ರೈತರು ಬೆಳೆದ ಬೆಳೆಗಳಿಗೆ ಲಾಭದಾಯಕ ಪರಿಹಾರ ಘೋಷಿಸಬೇಕು ಎಂದು ಭಾರತೀಯ ಕಿಸಾನ್ ಸಂಘ ಒತ್ತಾಯಿಸಿದೆ.
ಮಾವಿನ ಹಣ್ಣು ಮತ್ತು ಟೊಮೆಟೊಗೆ ಲಾಭದಾಯಕ ಬೆಲೆ ನೀಡಬೇಕು. ಮಾವಿಗೆ ಪ್ರತಿ ಎಕರೆಗೆ 50 ಸಾವಿರ ರೂಗಳ ಪರಿಹಾರವನ್ನು ರೈತರ ಖಾತೆಗೆ ಸರ್ಕಾರ ತುಂಬಿಕೊಡಬೇಕು ಎಂದು ಆಗ್ರಹಿಸಿ ಮುಳಬಾಗಿಲು ತಾಲೂಕು ಕಚೇರಿ ಮುಂದೆ ಧರಣಿ ನಡೆಸಿ ಮುಖ್ಯಮಂತ್ರಿಗಳಿಗೆ, ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಹಾಗೂ ಕೋಲಾರ ಜಿಲ್ಲಾಧಿಕಾರಿಗಳಿಗೆ ಉಪ ತಹಶೀಲ್ದಾರ್ ಜಯಶ್ರೀ ಮೂಲಕ ಮನವಿ ಸಲ್ಲಿಸಲಾಯಿತು.
ಕೋಲಾರ ಜಿಲ್ಲೆಯ ರೈತರು ಕೊಳವೆ ಬಾವಿಗಳ ಸಹಾಯದಿಂದ ಕೃಷಿ ಮಾಡಿ ವಿಶೇಷವಾಗಿ ತೋಟಗಾರಿಕೆ ಬೆಳೆಗಳಾದ ಮಾವು, ಜಮ್ಮುನೇರಳೆ, ಸೀಬೆ ಬೆಳೆಗಳನ್ನು ಬೆಳೆದಿದ್ದರೂ ಫಸಲು ಬಂದಾಗ ಮಾರುಕಟ್ಟೆ ಸಿಗದೆ ಫಸಲನ್ನು ಗಿಡದಿಂದ ಬಿಡಿಸುವ ಕೂಲಿ ಸಹ ಸಿಗುತ್ತಿಲ್ಲ. ಆದುದರಿಂದ ಗಿಡ-ಮರಗಳಲ್ಲೇ ಫಸಲು ನಾಶವಾಗಿದ್ದು ಸರ್ಕಾರ ಈ ಬಗ್ಗೆ ಗಮನವಹಿಸಿ ಬೆಳೆಗಾರರ ರಕ್ಷಣೆಗೆ ಧಾವಿಸಬೇಕು ಎಂದು ಬಿಕೆಎಸ್ ಕೋಲಾರ ಜಿಲ್ಲಾ ಮಹಿಳಾ ಪ್ರಮುಖರು ಹಾಗೂ ಹನುಮನಹಳ್ಳಿ ಗ್ರಾ. ಪಂ. ಅಧ್ಯಕ್ಷೆ ಭೀಮಾಪುರ ಬಿ. ಎಸ್. ಶಶಿಕಲಾ ಒತ್ತಾಯಿಸಿದರು.
