ಬೆಳಗಾವಿ | ಮಹಿಳೆಯರ ಕೂಲಿ ಕೆಲಸದ ಪಯಣಕ್ಕೆ ಬೆಳಕು ತಂದ ‘ಶಕ್ತಿ ಯೋಜನೆ’

Date:

Advertisements

ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆಯ ಉಚಿತ ಬಸ್ ಪ್ರಯಾಣ ಗ್ರಾಮೀಣ ಭಾಗದ ಸಾವಿರಾರು ಕೂಲಿ ಮಹಿಳೆಯರ ಜೀವನದಲ್ಲಿ ಮಹತ್ತರ ಬದಲಾವಣೆ ತರುತ್ತಿದೆ. ಮುಂಜಾನೆ ಎದ್ದು ಮನೆಯ ಕೆಲಸ ಮುಗಿಸಿ, ಬಸ್ ಹಿಡಿದು ಕೂಲಿ ಕೆಲಸಕ್ಕಾಗಿ ಹತ್ತಾರು ಕಿಲೋಮೀಟರ್ ದೂರದ ಊರಿಗೆ ಹೊರಡುವ ಈ ಮಹಿಳೆಯರ ಬದುಕಿಗೆ ಶಕ್ತಿ ಯೋಜನೆ ಹೊಸ ಆಸೆಯ ಬೆಳಕನ್ನೇ ನೀಡಿದೆ.

ಕನ್ನಡ ನಾಡಿನ ಲಕ್ಷಾಂತರ ಮಹಿಳೆಯರ ಬದುಕಿಗೆ ದಿಕ್ಕು ತೋರಿಸಿದ ಯೋಜನೆ ಶಕ್ತಿ ಯೋಜನೆ. ಕಾಂಗ್ರೆಸ್ ಸರ್ಕಾರವು ತನ್ನ ಚುನಾವಣಾ ಘೋಷಣೆಯಂತೆ ಆರಂಭಿಸಿದ ಶಕ್ತಿ ಯೋಜನೆ ಇಂದು ಒಂದು ಸಾಮಾಜಿಕ ಕ್ರಾಂತಿಯ ರೂಪವನ್ನು ಪಡೆದುಕೊಂಡಿದೆ.

ರಾಜ್ಯದ ನಾಲ್ಕು ಬಸ್ ನಿಗಮಗಳಾದ ಕೆಎಸ್‌ಆರ್‌ಟಿಸಿ, ಕೆಕೆಆರ್‌ಟಿಸಿ, ಎನ್‌ಡಬ್ಲ್ಯೂಕೆಆರ್‌ಟಿಸಿ ಹಾಗೂ ಬಿಎಂಟಿಸಿಗಳಲ್ಲಿ ಈ ಯೋಜನೆಯಡಿ ಇದುವರೆಗೂ 500 ಕೋಟಿ ಅಧಿಕ ಮಹಿಳಾ ಟಿಕೆಟ್ ಗಳಲ್ಲಿ ಮಹಿಳೆಯರು ಪ್ರಯಾಣ ಮಾಡಿದ್ದಾರೆ.

Advertisements

ಪ್ರತಿ ದಿನ 80 ಲಕ್ಷಕ್ಕೂ ಹೆಚ್ಚು ಮಹಿಳೆಯರು ಈ ಯೋಜನೆಯಡಿ ಉಚಿತ ಟಿಕೆಟ್ ಪಡೆದು ಪ್ರಯಾಣಿಸುತ್ತಿದ್ದಾರೆ. ಈ ಪ್ರಯಾಣವು ಕೇವಲ ಸ್ಥಳಾಂತರವಲ್ಲ. ಅದು ಉದ್ಯೋಗದ ಕಡೆಗೆ, ಮಕ್ಕಳ ಶಾಲೆಯ ಕಡೆಗೆ, ಆಸ್ಪತ್ರೆಗಳ ಕಡೆಗೆ, ಬದುಕನ್ನು ಕಟ್ಟುವ ನಿತ್ಯದ ಹೆಜ್ಜೆಗಳ ಕಡೆಗೆ ಆಗಿದೆ.

