ಉತ್ತರ ಕನ್ನಡ ಜಿಲ್ಲೆಯ ಜೋಯ್ಡಾ ತಾಲೂಕಿನ ರಾಮನಗರದ ಹನುಮಾನ ಗಲ್ಲಿಯ ರೈತ ಮಾರುತಿ ಮಳೇಕರ (45) ಎಂಬುವವರು ಹೊಲದಿಂದ ಮನೆಗೆ ವಾಪಸ್ಸಾಗುತ್ತಿದ್ದ ವೇಳೆ ಕರಡಿ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿದ ಘಟನೆ ನಡೆದಿದೆ.
ಗಾಯಾಳುವಿಗೆ ರಾಮನಗರದ ಸರಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ ಆಸ್ಪತ್ರೆಗೆ ರವಾನಿಸಲಾಗಿದೆ. ಮಾರುತಿ ಮಳೇಕರ (45) ಸಿರಗಾಂವ ಗ್ರಾಮ ಪಂಚಾಯತ ಪ್ರದೇಶದ ನಾನೆಗಾಳಿಯ ನಿವಾಸಿ.
ಹೊಲದಲ್ಲಿ ತಮ್ಮ ನಿತ್ಯದ ಕೆಲಸ ಮುಗಿಸಿ ರಾಮನಗರದ ಹನುಮಾನ ಗಲ್ಲಿಯ ಮನೆಗೆ ವಾಪಾಸ್ಸಾಗುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ. ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಕರಡಿ ಹಠಾತ್ತನೆ ದಾಳಿ ನಡೆಸಿದ್ದು, ತಲೆ ಹಾಗೂ ಕೈ ಕಾಲುಗಳಿಗೆ ಗಂಭೀರ ಗಾಯಗಳಾಗಿವೆ.
ಇದನ್ನೂ ಓದಿ: ಉತ್ತರ ಕನ್ನಡ | ನಗರಸಭೆ ಅಧಿಕಾರಿಗಳಿಂದಲೇ ನೀರಿನ ಪೈಪ್ ಕಳ್ಳತನ
ಮಾರುತಿ ಕರಡಿಯೊಂದಿಗೆ ಕಾದಾಡಿ ಹೇಗೂ ತಪ್ಪಿಸಿಕೊಂಡು ಬಂದಿದ್ದಾರೆ. ಕರಡಿಯಿಂದ ದಾಳಿಗೆ ಒಳಗಾಗಿ ರಕ್ತದ ಮಡುವಿನಲ್ಲಿದ್ದರೂ ತನ್ನ ಮನೆಯವರೆಗೆ ಸುಮಾರು 4 ಕಿ.ಮೀ ದೂರ ನಡೆದುಕೊಂಡು ಹೋಗಿರುವುದು ಆಶ್ಚರ್ಯಕರವಾಗಿದೆ ಎಂದು ಸ್ಥಳೀಯರೆನ್ನುತ್ತಾರೆ.