“ಕಳೆದ ಒಂದು ವರ್ಷದಿಂದ ರೈತರು ಬೆಳೆದ ಫಸಲು ಉತ್ತಮವಾಗಿ ಬಂದರೂ ಉತ್ತಮ ಬೆಲೆ ಸಿಗದೆ ಸಂಕಷ್ಟಕ್ಕೆ ಒಳಗಾಗಿದ್ದಾರೆ.ರಾಜ್ಯ ಹಾಗೂ ಕೇಂದ್ರ ಸರ್ಕಾರ ಜಿಲ್ಲೆಯ ರೈತರ ನೆರವಿಗೆ ಮುಂದಾಗಬೇಕು. ಮಾವಿಗೆ ಘೋಷಣೆ ಮಾಡಿರುವ ಬೆಂಬಲ ಬೆಲೆ ಫಸಲು ಬಿಡಿಸುವ ಕೂಲಿಗೂ ಸಾಕಾಗುತ್ತಿಲ್ಲ. ಎಪಿಎಂಸಿ ಮಾರುಕಟ್ಟೆಗೆ ತೆಗೆದುಕೊಂಡು ಬರುವ ವಾಹನ ಬಾಡಿಗೆ, ತೂಕ ಮಾಡಿಸುವ ಶುಲ್ಕ ಸೇರಿದಂತೆ ರೈತರು ತಂದ ಮಾವಿನ ಹಣ್ಣಿಗೆ ರೈತನ ಕೈಯಿಂದಲೇ ಹೆಚ್ಚುವರಿಯಾಗಿ ವೆಚ್ಚವಾಗುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ಅಧಿಕಾರಿಗಳು ರೈತರ ತೋಟಗಳಿಗೆ ಭೇಟಿ ನೀಡಿ ಮಾವಿನ ಗಿಡಮರಗಳು ಇರುವ ತೋಟಗಳಿಗೆ ಜಿಪಿಎಸ್ ಮೂಲಕ ಫೋಟೋಗ್ರಫಿ ಮಾಡಿ ತೋಟಗಾರಿಕೆ ಇಲಾಖೆಯಲ್ಲಿ ಒಂದು ಎಕರೆಗೆ ನಿರ್ವಹಣಾ ವೆಚ್ಚ ಸೇರಿ 50 ಸಾವಿರ ಪರಿಹಾರ ನೀಡಬೇಕು. ಇಲ್ಲದಿದ್ದಲ್ಲಿ ಬೆಳೆಗಾರರೊಂದಿಗೆ ಧರಣಿ ಹಮ್ಮಿಕೊಳ್ಳುವುದಾಗಿ” ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಮನ್ನೇನಹಳ್ಳಿ ಕೆ ರಘುನಾಥ್ ರೆಡ್ಡಿ ಎಚ್ಚರಿಸಿದರು.
“ಪಿ ನಂಬರ್ ಸಮಸ್ಯೆಯನ್ನು ತಾಲೂಕಿನಲ್ಲಿ ಕನಿಷ್ಠ 3 ತಿಂಗಳ ಒಳಗೆ ಬಗೆಹರಿಸಬೇಕು. ಕೃಷಿ ಚಟುವಟಿಕೆಗಳಿಗೆ ಸಹಕಾರಿ ಬ್ಯಾಂಕುಗಳು ಸೇರಿದಂತೆ ವಾಣಿಜ್ಯ ಬ್ಯಾಂಕುಗಳಲ್ಲಿ ಶೂನ್ಯ ಬಡ್ಡಿಯಲ್ಲಿ ಸಾಲ ನೀಡಬೇಕು. ಟೊಮೆಟೊ ಸೇರಿದಂತೆ ಹಣ್ಣು ತರಕಾರಿಗಳನ್ನು ಬೆಳೆದಿರುವ ರೈತರಿಗೆ ಬೆಲೆ ಕುಸಿತ ಉಂಟಾದ ತಕ್ಷಣ ನಷ್ಟವಾಗದ ರೀತಿಯಲ್ಲಿ ಸರ್ಕಾರ ವೈಜ್ಞಾನಿಕವಾಗಿ ಬೆಲೆ ನಿಗದಿ ಮಾಡಿ ಪರಿಹಾರ ನೀಡಬೇಕು” ಎಂದು ಜಿಲ್ಲಾ ಉಪಾಧ್ಯಕ್ಷ ಅರಹಳ್ಳಿ ಶ್ರೀನಿವಾಸ ಗೌಡ ಆಗ್ರಹಿಸಿದರು.
