ಬೀದರ ನಗರ ಸೇರಿದಂತೆ ಜಿಲ್ಲೆಯ ನಾನಾ ಕಡೆ ಹೋಟೆಲ್, ಉಪಹಾರ ಕೇಂದ್ರ, ಕುಡಿಯುವ ನೀರಿನ ಘಟಕಗಳು ತಲೆ ಎತ್ತಿದ್ದು, ಆಹಾರ ಸುರಕ್ಷತೆ ನಿಯಮಗಳೇ ಅನ್ವಯವಾಗುತ್ತಿಲ್ಲ. ಆದರೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳು ಕಂಡೂ ಕಾಣದಂತೆ ಮೌನವಹಿಸಿದ್ದಾರೆ ಎಂದು ಕರ್ನಾಟಕ ಯುವ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಗುರುದಾಸ ಅಮದಾಲಪಾಡ ದೂರಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಮಂಗಳವಾರ ಜಿಲ್ಲಾಡಳಿತಕ್ಕೆ ಸಲ್ಲಿಸಿದರು.
ʼಜಿಲ್ಲಾ ಹಾಗೂ ತಾಲ್ಲೂಕಿನ ಪ್ರತಿಯೊಂದು ಬೀದಿಯಲ್ಲಿ ತಿಂಡಿ ತಿನಿಸುಗಳು ಹಾಗೂ ಹೋಟೆಲ್‌ಗಳಲ್ಲಿ ಸಿದ್ಧಪಡಿಸುವ ಉಪಹಾರ ಗುಣಮಟ್ಟ ಇಲ್ಲ. ಇನ್ನು ನೈರ್ಮಲ್ಯ ಕಾಪಾಡದೇ ಇರುವುದು ಕಂಡು ಬರುತ್ತಿದೆ. ಇದನ್ನು ಪರೀಕ್ಷಿಸುವುದು ಜಿಲ್ಲಾ ಅಂಕಿತಾಧಿಕಾರಿಗಳ ಕರ್ತವ್ಯವಿದೆ. ಆದರೆ, ಕಲಬೆರಕೆ ಆಹಾರ ಪರೀಕ್ಷೆಗೆ ಒಳಪಡಿಸಿ ಕ್ರಮಕೈಗೊಳ್ಳದೆ ಹೋಟೆಲ್ ಮಾಲಿಕರ ಜೊತೆ ಕೈಜೋಡಿಸಿ ಭ್ರಷ್ಟಾಚಾರದಲ್ಲಿ ತೊಡಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆʼ ಎಂದು ಆರೋಪಿಸಿದ್ದಾರೆ.
ʼಹೋಟೆಲ್ ವ್ಯಾಪಾರಿಗಳು, ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಬೀದಿ ಬದಿಯ ತಿಂಡಿ ತಿನಿಸು ತಯ್ಯಾರಿಸುವ ಸಣ್ಣಪುಟ್ಟ ವ್ಯಾಪಾರಿಗಳು ಆಹಾರ ಸುರಕ್ಷತೆಯ ಇಲಾಖೆಯಿಂದ ಕಡ್ಡಾಯವಾಗಿ ಪರವಾನಿಗೆ ಪಡೆಯಬೇಕು. ಆದರೆ ಹಲವು ಕಡೆಯಲ್ಲಿರುವ ತಿಂಡಿ ತಿನಿಸು ತಯಾರಿಕಾ ಅಂಗಡಿಗಳು ಆಹಾರ ಸುರಕ್ಷತೆ ನಿಯಮಗಳು ಗಾಳಿಗೆ ತೂರಿ ಮನಬಂದಂತೆ ಆಹಾರ ಸಿದ್ಧಪಡಿಸುತ್ತಿದ್ದಾರೆʼ ಎಂದು ದೂರಿದರು.
ಇದನ್ನೂ ಓದಿ : ಬೀದರ್ | ಪ್ರೀತಿಸುವಂತೆ ಯುವಕನಿಂದ ಕಿರುಕುಳ : ಅಪ್ರಾಪ್ತೆ ನೇಣಿಗೆ ಶರಣು
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಇಲಾಖೆ ಅಂಕಿತಾಧಿಕಾರಿ ಸಂತೋಷ ಕಾಳೆ ಅವರ ನಿರ್ಲಕ್ಷ್ಯದಿಂದ ಜಿಲ್ಲೆಯ ಜನರು ಅಸುರಕ್ಷಿತ ಆಹಾರ ಹಾಗೂ ನೀರು ಸೇವಿಸಿ ಹಲವು ರೋಗಗಳಿಗೆ ತುತ್ತಾಗುತ್ತಿದ್ದಾರೆ. ಈ ಕುರಿತು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.