ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯನ್ನು ಪುಸಲಾಯಿಸಿ ಅತ್ಯಾಚಾರ ಎಸಗಿದ ಆರೋಪದಡಿ ಇಬ್ಬರು ಕಾಲೇಜು ಉಪನ್ಯಾಸಕರು ಸೇರಿದಂತೆ ಮೂವರು ಆರೋಪಿಗಳನ್ನು ಬೆಂಗಳೂರಿನ ಮಾರತಹಳ್ಳಿ ಪೊಲೀಸರು ಬಂಧಿಸಿದ್ಧಾರೆ.
ಸಂತ್ರಸ್ತ ಯುವತಿಯ ಪೋಷಕರು ನೀಡಿದ ದೂರು ಆಧರಿಸಿ ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕ ನರೇಂದ್ರ, ಜೀವಶಾಸ್ತ್ರ ವಿಭಾಗದ ಉಪನ್ಯಾಸಕ ಸಂದೀಪ್ ಹಾಗೂ ಸಹಚರ ಅನೂಪ್ ಎಂಬುವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ಧಾರೆ.
ಖಾಸಗಿ ಕಾಲೇಜಿನಲ್ಲಿ ಪಿಯು ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಗೆ ಉಪನ್ಯಾಸಕ ನೋಟ್ಸ್ ನೀಡುವ ನೆಪದಲ್ಲಿ ಆತ್ಮೀಯತೆ ಬೆಳೆಸಿಕೊಂಡಿದ್ದರು. ಬಳಿಕ ಮೊಬೈಲ್ ನಂಬರ್ ಪಡೆದು ಯುವತಿ ಜೊತೆ ಚಾಟ್ ಮಾಡಲು ಆರಂಭಿಸಿದ್ದರು. ಕ್ರಮೇಣ ಸ್ನೇಹ ಬೆಳೆಸಿ ಬಳಿಕ ಮಾರತಹಳ್ಳಿಯಲ್ಲಿರುವ ಸ್ನೇಹಿತನ ರೂಮ್ಗೆ ಕರೆತಂದು ಅತ್ಯಾಚಾರವೆಸಗಿದ್ದರು. ಬಳಿಕ ಕೃತ್ಯದ ಬಗ್ಗೆ ಯಾರಿಗೂ ತಿಳಿಸದಂತೆ ಬೆದರಿಕೆ ಹಾಕಿದ್ದ ಎಂದು ಪೊಲೀಸರು ತಿಳಿಸಿದ್ಧಾರೆ.

ಕೆಲ ದಿನಗಳ ಬಳಿಕ ಜೀವಶಾಸ್ತ್ರ ವಿಷಯದ ಉಪನ್ಯಾಸಕನಿಗೆ ಇನ್ನೊಬ್ಬ ಉಪನ್ಯಾಸಕ ವಿಷಯ ತಿಳಿಸಿದ್ದರು. ಆ ಬಳಿಕ ಆ ಉಪನ್ಯಾಸಕ ಕೂಡ ಯುವತಿಯನ್ನ ಸಂಪರ್ಕಿಸಿ, ನಿನ್ನ ಫೋಟೊ ಹಾಗೂ ವಿಡಿಯೋ ಇದೆ ಎಂದು ಬೆದರಿಸಿದ್ದರು. ನಂತರ ವಿದ್ಯಾರ್ಥಿಯನ್ನು ಖಾಸಗಿ ಕಂಪನಿಯ ಉದ್ಯೋಗಿಯ ಮಾಲೀಕತ್ವದ ರೂಮ್ಗೆ ಕರೆತಂದು ಅತ್ಯಾಚಾರ ಎಸಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಇಬ್ಬರು ಉಪನ್ಯಾಸಕರಿಗೆ ಕಾಮನ್ ಫ್ರೆಂಡ್ ಆಗಿದ್ದ ಖಾಸಗಿ ಕಂಪನಿ ಉದ್ಯೋಗಿಯಾಗಿರುವ ಅನೂಪ್, ಯುವತಿಯನ್ನ ಉದ್ದೇಶಿಸಿ ಇಬ್ಬರೊಂದಿಗೆ ನೀನು ಮನೆಗೆ ಬಂದು ಹೋಗಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ತನ್ನೊಂದಿಗೆ ಸಹಕರಿಸದಿದ್ದರೆ ವಿಡಿಯೋ ಹರಿಬಿಡುವುದಾಗಿ ಬೆದರಿಕೆವೊಡ್ಡಿ ಅತ್ಯಾಚಾರ ಎಸಗಿದ್ದ ಎಂದು ಆರೋಪಿಸಲಾಗಿದೆ.
ಇದನ್ನು ಓದಿದ್ದೀರಾ? ದಲಿತ ಪ್ರಾಧ್ಯಾಪಕರಿಗೆ ತಾರತಮ್ಯ: ಬೆಂವಿವಿ ಕುಲಪತಿಯನ್ನು ಹಿಂತೆಗೆದುಕೊಳ್ಳಲು ಚಂದ್ರು ಪೆರಿಯಾರ್ ಆಗ್ರಹ
ಆರೋಪಿಗಳ ಹೇಯ ಕೃತ್ಯದ ಬಗ್ಗೆ ವಿದ್ಯಾರ್ಥಿನಿ ಮನನೊಂದಿದ್ದಳು. ಕೆಲ ದಿನಗಳ ಹಿಂದೆ ಕೃತ್ಯದ ಬಗ್ಗೆ ಪೋಷಕರಿಗೆ ಹೇಳಿ ಅಳಲು ತೋಡಿಕೊಂಡಿದ್ದರು. ಈ ಸಂಬಂಧ ರಾಜ್ಯ ಮಹಿಳಾ ಆಯೋಗಕ್ಕೆ ಯುವತಿ ಪೋಷಕರು ದೂರು ನೀಡಿದ್ದರು.
ಸಂತ್ರಸ್ತೆಯನ್ನ ಕೌನ್ಸೆಲಿಂಗ್ ನಡೆಸಿ ಆಯೋಗವು ಮಾರತಹಳ್ಳಿ ಪೊಲೀಸರಿಗೆ ದೂರು ನೀಡಿತ್ತು. ದೂರು ಸಂಬಂಧ ಮೂವರು ಆರೋಪಿಗಳನ್ನ ಬಂಧಿಸಲಾಗಿದೆ ಎಂದು ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ತಿಳಿಸಿದ್ದಾರೆ.