ಇದನ್ನೂ ಓದಿ: ಕೋಲಾರ | ರೈತರ ಕೃಷಿ ಭೂಮಿ ತಂಟೆಗೆ ಸರ್ಕಾರ ಬರೋದು ಸರಿಯಲ್ಲ: ನಳಿನಿ ಗೌಡ
“ಕುರಿ, ಮೇಕೆ, ಹಸು, ಎಮ್ಮೆ ಸೇರಿದಂತೆ ಜಾನುವಾರುಗಳ ಮೇವಿಗೆ ಪ್ರತಿ ಗ್ರಾಮದಲ್ಲೂ ಸರ್ಕಾರ ಮತ್ತು ಸುಪ್ರೀಂ ಕೋರ್ಟ್ ಮಾರ್ಗಸೂಚಿಯಂತೆ ಸರ್ಕಾರಿ ಜಮೀನುಗಳಲ್ಲಿ ಹುಲ್ಲು ಬೆಳೆಸಿ ಜಾನುವಾರಗಳಿಗೆ ಮೇವು, ನೀರು ಸಿಗುವಂತೆ ಮಾಡಬೇಕು. ಕೆರೆಕುಂಟೆಗಳ ಹೂಳು ತೆಗೆದು ಅಭಿವೃದ್ಧಿಪಡಿಸಿ ರೈತರು ಮತ್ತು ಕೃಷಿಗೆ ಉತ್ತೇಜನ ನೀಡಬೇಕು” ಎಂದು ಜಿಲ್ಲಾ ಕೋಶಾಧ್ಯಕ್ಷ ವಕೀಲ ವಿ. ಜಯಪ್ಪ ಮನವಿ ಮಾಡಿದರು.
ಬಿಕೆಎಸ್ ತಾಲೂಕು ಅಧ್ಯಕ್ಷ ಉಗಣಿ ಆರ್. ನಾರಾಯಣಗೌಡ, ಉಪಾಧ್ಯಕ್ಷ ವಿ. ಮುನಿ ರಾಮಯ್ಯ, ತಿರುಮನಹಳ್ಳಿ ಚಂದ್ರಶೇಖರ್, ಕಾರ್ಯದರ್ಶಿ ಏತ್ತೂರಹಳ್ಳಿ ಸತೀಶ್ ಕುಮಾರ್, ಸಂಚಾಲಕ ನಿವೃತ್ತ ಮುಖ್ಯೋಪಾಧ್ಯಾಯ ಹಳೇಕುಪ್ಪ ಚಂಗಲರಾಯಪ್ಪ, ಜಿಲ್ಲಾ ಮಾಜಿ ಅಧ್ಯಕ್ಷ ಕೆ. ರೋಹನ್ ಕುಮಾರ್, ತಾಲೂಕು ಮಹಿಳಾ ಪ್ರಮುಖರಾದ ಮುಡಿಯನೂರು ಜಯಲಕ್ಷ್ಮಮ್ಮ, ಬಜಾರು ರಸ್ತೆಯ ವಿಘ್ನೇಶ್ವರ ದೇವಾಲಯದ ಧರ್ಮದರ್ಶಿ ಪಿ. ಎಂ. ರಘುನಾಥ್, ಮುಖಂಡ ನಂಗಲಿ ಕೆ. ಸತೀಶ್ ಕುಮಾರ್, ಮಿಟ್ಟೂರು ಶಂಕರಪ್ಪ, ಶ್ರೀನಿವಾಸ್ ಬಾಬು, ಉದಯ್ ಕುಮಾರ್, ಆರ್. ಕೃಷ್ಣಪ್ಪ ಮತ್ತಿತರರು ಪ್ರತಿಭಟನೆ ನೇತೃತ್ವ ವಹಿಸಿದ್ದರು.