ಇದರ ಹಣಕಾಸು ಬೆಲೆ ಎಷ್ಟು ಎಂದು ನೋಡಿದರೆ, ಶಕ್ತಿ ಯೋಜನೆಯಡಿ ಈಗಾಗಲೇ 12,000 ಕೋಟಿ ರೂಪಾಯಿಗಿಂತ ಹೆಚ್ಚು ಮೊತ್ತದ ಉಚಿತ ಟಿಕೆಟ್‌ಗಳನ್ನು ಮಹಿಳೆಯರು ಬಳಸಿದ್ದಾರೆ. ಇದರಿಂದ ಮನೆ ಬಜೆಟ್‌ಗೆ ಉಸಿರಾಟ ಸಿಕ್ಕಿದೆ, ಮಹಿಳೆಯರಿಗೆ ಸ್ವಾಭಿಮಾನ ಸಿಕ್ಕಿದೆ.

ಕೆಲವರು ಈ ಯೋಜನೆಯ ಕುರಿತು ಟೀಕೆಯನ್ನೂ ಮಾಡಿದ್ದಾರೆ. ಆದರೆ ಈ ಅಂಕಿ-ಅಂಶಗಳು ಮತ್ತು ನೆಲಮಟ್ಟದ ಮಹಿಳೆಯರ ಅನುಭವಗಳು ಶಕ್ತಿ ಯೋಜನೆಯ ಮಹಾ ಯಶಸ್ಸಿಗೆ ಸಾಕ್ಷಿ ಹೇಳುತ್ತಿವೆ.

WhatsApp Image 2025 07 16 at 3.01.10 PM

ಹಿಂದೆ ದಿನಸಿ ಖರೀದಿ, ಮಕ್ಕಳ ಕಲಿಕೆಯ ಖರ್ಚು, ವೈದ್ಯಕೀಯ ತುರ್ತು ಪರಿಸ್ಥಿತಿಗಳು ಇತ್ಯಾದಿಗೆ ಹಣ ಉಳಿಯುವುದೇ ಕಷ್ಟವಾಗುತ್ತಿತ್ತು. ಆದರೆ ಈಗ ಬಸ್ಸಿನಲ್ಲಿ ಉಚಿತವಾಗಿ ಪ್ರಯಾಣ ಮಾಡುವ ಅವಕಾಶವು ಅವರ ಸಂಚಾರಿ ಖರ್ಚನ್ನು ಕಡಿಮೆ ಮಾಡಿದ್ದು, ಪ್ರತಿದಿನವೂ 20ರೂಗಳಿಂದ 50 ರಷ್ಟು ಹಣವನ್ನು ಉಳಿಸಿಕೊಳ್ಳುವ ಸಾಧ್ಯತೆಯೊಂದಿಗೆ, ಕುಟುಂಬದ ನೆಮ್ಮದಿ ಸಹ ಹೆಚ್ಚಿಸಿದೆ.

ಗೌರಿ ಎಂಬ ಕೂಲಿ ಮುಹಿಳೆ ಶಕ್ತಿ ಯೋಜನೆಯ ಕುರಿತು ಈದಿನ ಡಾಟ್‌ ಜೊತೆಗೆ ಮಾತನಾಡುತ್ತಾ, “ಸಂಕೇಶ್ವರ ಊರಿನಲ್ಲಿ ಮನೆ ಇದ್ದರೂ ನಾನು ದಿನ ನಿತ್ಯ ಹುಕ್ಕೇರಿ ಹತ್ತಿರದ ತೋಟದಲ್ಲಿ ಕೆಲಸಕ್ಕೆ ಹೋಗ್ತೀನಿ. ಹಳೆಯ ದಿನಗಳಲ್ಲಿ ಬಸ್ ಟಿಕೆಟ್‌ಗೂ ನಾನು ಹಣ ಉಳಿಸಲು ಆಗುತ್ತಿರಲಿಲ್ಲ. ಆದರೆ ಇದೀಗ ಉಚಿತ ಬಸ್ ಸೇವೆಯಿಂದ ದಿನವೂ 30 ರಿಂದ40 ರೂಪಾಯಿಗಳು ಉಳಿಯುತ್ತಿದೆ. ಆ ಹಣದಿಂದ ಸಾಲದ ಕಂತುಗಳನ್ನು ಪಾವತಿ ಮಾಡಲು ಬಳಸುತ್ತಿದ್ದೇನೆ” ಎಂದು ಹೇಳಿದರು.

