ಕಮಲನಗರ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರಾತ್ರಿ ಪಾಳಿಯಲ್ಲಿ ವೈದ್ಯರ ಕೊರತೆ ನೀಗಿಸಬೇಕೆಂದು ಮಾದಿಗೆ ದಂಡೋರ ಮಾದಿಗ ಮೀಸಲಾತಿ ಹೋರಾಟ ತಾಲೂಕಾ ಸಮಿತಿ ಒತ್ತಾಯಿಸಿದೆ.
ಈ ಕುರಿತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳ ಹೆಸರಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ತಹಸೀಲ್ದಾರ್ ಅಮೀತ್ ಕುಲಕರ್ಣಿ ಅವರಿಗೆ ಸಲ್ಲಿಸಿದರು.
ʼಕಮಲನಗರ ತಾಲುಕು ಕೇಂದ್ರವಾಗಿದ್ದು, ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ನೂರಾರು ರೋಗಿಗಳು ಇದೇ ಆರೋಗ್ಯ ಕೇಂದ್ರದ ಮೇಲೆ ಅವಲಂಬಿತರಾಗಿದ್ದಾರೆ. ಆದರೆ ರಾತ್ರಿ ಪಾಳೆಯಲ್ಲಿ ವೈದ್ಯಾಧಿಕಾರಿಗಳು ಆಸ್ಪತ್ರೆಯಲ್ಲಿ ಸೂಕ್ತ ಸಮಯದಲ್ಲಿ ಇರದಿರುವುದರಿಂದ ತೊಂದರೆ ಅನುಭವಿಸುವಂತಾಗಿದೆʼ ಎಂದು ದೂರಿದ್ದಾರೆ.
ʼಹೃದಯ ಸಂಬಂಧಿ ಕಾಯಿಲೆ, ಹೆರಿಗೆ ಸೇರಿದಂತೆ ತುರ್ತು ಚಿಕಿತ್ಸೆಗಾಗಿ ಬಂದರೆ ರಾತ್ರಿ ವೇಳೆ ವೈದ್ಯರ ಹಾಜರು ಇರುವುದಿಲ್ಲ. ಇನ್ನು ಸರ್ಕಾರದಿಂದ ಬಂದ ಉಪಕರಣಗಳ ಬಳಕೆಯಾಗುತ್ತಿಲ್ಲ. ಗ್ರಾಮೀಣ ಭಾಗದ ಬಡ ರೋಗಿಗಳು ಆಸ್ಪತ್ರೆಗೆ ಬಂದರೆ ಸೂಕ್ತ ಚಿಕಿತ್ಸೆ ಸಿಗದೆ ಖಾಸಗಿ ಆಸ್ಪತ್ರೆಗಳ ಮೊರೆ ಹೋಗಬೇಕಾದ ಪರಿಸ್ಥಿತಿ ಬಂದೊದಗಿದೆʼ ಎಂದರು.
ಇದನ್ನೂ ಓದಿ : ಕಲಬುರಗಿ | ಈಶಾನ್ಯ ವಲಯಕ್ಕೆ ಚಂದ್ರಗುಪ್ತ ನೂತನ ಐಜಿಪಿ
ಕೂಡಲೇ ರಾತ್ರಿ ಪಾಳಿಯಲ್ಲಿ ಕಡ್ಡಾಯವಾಗಿ ವೈದ್ಯರನ್ನು ನೇಮಿಸುವುದು ಸೇರಿದಂತೆ ಆಸ್ಪತ್ರೆಯ ಹಲವು ಸಮಸ್ಯೆಗೆ 15 ದಿವಸದ ಒಳಗಾಗಿ ಶಾಶ್ವತ ಪರಿಹಾರ ಒದಗಿಸಲು ಕ್ರಮಕೈಗೊಳ್ಳಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆʼ ಎಂದರು ಎಚ್ಚರಿಸಿದರು.
ವರದಿ ಮಾಹಿತಿ : ಜನಾರ್ಧನ ಸಾವರ್ಗೇಕರ್