ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ನಡೆದಿದ್ದ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯನ್ನು ಸಾಮಾಜಿಕ ಜಾಲತಾಣದಲ್ಲಿ ಅಶೋಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅಲಿ ಖಾನ್ ಮಹ್ಮದಾಬಾದ್ ಟೀಕಿಸಿದ್ದರು. ಅವರ ವಿರುದ್ಧ ದಾಖಲಾಗಿದ್ದ ಪ್ರಕರಣದ ತನಿಖೆಯಲ್ಲಿ ಹರಿಯಾಣ ಎಸ್‌ಐಟಿ ಸರಿಯಾದ ಮಾರ್ಗವನ್ನು ಅಳವಡಿಸಿಕೊಳ್ಳದೆ, ‘ತನ್ನನ್ನು ತಾನೇ ದಾರಿ ತಪ್ಪಿಸಿಕೊಂಡಿದೆ’ ಎಂದು ಸುಪ್ರೀಂ ಕೋರ್ಟ್ ಕಿಡಿಕಾರಿದೆ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ಜೋಯ್ಮಲ್ಯ ಬಾಗ್ಚಿ ಅವರಿದ್ದ ಪೀಠವು, “ಅಲಿ ಖಾನ್ ವಿರುದ್ಧ ಹಿರಿಯ ಪೊಲೀಸ್ ಅಧಿಕಾರಿ ನೇತೃತ್ವದ ಹರಿಯಾಣ ಎಸ್‌ಐಟಿ ತನಿಖೆ ನಡೆಸುತ್ತಿದೆ. ಈ ಎಸ್‌ಐಟಿ ಅಲಿ ಖಾನ್ ಅವರ ವಿವಾದಾತ್ಮಕ ಪೋಸ್ಟ್‌ಗಳ ಕುರಿತ ಎರಡು ಎಫ್‌ಐಆರ್‌ಗಳ ಬಗ್ಗೆ ಮಾತ್ರವೇ ತನಿಖೆ ನಡೆಸಬೇಕು. ಆ ಪೋಸ್ಟ್‌ಗಳನ್ನು ಅಪರಾಧದ ಅಂಶಗಳು ಇವೆಯೇ ಎಂಬುದನ್ನು ಪರಿಶೀಲಿಸಬೇಕು. ನಾಲ್ಕು ವಾರಗಳಲ್ಲಿ ತನಿಖಾ ವರದಿಯನ್ನು ಸಲ್ಲಿಸಬೇಕು” ಎಂದು ತಾಕೀತು ಮಾಡಿದೆ.
“ಅಲಿ ಖಾನ್ ಅವರ ಮೊಬೈಲ್ ಸೇರಿದಂತೆ ಎಲೆಕ್ಟ್ರಾನಿಕ್ ಉಪಕರಣಗಳನ್ನು ತನಿಖೆಗಾಗಿ ಎಸ್‌ಐಟಿ ವಶಪಡಿಸಿಕೊಳ್ಳಲು ಯಾವುದೇ ಕಾರಣವಿಲ್ಲ. ಅಲಿ ಖಾನ್ ಅವರು ತನಿಖೆಗೆ ಸಹಕರಿಸುತ್ತಿದ್ದಾರೆ. ಹೀಗಿರುವಾಗ, ಅವರಿಗೆ ಮತ್ತೆ ಸಮನ್ಸ್ ನೀಡುವ ಅಗತ್ಯವಿಲ್ಲ” ಎಂದು ಪೀಠ ಹೇಳಿದೆ.
ಈ ಲೇಖನ ಓದಿದ್ದೀರಾ?: ತಮಿಳು ಚಿತ್ರರಸಿಕರು ಮೆಚ್ಚಿದ ‘ಕನ್ನಡತ್ತು ಪೈಂಕಿಳಿ’ ಬಿ. ಸರೋಜಾದೇವಿ
ಅಲಿ ಖಾನ್ ವಿರುದ್ಧ ಹರಿಯಾಣ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ರೇಣು ಭಾಟಿಯಾ ದೂರು ನೀಡಿದ್ದರು. ಆಪರೇಷನ್ ಸಿಂಧೂರ ಕುರಿತು ಅಲಿ ಖಾನ್ ಮಾಡಿದ್ದ ಪೋಸ್ಟ್ ‘ದೇಶದ ಸಾರ್ವಭೌಮತ್ವ ಮತ್ತು ಸಮಗ್ರತೆಗೆ ಅಪಾಯವನ್ನುಂಟುಮಾಡಿದೆ’ ಎಂದು ಆರೋಪಿಸಿದ್ದರು. ಅವರ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಅಲಿ ಖಾನ್ ಅವರನ್ನು ಮೇ 1ರಂದು ಬಂಧಿಸಿದ್ದರು. ಬಳಿಕ ಜಾಮೀನು ದೊರೆಯಿತ್ತು. ಆದಾಗ್ಯೂ, ಜಾಮೀನು ನೀಡುವ ವೇಳೆ ವಿಧಿಸಲಾಗಿದ್ದ ಹಲವಾರು ಷರತ್ತುಗಳನ್ನು ಮೇ 21ರಂದು ಸುಪ್ರೀಂ ಕೋರ್ಟ್ ಸಡಿಲಗೊಳಿಸಿದೆ. ಸಬ್ ಜುಡಿಷಿಯರಿ ಪ್ರಕರಣದ ಕುರಿತಾದ ವಿಷಯಗಳನ್ನು ಹೊರತುಪಡಿಸಿ ಯಾವುದೇ ವಿಚಾರದಲ್ಲಿ ತಮ್ಮ ಅಭಿಪ್ರಾಯಗಳನ್ನು ಪೋಸ್ಟ್‌ಗಳು, ಲೇಖನಗಳ ಮೂಲಕ ವ್ಯಕ್ತಪಡಿಸಲು ಅವಕಾಶವನ್ನೂ ನೀಡಿದೆ.