್ವೆ ಬಾಂಬೆ ಹೈಕೋರ್ಟ್‌ಗೆ ತಿಳಿಸಿದೆ. ಬಾಂಬೆ ಹೈಕೋರ್ಟ್‌ನ ನಿರ್ದೇಶನದಂತೆ ಅಫಿಡವಿಟ್ ಸಲ್ಲಿಸಿ ಕೇಂದ್ರ ಈ ಮಾಹಿತಿ ನೀಡಿದೆ.
ವಕೀಲೆ ಅನಾಮಿಕಾ ಮಲ್ಹೋತ್ರಾ ಅವರ ಮೂಲಕ ಈ ಅಫಿಡವಿಟ್ ಸಲ್ಲಿಸಲಾಗಿದೆ. ಅತಿಕ್ರಮಣ, ಹಳಿಗಳನ್ನು ದಾಟುವಾಗ ಕೆಲವರು ಸಾವನ್ನಪ್ಪಿದ್ದರೆ, ಇನ್ನು ಕೆಲವರು ಸ್ಥಳೀಯ ರೈಲುಗಳಿಂದ ಬಿದ್ದು ಮೃತಪಟ್ಟಿದ್ದಾರೆ ಎಂದು ಕೇಂದ್ರ ರೈಲ್ವೆ ಹೇಳಿದೆ.
ಇದನ್ನು ಓದಿದ್ದೀರಾ? ಮುಂಬೈ | ಪ್ರಯಾಣಿಕರ ದಟ್ಟಣೆ: ರೈಲಿನಿಂದ ಬಿದ್ದು ಐವರು ಸಾವು
2025ರಲ್ಲಿ ಹಳಿಗಳನ್ನು ದಾಟುವಾಗ 293 ಮಂದಿ ಮತ್ತು ಚಲಿಸುವ ರೈಲುಗಳಿಂದ ಬಿದ್ದು 150 ಮಂದಿ ಸಾವನ್ನಪ್ಪಿದ್ದಾರೆ ಎಂದು ದತ್ತಾಂಶದಲ್ಲಿ ಉಲ್ಲೇಖಿಸಲಾಗಿದೆ. ಕಳೆದ ವರ್ಷ(2024) ಹಳಿಗಳನ್ನು ದಾಟುವಾಗ ಸಾವನ್ನಪ್ಪಿದವರ ಸಂಖ್ಯೆ 674 ಆಗಿದ್ದರೆ, ರೈಲುಗಳಿಂದ ಬಿದ್ದು 387 ಜನರು ಸಾವನ್ನಪ್ಪಿದ್ದಾರೆ. ಹಾಗೆಯೇ 2023ರಲ್ಲಿ, ಹಳಿಗಳನ್ನು ದಾಟುವಾಗ ಒಟ್ಟು 782 ಜನರು ಸಾವನ್ನಪ್ಪಿದ್ದರೆ, 431 ಮಂದಿ ಚಲಿಸುವ ರೈಲುಗಳಿಂದ ಬಿದ್ದು ಸಾವನ್ನಪ್ಪಿದ್ದಾರೆ.
ನ್ಯಾಯಾಲಯದ ನಿರ್ದೇಶನದ ಮೇರೆಗೆ ಕೇಂದ್ರ ರೈಲ್ವೆ ಅಫಿಡವಿಟ್ ಸಲ್ಲಿಸಿದೆ. ಜೂನ್ 9ರಂದು ಮುಂಬ್ರಾದಲ್ಲಿ ಎರಡು ಸ್ಥಳೀಯ ರೈಲುಗಳಿಂದ ಎಂಟು ಪ್ರಯಾಣಿಕರು ಬಿದ್ದು ಐವರು ಸಾವನ್ನಪ್ಪಿದ ಘಟನೆಯ ನಂತರ ಹೈಕೋರ್ಟ್ ವರದಿ ಕೇಳಿದೆ.
ಮುಂಬ್ರಾ ಘಟನೆಯ ತನಿಖೆಗಾಗಿ ತಂಡವನ್ನು ರಚಿಸಲಾಗಿದ್ದು ತನಿಖೆ ಇನ್ನೂ ಮುಂದುವರೆದಿದೆ ಎಂದು ಕೇಂದ್ರ ರೈಲ್ವೆ ನ್ಯಾಯಾಲಯಕ್ಕೆ ತಿಳಿಸಿದೆ.
