- ಖರ್ಗೆ ಕುರಿತ ಆರಗ ಜ್ಞಾನೇಂದ್ರ ಹೇಳಿಕೆಗೆ ಡಿಕೆಶಿ ಕಿಡಿ
- ವರಿಷ್ಠರು ಕರೆದಿರುವ ಕರ್ನಾಟಕದ ಸಭೆ ವಿಶೇಷವೇನಲ್ಲ
ಮಲ್ಲಿಕಾರ್ಜು ಖರ್ಗೆ ಅವರ ಬಗ್ಗೆ ಅವಹೇಳನಕಾರಿ ಮಾತನಾಡಿರುವ ಬಿಜೆಪಿ ಮುಖಂಡ ಆರಗ ಜ್ಞಾನೇಂದ್ರ ಅವರನ್ನು ನಿಮ್ಹಾನ್ಸ್ ಗೆ ಕಳುಹಿಸಬೇಕು ಎಂದು ಡಿಸಿಎಂ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹರಿಹಾಯ್ದರು.
ನವದೆಹಲಿಯಲ್ಲಿ ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಅವರು, “ನಿಮಾನ್ಸ್ ಆಸ್ಪತ್ರೆ ಬೆಂಗಳೂರಿನಲ್ಲಿ ಉತ್ತಮವಾಗಿದೆ. ಅದು ಫರ್ಸ್ಟ್ ಕ್ಲಾಸ್ ಆಗಿದೆ. ಅಲ್ಲಿಗೆ ಆರಗ ಜ್ಞಾನೇಂದ್ರ ಅವರನ್ನು ಕಳುಹಿಸೋಣ” ಎಂದರು.
“ಮಂತ್ರಿಗಳು ಸೇರಿ ಕರ್ನಾಟಕದ ಸುಮಾರು 50 ಮಂದಿ ನಾಯಕರ ಸಭೆಯನ್ನು ವರಿಷ್ಠರು ಕರೆದಿದ್ದಾರೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲ ರಾಜ್ಯದ ಮುಖಂಡರ ಸಭೆ ನಡೆಸುತ್ತಿದ್ದಾರೆ. ಕರ್ನಾಟಕದ ಸಭೆ ವಿಶೇಷವೇನಲ್ಲ” ಎಂದರು.
ಈ ಸುದ್ದಿ ಓದಿದ್ದೀರಾ? ಆರಗ ಜ್ಞಾನೇಂದ್ರರಂತಹ ಅರೆ ಜ್ಞಾನಿಗಳು ಶಾಸಕರಾಗಿರುವುದೇ ದುರ್ದೈವ: ರಮೇಶ್ ಬಾಬು
“ರಾಹುಲ್ ಗಾಂಧಿ ಅವರು ಈ ಹಿಂದೆಯೇ ಸಭೆ ಕರೆದಿದ್ದರು. ಕಾರಣಾಂತರಗಳಿಂದ ನಡೆಯಲಿಲ್ಲ. ಅದು ಈಗ ದೆಹಲಿಯಲ್ಲಿ ನಡೆಯುತ್ತಿದೆ. ಸಚಿವರ ಪ್ರತ್ಯೇಕ ಸಭೆ, ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಬಗ್ಗೆ ಚರ್ಚೆಯಾಗಲಿದೆ” ಎಂದು ಹೇಳಿದರು.
ರಾಜಧಾನಿಯಲ್ಲಿ ವಾಹನ ಸಂಚಾರ ದಟ್ಟಣೆ ನಿವಾರಣೆಗೆ ಸುರಂಗ ರಸ್ತೆ ಮತ್ತು ಮೇಲು ಸೇತುವೆ ರಸ್ತೆ ನಿರ್ಮಾಣ ಮಾಡಬೇಕಿದೆ. ಈ ಸಂಬಂಧ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಜತೆ ಚರ್ಚಿಸುವೆ ಎಂದು ಇದೇ ವೇಳೆ ತಿಳಿಸಿದರು.