ಇದೀಗ ಮಹಿಳೆಯರು ತಮ್ಮದೇ ಆದ ನಿಗದಿತ ಸಮಯಕ್ಕೆ ಬಸ್‌ಗಳಲ್ಲಿ ಸುರಕ್ಷಿತವಾಗಿ ಪ್ರಯಾಣಿಸುತ್ತಿದ್ದಾರೆ. ಸಮಾಜದಲ್ಲಿನ ಅವರ ಪಾತ್ರ ಹೆಚ್ಚು ಗೋಚರವಾಗುತ್ತಿದೆ. ಪುರುಷನ ಆರ್ಥಿಕ ಅವಲಂಬನೆಯಿಂದ ಸ್ವಲ್ಪ ದೂರ ಹೋಗುತ್ತಿರುವ ಈ ಮಹಿಳೆಯರಿಗೆ ಶಕ್ತಿ ಯೋಜನೆಯು ಆರ್ಥಿಕ ಸ್ವಾತಂತ್ರ್ಯದ ಮೊದಲ ಹೆಜ್ಜೆಯಂತೆ ಪರಿಣಮಿಸಿದೆ.

“ಪ್ರತಿ ದಿನ ಊರಿನಿಂದ ಬೇರೆ ಊರಿಗೆ ಕೂಲಿ ಕೆಲಸಕ್ಕೆ ಹೋಗುವಾಗ ಬಸ್ ಟಿಕೆಟ್‌ಗೆ ದಿನಕ್ಕೆ 30ರಿಂದ40 ರೂಪಾಯಿ ಖರ್ಚು ಮಾಡುತ್ತಿದ್ದೆ. ದುಡಿದು ಕೊನೆಗೆ ಪೈಸೇ ಉಳಿಯುತ್ತಿರಲಿಲ್ಲ. ಆದರೆ ಈಗ? ಶಕ್ತಿ ಯೋಜನೆಯಿಂದ ಆದ ಉಚಿತ ಪ್ರಯಾಣ ನನ್ನ ಕೈಯಲ್ಲಿ ದಿನಕ್ಕೆ ಕೆಲವು ರೂಪಾಯಿಗಳನ್ನು ಉಳಿಸಿಕೊಡುತ್ತಿದೆ. ಆ ಹಣದಲ್ಲಿ ನನ್ನ ಮಕ್ಕಳ ಕಲಿಕೆಗೆ ಪುಸ್ತಕ, ಪೆನ್, ಬ್ಯಾಗ್‌ಗಳು, ಬಟ್ಟೆಗಳನ್ನು ಖರೀದಿಸಿದ್ದೆನೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಮ್ಮಂಥ ಹೆಣ್ಣುಮಕ್ಕಳನ್ನು ಗೌರವದಿಂದ ಬದುಕಿಸಲು ಈ ಯೋಜನೆ ಕೊಟ್ಟಿದ್ದಾರೆ. ನಾವು ಊರ ಬಸ್‌ಗಳಲ್ಲಿ ಉಚಿತವಾಗಿ ಹೋಗುತ್ತಿದ್ದರೂ, ಬದುಕಿನಲ್ಲಿ ದೊಡ್ಡ ಉದ್ದೇಶಗಳನ್ನು ಹೊತ್ತುಕೊಂಡಿದ್ದೇವೆ” ಎಂದು ಅಥಣಿ ತಾಲೂಕಿನ ಮಹಿಳೆ ಸುರೇಖಾ ಸಂತಸ ವ್ಯಕ್ತಪಡಿಸಿದರು.

belgam 4

ಇದು ಕೇವಲ ಉಚಿತ ಪ್ರಯಾಣವಲ್ಲ. ಇದು ಮಹಿಳೆಯರಿಗೆ ಸಮಾಜದಲ್ಲಿ ಅಸ್ತಿತ್ವದ ಭಾವನೆ ನೀಡುವ ಶಕ್ತಿಯ ಪರಿಭಾಷೆಯಾಗಿದೆ ಎಂಬುದು ಸುರೇಖಾ ಅವರ ಅಭಿಪ್ರಾಯ.

