ದೆಹಲಿಯ ಐದು ಖಾಸಗಿ ಶಾಲೆಗಳಿಗೆ ಬುಧವಾರ ಬೆಳಿಗ್ಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದೆ. ಕೂಡಲೇ ಅಧಿಕಾರಿಗಳು ಆವರಣವನ್ನು ತೆರವುಗೊಳಿಸಿದ್ದು ಸಂಪೂರ್ಣ ಪರಿಶೀಲನೆ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೂರು ದಿನಗಳಲ್ಲಿ ಹೀಗೆಯೇ ಹತ್ತು ಬಾರಿ ಬಾಂಬ್ ಬೆದರಿಕೆ ಇಮೇಲ್, ಕರೆ ಬಂದಿದೆ ಎಂದು ವರದಿಯಾಗಿದೆ.
ದ್ವಾರಕಾದ ಸೇಂಟ್ ಥಾಮಸ್ ಶಾಲೆಯನ್ನು ಸ್ಫೋಟಿಸುವುದಾಗಿ ಇಮೇಲ್ ಬಂದಿದ್ದು ಈ ಬಗ್ಗೆ ಬೆಳಿಗ್ಗೆ 5:26ಕ್ಕೆ ಅಗ್ನಿಶಾಮಕ ದಳಕ್ಕೆ ಕರೆ ಬಂದಿದೆ. ವಸಂತ್ ಕುಂಜ್‌ನ ವಸಂತ್ ವ್ಯಾಲಿ ಶಾಲೆಯಲ್ಲಿ ಬೆಳಿಗ್ಗೆ 6.30ಕ್ಕೆ, ಹೌಜ್ ಖಾಸ್‌ನಲ್ಲಿರುವ ಮದರ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಬೆಳಿಗ್ಗೆ 8.12ಕ್ಕೆ ಮತ್ತು ಪಶ್ಚಿಮ ವಿಹಾರ್‌ನಲ್ಲಿರುವ ರಿಚ್‌ಮಂಡ್ ಗ್ಲೋಬಲ್ ಶಾಲೆಯಲ್ಲಿ ಬೆಳಿಗ್ಗೆ 8.11ಕ್ಕೆ ಬೆದರಿಕೆ ಇಮೇಲ್‌ಗಳು ಬಂದಿವೆ ಎಂದು ಅಗ್ನಿಶಾಮಕ ಸೇವಾ ಅಧಿಕಾರಿ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ವಾರಣಾಸಿ-ಬೆಂಗಳೂರು ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ; ಕೆನಡಾ ಪ್ರಜೆ ವಶಕ್ಕೆ
ಲೋಧಿ ಎಸ್ಟೇಟ್‌ನಲ್ಲಿರುವ ಸರ್ದಾರ್ ಪಟೇಲ್ ವಿದ್ಯಾಲಯಕ್ಕೂ ಬೆದರಿಕೆ ಇಮೇಲ್ ಬಂದಿದೆ. ಶಾಲೆಯನ್ನು ಸಂಪೂರ್ಣ ಪರಿಶೀಲಿಸಲಾಗಿದ್ದು, ಯಾವುದೇ ಅನುಮಾನಾಸ್ಪದ ವಸ್ತು ಕಂಡುಬಂದಿಲ್ಲ ಎನ್ನಲಾಗಿದೆ. ಸದ್ಯ ಬಾಂಬ್ ಬೆದರಿಕೆ ಹಿನ್ನೆಲೆ ಈ ಶಾಲೆಗಳನ್ನು ಮುಚ್ಚಲಾಗಿದೆ.
ಸೇಂಟ್ ಥಾಮಸ್ ಶಾಲೆಗೆ 24 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಎರಡು ಬಾರಿ ಬಾಂಬ್ ಬೆದರಿಕೆ ಬಂದಿದೆ. ಒಟ್ಟಾರೆಯಾಗಿ, ನಗರದ ಒಂಬತ್ತು ಶಾಲೆಗಳಿಗೆ 10 ಬಾಂಬ್ ಬೆದರಿಕೆ ಇಮೇಲ್‌ಗಳು ಬಂದಿವೆ. ಸದ್ಯ ಹುಸಿ ಬಾಂಬ್ ಬೆದರಿಕೆಯೇ ಎಂಬುದು ಸ್ಪಷ್ಟವಾಗಿಲ್ಲ, ಸ್ಥಳದ ಪರಿಶೀಲನೆ, ತನಿಖೆ ನಡೆಯುತ್ತಿದೆ.
