“ಈ ಮಟ್ಕಾ ಆಟದಿಂದ ಸಾಕಷ್ಟು ಯುವಕರು ದಾರಿ ತಪ್ಪುತ್ತಿದ್ದಾರೆ. ಇನ್ನೂ ಕೆಲವರು ತಮ್ಮ ಕೆಲಸ ಬಿಟ್ಟು ಈ ಆಟಗಳಲ್ಲಿ ಮಗ್ನರಾಗಿದ್ದಾರೆ. ಕೂಡಲೇ ಮಟ್ಕಾ ದಂಧೆಗೆ ಕಡಿವಾಣ ಹಾಕಬೇಕು” ಎಂದು ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಅಧ್ಯಕ್ಷ ಹಾಲೇಶ ಹಾಲಣ್ಣವರ ಒತ್ತಾಯಿಸಿದರು.
ಹಾವೇರಿ ಜಿಲ್ಲೆಯ ಹಾವೇರಿ ತಾಲೂಕು ಗುತ್ತಲ ಪಟ್ಟಣ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ರಾಜಾರೋಷವಾಗಿ ನಡೆದಿರುವ ಮಟ್ಕಾ(ಓಸಿ) ದಂಧೆಗೆ ಕಡಿವಾಣ ಹಾಕುವಂತೆ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಗುತ್ತಲ ಪೊಲೀಸ್ ಠಾಣೆಯ ಪಿ ಎಸ್ ಐ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು.
“ಹಾವೇರಿ ತಾಲೂಕು ಸುತ್ತಮುತ್ತಲಿನ ಸಣ್ಣ ಸಣ್ಣ ಗ್ರಾಮಗಳ ಗೂಡಂಗಡಿಗಳಲ್ಲಿ, ಮಟ್ಕಾ ದಂಧೆ ಗುತ್ತಲ ಪಟ್ಟಣದಲ್ಲಿ ಪ್ರಮುಖ ನಾಲ್ಕು ರಸ್ತೆಯ ಬಾಡಿಗೆ ಅಂಗಡಿ, ಬೀಡಿ ಅಂಗಡಿ, ಟೀ ಅಂಗಡಿಗಳಲ್ಲಿ ರಾಜಾರೋಷವಾಗಿ ಮಟ್ಕಾ ಚೀಟಿ ಬರೆಯುತ್ತಿದ್ದಾರೆ. ಮಟ್ಕಾ ದಂಧೆ ಈಗ ಹೈಟೆಕ್ ಸ್ಪರ್ಷ ಪಡೆದುಕೊಂಡಿದ್ದು, ಕೈ ಚೀಟಿ ಬದಲಾಗಿ ವಾಟ್ಸ್ ಆಪ್ ಮೂಲಕ ಬರೆದುಕೊಳ್ಳುತ್ತಿದ್ದಾರೆ. ಹೀಗಾಗಿ ಗುತ್ತಲ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಯುವಕರು, ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು ಈ ದಂಧೆಗೆ ಬಲಿಯಾಗುತ್ತಿದ್ದಾರೆ” ಎಂದು ಹೇಳಿದರು.
“ಮಟ್ಕಾ ರೂ. ಒಂದಕ್ಕೆ ರೂ. ಎಂಬತ್ತು ದುಡಿಯುವ ಆಸೆಗೆ ಬಿದ್ದು ಜನರು ಹಣ ಕಳೆದುಕೊಳ್ಳುತ್ತಿದ್ದಾರೆ. ಓಸಿ(ಓಪನ್ ಕ್ಲೋಸ್) ಎನ್ನುವ ಸಂಖ್ಯೆಗಳ ಆಟದ ಮಟ್ಕಾ ದಂಧೆಯನ್ನು ದೇಶದಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಹೀಗಿದ್ದರು ಈ ದಂಧೆ ವ್ಯಾಪ್ತಿ ವಿಸ್ತಾರಗೊಳ್ಳುತ್ತಲೇ ಇದೆ. ಈ ಪೈಕಿ ಸಟಕಾಮಟ್ಕಾ ಡಾಟ್ ಕಾಮ್ ವೆಬ್ ಸೈಟ್ ಹೆಚ್ಚು ಜಾಗೃತವಾಗಿದೆ. ದಿನಕ್ಕೆ ಎರಡು ಹಂತದಲ್ಲಿ ಕಲ್ಯಾಣಿ(ಮಧ್ಯಾಹ್ನದ ಆಟ), ಬಾಂಬೆ(ರಾತ್ರಿ ಆಟ) ಹೀಗೆ ಮಟ್ಕಾ ದಂಧೆ ಜೋರಾಗಿ ನಡೆಯುತ್ತಿದೆ” ಎಂದರು.
“ಈ ಮಟ್ಕಾ ದಂಧೆಯಿಂದ ಅನೇಕರು ಹಲವಾರು ಕಡೆ ಸಾಲಾ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಅವರ ಕುಟುಂಬದ ತಂದೆ-ತಾಯಿ, ಹೆಂಡತಿ ಮಕ್ಕಳೊಡನೆ ಜಗಳ ಮಾಡುವುದು, ಮನೆಯಲ್ಲಿರುವ ಸಾಮಾನುಗಳನ್ನು ಮಾರಿ ಸಾಲಗಾರರಿಗೆ ಕೊಡುವ ಪರಸ್ಥಿತಿ ಎದುರಾಗಿದೆ. ಇದರಿಂದ ಮಹಿಳೆಯರು ಕಷ್ಟದಲ್ಲಿ ಜೀವನ ನಡೆಸುವಂತಾಗಿದೆ. ಹಾಗೂ ಕೆಲವೊಂದು ಕುಟುಂಬಗಳು ಬೀದಿಗೆ ಬರುವಂತಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಗದಗ | ಜಿಲ್ಲೆಗೆ ನೂತನ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ನೇಮಕ
“ಯುವಕರ ಭವಿಷ್ಯ ಹಾಗೂ ಮಹಿಳೆಯರ ಜೀವನ ಕಾಪಾಡುವ ಸಲುವಾಗಿ ಪೊಲೀಸ್ ಅಧಿಕಾರಿಗಳು ಈ ಮಟ್ಕಾ(ಓಸಿ) ದಂಧೆಗೆ ಕಡಿವಾಣ ಹಾಕಬೇಕು” ಎಂದು ಒತ್ತಾಯಿಸಿದರು.
ಈ ಮನವಿಯಲ್ಲಿ ಕರವೇ ಮುಖಂಡರು ಉಪಸ್ಥಿತರಿದ್ದರು.