ಸಂಗೀತಾ ಶಕ್ತಿ ಯೋಜನೆಯ ಕುರಿತು ಮಾತನಾಡಿ, “ನಾನು ಬೆಳಗಾವಿ ಜಿಲ್ಲೆಯ ಗ್ರಾಮಾಂತರ ಭಾಗದವಳು. ನಮ್ಮ ಊರಲ್ಲಿ ಕೂಲಿ ಕೆಲಸಗಳು ಅಪರೂಪ. ಸಿಕ್ಕರೂ ಕೂಲಿ ತುಂಬಾ ಕಡಿಮೆ. ಮನೆ ಖರ್ಚು ಸಾಗಿಸಲು, ಮಕ್ಕಳ ವಿದ್ಯಾಭ್ಯಾಸ, ಆರೋಗ್ಯ ಎಲ್ಲಾ ಅಂಶಗಳನ್ನು ನೋಡಬೇಕಾದ ಹೊಣೆ ನಾನೇ ಹೊತ್ತಿದ್ದೆ. ಆದ್ದರಿಂದ ಬೆಳಗಾವಿಗೆ ಬಂದು ಹೋಟೆಲ್‌ನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದೆ” ಎಂದು ತಿಳಿಸಿದರು.

ಬೆಳಗಾವಿಗೆ ಪ್ರಯಾಣ ಮಾಡಲು ನನಗೆ ನೂರಾರು ರೂಪಾಯಿ ಪ್ರಯಾಣ ವೆಚ್ಚ ಆಗುತ್ತಿತ್ತು. ಕೂಲಿಯ ಬಹುಪಾಲು ಹಣ ಪ್ರಯಾಣದ ಖರ್ಚಿಗೆ ಹೋಗುತ್ತಿತ್ತು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಾರಿಗೆ ತಂದ ಶಕ್ತಿ ಯೋಜನೆಯು ನನ್ನಂಥ ನೂರಾರು ಮಹಿಳೆಯರಿಗೆ ಬೆಳಕು ನೀಡಿದೆ. ಈಗ ನಾನು ಉಚಿತ ಬಸ್ ಸೇವೆಯಿಂದ ಪ್ರಯಾಣ ಮಾಡುತ್ತಿದ್ದೇನೆ. ದಿನಕ್ಕೆ ನೂರಾರು ರೂಪಾಯಿ ಉಳಿಯುತ್ತಿವೆ. ಆ ಹಣವನ್ನು ಮನೆಗಾಗಿ, ಮಕ್ಕಳ ಅಗತ್ಯಕ್ಕಾಗಿ ಉಪಯೋಗಿಸುತ್ತಿದ್ದೇನೆ ಎಂದು ಮಾಹಿತಿ ನೀಡಿದರು.

ಮಹಿಳೆಯರು ಉಚಿತ ಬಸ್‌ನಲ್ಲಿ ತಿರುಗಾಟಕ್ಕಷ್ಟೇ ಹೋಗ್ತಿದ್ದಾರೆ ಅಂತಾ ಕೆಲವು ಜನ ಟೀಕಿಸುತ್ತಿದ್ದಾರೆ. ಆದರೆ ನಿಜವಾದ ಸಂಗತಿ ಗೊತ್ತಿಲ್ಲದವರಷ್ಟೇ ಈ ರೀತಿ ಹೇಳಬಹುದು. ನಾವು ತಿರುಗಾಟಕ್ಕೆ ಅಲ್ಲ, ಬದುಕಿಗಾಗಿ ಹೋಗ್ತಿದ್ದೀವಿ. ಈ ಬಸ್ ಸೇವೆಯಿಂದ ಎಷ್ಟೋ ಮಹಿಳೆಯರು ನಮ್ಮ ಜೀವನವನ್ನು ರೂಪಿಸಿಕೊಂಡಿದ್ದೇವೆ. ಶಕ್ತಿ ಯೋಜನೆಯು ನಮಗೆ ನಿಜವಾಗಿಯೂ ಶಕ್ತಿ ನೀಡಿದೆ ಎಂದು ಸಂಗೀತಾ ಅವರು ತಮ್ಮ ಅನುಭವ ಹಂಚಿಕೊಂಡರು.

