ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಮಾರಡಗಿ ಎಸ್.ಎ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಬಿಸಿಯೂಟ ಸೇವಿಸಿ 70ಕ್ಕೂ ಅಧಿಕ ಮಕ್ಕಳು ಅಸ್ವಸ್ಥಗೊಂಡ ಘಟನೆ ನಡೆದಿದೆ.
ಮಕ್ಕಳಿಗೆ ವಾಂತಿ, ಜ್ವರ ಕಾಣಿಸಿಕೊಂಡಿದೆ. ಸಮೀಪದ ಗಂವ್ಹಾರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಿ, ಬಳಿಕ ಜೇವರ್ಗಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ʼಶಾಲೆಯಲ್ಲಿ ಒಟ್ಟು 116 ಮಕ್ಕಳ ಪ್ರವೇಶ ಪಡೆದಿದ್ದು, ಮಂಗಳವಾರ 70 ಮಕ್ಕಳು ಬಿಸಿಯೂಟ ಮಾಡಿದ್ದಾರೆ. ಮಧ್ಯಾಹ್ನ 3 ಗಂಟೆಯ ನಂತರ ಮಕ್ಕಳಲ್ಲಿ ವಾಂತಿ ಕಾಣಿಸಿಕೊಂಡ ಬಳಿಕ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಊಟದಲ್ಲಿ ಖಾರದ ಪುಡಿಯಿಂದ ಸಮಸ್ಯೆ ಉಂಟಾಗಿರಬಹುದು ಎನ್ನಲಾಗಿದೆ.
ʼವಾಂತಿ ಮಾತ್ರ ಇರುವುದರಿಂದ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದ್ದು, ಮಕ್ಕಳು ಚೇತರಿಸಿಕೊಳ್ಳುತ್ತಿದ್ದಾರೆ. ಪಾಲಕರು ಭಯಪಡುವ ಅಗತ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
“ಕಲಬುರಗಿ ಜಿಲ್ಲೆಯ ಮಾರಡಗಿ ಎಸ್ ಎ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನದ ಬಿಸಯೂಟ ಸೇವಿಸಿ ಅಸ್ವಸ್ಥವಾಗಿ 21 ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲಾಗಿದ್ದಾರೆಂದು ದಲಿತ ಸೇನೆ ಮುಖಂಡ ಸ್ಥಳೀಯ ನಿವಾಸಿ ಪ್ರಕಾಶ ಅವರು ಈ ದಿನ.ಕಾಮ್‌ಗೆ ತಿಳಿಸಿದರು.
ಶಾಲೆಯ ಮುಝ್ಯ ಶಿಕ್ಷಕಿ ತ್ರಿವೇಣಿ ಅವರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಬಿಸಿ ಊಟ ಸೇವಿಸಿದ ಬಳಿಕ ನಾಲ್ಕು ಮಕ್ಕಳಿಗೆ ವಾತಿಭೇದಿಯಿಂದ ತಲೆಸುತ್ತು ಬಂದು ಬಿದ್ದಿದ್ದ ಮಕ್ಕಳನ್ನು ಗಂವ್ಹಾರ ಸರ್ಕಾರಿ ಆಸ್ಪತ್ರೆ ಕರೆದುಕೊಂಡು ಹೋಗಿದ್ದೆವು. ಅಲ್ಲಿ ಚಿಕಿತ್ಸೆ ಕೊಡಿಸಿದ್ದೇವೆ. ಇನ್ನುಳಿದ ಮಕ್ಕಳಿಗೆ ಯಾವುದೇ ರೀತಿಯ ತೊಂದರೆ ಆಗಿಲ್ಲ. ಆದರೆ ಆ ನಾಲ್ಕು ಮಕ್ಕಳು ಮೂರ್ಚೆ ಹೋಗಿದ್ದನ್ನು ಕಂಡು ಇನ್ನುಳಿದ ಮಕ್ಕಳು ಆತಂಕಕ್ಕೆ ಒಳಗಾಗಿ, ನಮಗೂ ಹಾಗೆ ಆಗಬಹುದೆಂಬ ಭಯದಿಂದ ಆಸ್ಪತ್ರೆಗೆ ಸೇರಿಕೊಂಡಿದ್ದಾರೆ” ಎಂದು ತಿಳಿಸಿದರು.
ಗಂವ್ಹಾರ ಗ್ರಾಮದ ಸ್ಟಾಫ್ ನರ್ಸ್ ಶೀಲಾ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಅಸ್ಸ್ಥರಾಗಿದ್ದ ನಾಲ್ಕು ಮಕ್ಕಳಿಗೆ ಪ್ರಥಮ ಚಿಕಿತ್ಸೆ ಮಾಡಿದ್ದೇವೆ ಸದ್ಯಕ್ಕೆ ಯಾವುದೇ ತೊಂದರೆ ಇಲ್ಲ. ಒಬ್ಬ ವಿದ್ಯಾರ್ಥಿನಿಗೆ ಸ್ವಲ್ಪ ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆ ಇದ್ದಿದ್ದರಿಂದ ಜೇವರ್ಗಿ ತಾಲೂಕು ಆಸ್ಪತ್ರೆಗೆ ಕಳುಹಿಸಿರುವೆ. ಒಟ್ಟು 25 ಮಕ್ಕಳು ಆಸ್ಪತ್ರೆಗೆ ಬಂದಿದ್ದು, ಎಲ್ಲರನ್ನೂ ಜೇವರ್ಗಿ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ” ಎಂದರು.
