ಪ್ರೀತಿಸುವಂತೆ ಯುವಕ ನೀಡಿದ ಕಿರುಕುಳ ತಾಳಲಾರದೇ ಅಪ್ರಾಪ್ತ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಮುಡಬಿ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮವೊಂದರಲ್ಲಿ ನಡೆದಿದೆ.
ಬಸವಕಲ್ಯಾಣ ನಗರದ ಖಾಸಗಿ ಕಾಲೇಜಿನಲ್ಲಿ ಪ್ರಥಮ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದ 17 ವರ್ಷದ ಬಾಲಕಿಗೆ ಅದೇ ಗ್ರಾಮದ ಯುವಕ ಪ್ರೀತಿಸುವಂತೆ ಕಿರುಕುಳ ನೀಡುತ್ತಿದ್ದ, ʼನಿನಗೆ ಮದುವೆ ಮಾಡಿಕೊಳ್ಳುತ್ತೇನೆʼ ಎಂದು ಸದಾ ಪೀಡಿಸುತ್ತಿದ್ದನು ಎಂದು ಬಾಲಕಿಯ ಪೋಷಕರು ದೂರಿದ್ದಾರೆ.
ʼಹಲವು ಬಾರಿ ಯುವಕನಿಗೆ ಬುದ್ಧಿವಾದ ಹೇಳಿದರೂ ಮತ್ತೆ ಸತಾಯಿಸುತ್ತಿದ್ದನು. ಯುವಕನ ಕಿರುಕುಳ ತಾಳಲಾರದೇ ಮನೆಯ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ʼಸಾವಿಗೆ ಯುವಕನೇ ಕಾರಣʼ ಎಂದು ಇರುವ ಚೀಟಿ ಬಾಲಕಿ ತುಟಿಯಲ್ಲಿ ಇಟ್ಟುಕೊಂಡು ನೇಣು ಹಾಕಿಕೊಂಡಿದ್ದಾಳೆʼ ಎಂದು ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ : ಬೀದರ್ | ನೇಣು ಬಿಗಿದು ಸರ್ಕಾರಿ ಶಾಲೆ ಶಿಕ್ಷಕ ಆತ್ಮಹತ್ಯೆ
ಯುವಕ ಮತ್ತು ಆತನ ತಾಯಿ ನೀಡಿದ ಮಾನಸಿಕ ಕಿರುಕುಳ, ಬೆದರಿಕೆಯಿಂದ ಮನನೊಂದು ನನ್ನ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇಬ್ಬರ ವಿರುದ್ಧ ಕಾನೂನು ಕ್ರಮಕೈಗೊಂಡು ನ್ಯಾಯ ಒದಗಿಸಬೇಕೆಂದು ಮೃತಳ ತಂದೆ ನೀಡಿದ ದೂರಿನ ಮೇರೆಗೆ ಇಬ್ಬರ ವಿರುದ್ಧ ಮುಡಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.