ಇದೇ ಶಕ್ತಿ ಯೋಜನೆಯ ನಿಜವಾದ ಪ್ರಭಾವ ನಗರಗಳ ಬೆಳಕು ಕಂಡ ಹತ್ತಾರು ಗ್ರಾಮೀಣ ಮಹಿಳೆಯರು ಸ್ವಾವಲಂಬಿ ಬದುಕು ಸಾಗಿಸುತ್ತಿದ್ದಾರೆ. ಇದು ಒಂದು ಸಂಗೀತಾ ಕಥೆಯಷ್ಟೇ ಅಲ್ಲ. ಇದು ನೂರಾರು ಮಹಿಳೆಯರ ಸಾಮಾನ್ಯ ಬಾಳಿನ ಸತ್ಯ. ಈ ಯೋಜನೆಯಿಂದ ಉಂಟಾಗಿರುವ ಬದಲಾವಣೆಗಳನ್ನು ಮನದಟ್ಟಾಗಿಸುವಂತಹ ಉದಾಹರಣೆಯಾಗಿದೆ.

ರಾಮದುರ್ಗ ತಾಲೂಕಿನ ಸಾಲಾಪೂರ ಗ್ರಾಮದ ಕಸ್ತೂರಿ ಮಾತನಾಡುತ್ತಾ , ನಾನು ನಮ್ಮ ಗ್ರಾಮದಿಂದ ಪಕ್ಕದ ಊರಿಗೆ ದಿನವೂ ಕೂಲಿ ಕೆಲಸಕ್ಕೆ ಹೋಗುತ್ತೇನೆ. ಹಿಂದೆ ಹೋಗಿ ಬರುವ ಬಸ್ ಖರ್ಚಿಗೆ ದಿನಕ್ಕೆ 40 ರೂಪಾಯಿ ಆಗುತ್ತಿತ್ತು. ನಮ್ಮ ಕೆಲಸಕ್ಕೆ ಸಿಗುವ ಕೂಲಿ 200 ರೂಪಾಯಿಯಾಗಿದ್ದು, ಪ್ರಯಾಣದ ವೆಚ್ಚದ ಬಳಿಕ ಕೇವಲ 160 ರೂಪಾಯಿ ಮಾತ್ರ ಉಳಿಯುತ್ತಿತ್ತು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆರಂಭಿಸಿರುವ ಶಕ್ತಿ ಯೋಜನೆಯ ಮೂಲಕ ಉಚಿತ ಬಸ್ ಪ್ರಯಾಣ ಸೌಲಭ್ಯ ದೊರೆತಿದೆ. ಇದರಿಂದ ತಿಂಗಳಿಗೆ ಸುಮಾರು 1000 ರೂಪಾಯಿಗಳು ಉಳಿತಾಯವಾಗುತ್ತಿದೆ. ಹಾಗೂ ಗೃಹಲಕ್ಷ್ಮೀ 2000 ರೂಪಾಯಿಗಳಿಂದ ನಮಗೆ ಗೌರವದ ಬದುಕು ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದರು.

belgam1

ಶಕ್ತಿ ಯೋಜನೆ ಎಂಬುದು ಕೇವಲ ಉಚಿತ ಬಸ್ ಪ್ರಯಾಣವಲ್ಲ, ಅದು ಸಾವಿರಾರು ಮಹಿಳೆಯರ ಬದುಕಿಗೆ ಬದಲಾಗಿರುವ ದಿಕ್ಕು. ಊರಿನಿಂದ ಊರಿಗೆ ದುಡಿಮೆಗೆ ಹೋಗುವ ಈ ಮಹಿಳೆಯರಿಗೆ ಇದು ಆರಾಮದಾಯಕ ಪ್ರಯಾಣವಷ್ಟೇ ಅಲ್ಲ, ಬಚಾವಾದ ಹಣ, ಹೆಚ್ಚಾದ ಆತ್ಮವಿಶ್ವಾಸ ಮತ್ತು ಹೆಜ್ಜೆ ಹೆಜ್ಜೆಗೂ ಘನತೆ ತುಂಬಿದೆ.