ಬಿಸಿಯೂಟ ಮೇಲಧಿಕಾರಿ ಎ ಡಿ ಬಾಬು ಚಿತ್ತಾಪುರಕರ್ ಮಾತನಾಡಿ, “ಶಾಲೆಯಲ್ಲಿ ಒಟ್ಟು 116 ಮಕ್ಕಳ ದಾಖಲಾತಿ ಇದ್ದು, ಇಂದು ಶಾಲೆಯಲ್ಲಿ 109 ವಿದ್ಯಾರ್ಥಿಗಳು ಹಾಜರಿದ್ದರು. ಅದರಲ್ಲಿ 68 ವಿದ್ಯಾರ್ಥಿಗಳು ಮಧ್ಯಾಹ್ನದ ಬಿಸಿಯೂಟ ಅನ್ನ ಸಾಂಬಾರ್, ಬಾಳೆ ಹಣ್ಣು ಸೇವಿಸಿದ ಬಳಿಕ ನಾಲ್ಕು ವಿದ್ಯಾರ್ಥಿಗಳಿಗೆ ವಾಂತಿಭೇದಿಯಾಗಿ ತಲೆಸುತ್ತು ಬಂದು ಬಿದ್ದರು. ಈ ಹಿನ್ನೆಲೆಯಲ್ಲಿ ಸುಮಾರು ನಾಲ್ಕು ಗಂಟೆಗೆ ಗಂವ್ಹಾರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದೇವೆ. ನಂತರ 20-25 ಮಕ್ಕಳು ಆಸ್ಪತ್ರೆಗೆ ಬಂದಿದ್ದರಿಂದ ಎಲ್ಲ ವಿದ್ಯಾರ್ಥಿಗಳನ್ನು ಆಂಬುಲೆನ್ಸ್ ಮೂಲಕ ಕರೆತಂದು ಜೇವರ್ಗಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈಗ ಎಲ್ಲ ವಿದ್ಯಾರ್ಥಿಗಳೂ ಕ್ಷೇಮವಾಗಿದ್ದಾರೆ” ಎಂದು ಪ್ರತಿಕ್ರಿಯಿಸಿದರು.
ಜಿಲ್ಲಾ ವೈದ್ಯಾಧಿಕಾರಿ ಡಾ. ಸಿದ್ದು ಪಾಟೀಲ್ ಮಾತನಾಡಿ, “ಒಟ್ಟು 21 ವಿದ್ಯಾರ್ಥಿಗಳು ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಸಮಸ್ಯೆಗೆ ಕಾರಣ ತಿಳಿದುಬಂದಿಲ್ಲ. ಆಹಾರ, ನೀರು(ಫುಡ್ ವಾಟರ್) ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ಕಾರಣ ತಿಳಿಯುತ್ತದೆ. ಸದ್ಯಕ್ಕೆ ವಿದ್ಯಾರ್ಥಿಗಳಿಗೆ ಚಿಕಿತ್ಸೆ ನೀಡುತ್ತಿದ್ದೇವೆ. ಎಲ್ಲರೂ ಕ್ಷೇಮವಾಗಿದ್ದಾರೆ” ಎಂದರು.
“ಎಲ್ಲ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯ ಕುರಿತು ವಿಚಾರಿಸಿದ್ದಾರೆ. ಅಲ್ಲದೆ
ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಬಿಸಿಯೂಟ ಸೇವಿಸಿದ ವಿದ್ಯಾರ್ಥಿಗಳ ಮಾಹಿತಿ ಪಡೆದು ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸುವ ಪ್ರಯತ್ನ ಮಾಡುತ್ತಿದ್ದಾರೆ” ಎಂದು ತಿಳಿಸಿದರು.
ಘಟನೆಗೆ ಸಂಬಂಧಿಸಿದಂತಡೆ ಈ ದಿನ.ಕಾಮ್ ಜೇವರ್ಗಿ ಶಾಸಕ ಹಾಗೂ ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್ ಸಿಂಗ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದು, ಶಾಸಕರು ಕರೆಗೆ ಲಭ್ಯವಾಗಿರುವುದಿಲ್ಲ.
ಇದನ್ನೂ ಓದಿ : ಕಲಬುರಗಿ | ಈಶಾನ್ಯ ವಲಯಕ್ಕೆ ಚಂದ್ರಗುಪ್ತ ನೂತನ ಐಜಿಪಿ
ಸುದ್ದಿ ತಿಳಿದು ಸ್ಥಳಕ್ಕೆ ಡಿಡಿಪಿಐ ಸೂರ್ಯಕಾಂತ ಮದಾನೆ, ತಾ.ಪಂ ಇಒ ರವಿಚಂದ್ರರೆಡ್ಡಿ, ಆರ್‌ಸಿಎಚ್‌ಒ ಡಾ.ಸಿದ್ದು ಪಾಟೀಲ, ಕ್ಷೇತ್ರ ಸಮನ್ವಯಾಧಿಕಾರಿ ಎಸ್ ಟಿ ಬಿರಾದಾರ, ಬಿಸಿಯೂಟ ಸಹಾಯಕ ನಿರ್ದೇಶಕ ಬಾಬುರಾವ, ತಾಲೂಕ ವೈದ್ಯಾಧಿಕಾರಿ ಡಾ. ಉಮೇಶ್ ಶರ್ಮ, ತಹಶೀಲ್ದಾರ ಮಲ್ಲಣ್ಣ ಯಲಗೋಡ, ಡಿವೈಎಸ್‌ಪಿ ಎಸ್. ಮೇಘಣ್ಣನವರ್, ಪಿಎಸ್ಐ ಗಜಾನನ ಬಿರಾದಾರ್, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದ್ದಾರೆಂದು ತಿಳಿದುಬಂದಿದೆ.