ಇದನ್ನು ಓದಿದ್ದೀರಾ? ಧರ್ಮಸ್ಥಳ ಪ್ರಕರಣ | ವಿಶೇಷ ತನಿಖಾ ತಂಡ ರಚನೆ ಭರವಸೆ ನೀಡಿದ ಸಿಎಂ ಸಿದ್ದರಾಮಯ್ಯ

ಗೌರಿ, ಸುರೇಖಾ, ಸಂಗೀತಾ, ಕಸ್ತೂರಿ ಮುಂತಾದವರ ಬದುಕು ಈ ಯೋಜನೆಯ ನಿಜವಾದ ಶಕ್ತಿ ಏನೆಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ. ಪ್ರತಿದಿನವೂ ಬಸ್ ಹತ್ತುವ ಈ ಹೆಣ್ಣುಮಕ್ಕಳು ತಮ್ಮ ಮನೆಯನ್ನೂ, ಭವಿಷ್ಯವನ್ನೂ ಕಟ್ಟಿಕೊಳ್ಳುತ್ತಿದ್ದಾರೆ. ಅವರಿಗೆ ಇದು ‘ಉಚಿತ ಸೇವೆ’ ಅಲ್ಲ, ‘ಅವಕಾಶ’ – ಬದುಕಿನಲ್ಲಿ ಗುರಿ ಸಾಧಿಸುವ ಹಕ್ಕು.

ಟೀಕೆಗಳು ಬಂದರೂ, ಈ ಶಕ್ತಿ ಯೋಜನೆ ಒಂದು ಮೌನ ಕ್ರಾಂತಿ. ಅದು ಹೆಣ್ಣುಮಕ್ಕಳ ಬದುಕಿನಲ್ಲಿ ಹೊಸ ಬೆಳಕನ್ನು ಹಚ್ಚಿದ ಕರ್ನಾಟಕದ ಹೆಮ್ಮೆಯ ಯೋಜನೆಯಾಗಿದೆ ಎಂಬುದು ಹಲವು ಮಹಿಳೆಯರ ಅಭಿಪ್ರಾಯ.

ಸುನಿಲ್
ಸುನಿಲ್ ಹಂಪನ್ನವರ
+ posts

ಬೆಳಗಾವಿ ಜಿಲ್ಲಾ ಸಂಯೋಜಕರು

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಸುನಿಲ್ ಹಂಪನ್ನವರ
ಸುನಿಲ್ ಹಂಪನ್ನವರ
ಬೆಳಗಾವಿ ಜಿಲ್ಲಾ ಸಂಯೋಜಕರು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಶಿವಮೊಗ್ಗ | ಮತ್ತೆ ಸದ್ದು ಮಾಡುತ್ತಿದೆ ವಾಹನಗಳ ಕರ್ಕಶ ಸೈಲೆಂಸರ್ ; ಕ್ರಮ ಕೈಗೊಳ್ಳುವರೆ ಟ್ರಾಫಿಕ್ ಪೊಲೀಸ್?

ಶಿವಮೊಗ್ಗ ನಗರದಲ್ಲಿ ಕೆಲವು ತಿಂಗಳು ಹಿಂದೆ ಸೈಲೆಂಟ್ ಆಗಿದ್ದ ಸೈಲೆಂಸರ್ ಕರ್ಕಶ...

ಕೋಲಾರ | ಎಫ್ಆರ್‌ಎಸ್ ನಿಲ್ಲಿಸುವಂತೆ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಅಂಗನವಾಡಿ ಕಾರ್ಯಕರ್ತೆಯರ ಮುಖಚರ್ಯೆ ಗುರುತಿಸುವ ಕ್ರಮಕ್ಕೆ (ಎಫ್ಆರ್‌ಎಸ್) ತಡೆ ಹಾಗೂ ಐಸಿಡಿಎಸ್...

ಬೀದರ್‌ | ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ : ಎರಡು ದಿನ ರಾಷ್ಟ್ರೀಯ ವಿಚಾರ ಸಂಕಿರಣ

ಭಾಲ್ಕಿ ಹಿರೇಮಠ ಸಂಸ್ಥಾನದ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ ...

Download Eedina App Android / iOS

X