ದಕ್ಷಿಣ ಸಿರಿಯಾದ ಡ್ರೂಝ್ ಬಹುಸಂಖ್ಯಾತ ನಗರವಾದ ಸ್ವೀಡಾದಲ್ಲಿ ಸರ್ಕಾರಿ ಪಡೆಗಳು ಮತ್ತು ಸ್ಥಳೀಯ ಡ್ರೂಝ್ ಬಣಗಳ ನಡುವಿನ ಕದನ ವಿರಾಮ ಮುರಿದು ಬಿದ್ದ ಬೆನ್ನಲ್ಲೇ, ಇಸ್ರೇಲ್ ಸೇನೆಯು ಸಿರಿಯಾದ ರಕ್ಷಣಾ ಸಚಿವಾಲಯದ ಮೇಲೆ ಭೀಕರ ಬಾಂಬ್ ದಾಳಿ ನಡೆಸಿದೆ.
ಸಿರಿಯಾ ರಾಜಧಾನಿ ಡಮಾಸ್ಕಸ್‌ನಲ್ಲಿರುವ ಸೇನಾ ಪ್ರಧಾನ ಕಚೇರಿಯ ಪ್ರವೇಶದ್ವಾರವನ್ನು ಗುರಿಯಾಗಿಸಿಕೊಂಡು ಇಸ್ರೇಲ್ ಈ ದಾಳಿ ನಡೆಸಿದೆ. ಈ ದಾಳಿಯಲ್ಲಿ ದೇಶದ ರಕ್ಷಣಾ ಸಚಿವಾಲಯದ ಕಟ್ಟಡಕ್ಕೆ ಹಾನಿಯಾಗಿದೆ ಎಂದು ಸಿರಿಯಾದ ಭದ್ರತಾ ಅಧಿಕಾರಿಗಳು ರಾಯಿಟರ್ಸ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
“ಸಿರಿಯಾದ ಡಮಾಸ್ಕಸ್ ಪ್ರದೇಶದಲ್ಲಿರುವ ಮಿಲಿಟರಿ ಪ್ರಧಾನ ಕಚೇರಿಯ ಮೇಲೆ ದಾಳಿ ನಡೆಸಿದ್ದೇವೆ. ದಕ್ಷಿಣ ಸಿರಿಯಾದಲ್ಲಿ ಡ್ರೂಝ್ ನಾಗರಿಕರ ವಿರುದ್ಧ ನಡೆಯುತ್ತಿರುವ ಬೆಳವಣಿಗೆಗಳು ಮತ್ತು ಆಡಳಿತದ ಕ್ರಮಗಳನ್ನು ಐಡಿಎಫ್ ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ ಎಂದು ಇಸ್ರೇಲ್ ಸೇನೆ ಹೇಳಿಕೆಯಲ್ಲಿ ತಿಳಿಸಿದೆ.
ಸರ್ಕಾರಿ ಪಡೆಗಳು ಮತ್ತು ಡ್ರೂಝ್ ಸಶಸ್ತ್ರ ಗುಂಪುಗಳ ನಡುವಿನ ಕದನ ವಿರಾಮ ಒಪ್ಪಂದ ಮುರಿದ ನಂತರ ದಕ್ಷಿಣ ಸಿರಿಯಾದ ಸ್ವೀಡಾ ನಗರದಲ್ಲಿ ಘರ್ಷಣೆಗಳು ತೀವ್ರಗೊಂಡಿವೆ. ಇದೀಗ ಡ್ರೂಝ್ ಅಲ್ಪಸಂಖ್ಯಾತರನ್ನು ಬೆಂಬಲಿಸಿ ಇಸ್ರೇಲ್ ರಂಗಕ್ಕಿಳಿದಿದ್ದಲ್ಲದೇ, ರಕ್ಷಣಾ ಸಚಿವಾಲಯದ ಕಚೇರಿಯ ಮೇಲೆ ಭೀಕರ ದಾಳಿ ನಡೆಸಿದೆ. ಬಾಂಬ್ ದಾಳಿ ದೃಶ್ಯಗಳನ್ನು ಅಲ್ ಜಝೀರಾ ಚಾನೆಲ್ ನೇರಪ್ರಸಾರದ ಮೂಲಕ ಬಿತ್ತರಿಸಿದೆ.
ಡ್ರೂಝ್ ಎನ್ನುವುದು 10ನೇ ಶತಮಾನದಲ್ಲಿ ಶಿಯಾ ಇಸ್ಲಾಂನಿಂದ ಹೊರಹೊಮ್ಮಿದ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯ. ವಿಶ್ವಾದ್ಯಂತ ಅಂದಾಜು ಒಂದು ಮಿಲಿಯನ್ ಡ್ರೂಝ್‌ಗಳಲ್ಲಿ, ಅರ್ಧಕ್ಕಿಂತ ಹೆಚ್ಚು ಜನರು ಸಿರಿಯಾದಲ್ಲಿ ವಾಸಿಸುತ್ತಿದ್ದಾರೆ. ಲೆಬನಾನ್ ಮತ್ತು ಇಸ್ರೇಲ್‌ನಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಈ ಸಮುದಾಯದ ಜನರಿದ್ದಾರೆ.
ಈ ವಾರದ ಆರಂಭದಲ್ಲಿ ಸಿರಿಯಾ ಸರ್ಕಾರವು ಸ್ಥಳೀಯ ಡ್ರೂಝ್ ಹೋರಾಟಗಾರರ ವಶದಲ್ಲಿರುವ ಪ್ರದೇಶಗಳ ಮೇಲೆ ಹಿಡಿತ ಸಾಧಿಸಲು ಸ್ವೀಡಾದಲ್ಲಿ ಪಡೆಗಳನ್ನು ನಿಯೋಜಿಸಿತ್ತು. ಜು. 13ರಂದು ಡ್ರೂಝ್ ಗುಂಪುಗಳು ಮತ್ತು ಸುನ್ನಿ ಮುಸ್ಲಿಂ ಬೆಡೋಯಿನ್ ಬುಡಕಟ್ಟು ಜನಾಂಗದ ನಡುವೆ ಭೀಕರ ಸಂಘರ್ಷ ನಡೆದು 100ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಸುವ್ಯವಸ್ಥೆಯನ್ನು ಪುನಃಸ್ಥಾಪಿಸಲು ಸಿರಿಯನ್ ಪಡೆಗಳನ್ನು ಆ ಪ್ರದೇಶಕ್ಕೆ ಕಳುಹಿಸಲಾಗಿದೆ ಎಂದು ಸರ್ಕಾರದ ಹೇಳಿದೆ. ಈ ನಡುವೆ ಕದನ ವಿರಾಮದ ಮಾತುಕತೆಗಳು ಕೂಡ ನಡೆದಿತ್ತು. ಕದನ ವಿರಾಮ ಒಪ್ಪಂದ ಮುರಿದ ಬೆನ್ನಲ್ಲೇ ಡ್ರೂಝ್ ಅಲ್ಪಸಂಖ್ಯಾತರನ್ನು ಬೆಂಬಲಿಸಿ ಇಸ್ರೇಲ್ ಈ ದಾಳಿ ನಡೆಸಿದೆ.
ಇದನ್ನು ಓದಿದ್ದೀರಾ? ಧರ್ಮಸ್ಥಳ ಪ್ರಕರಣ | ವಿಶೇಷ ತನಿಖಾ ತಂಡ ರಚನೆ ಭರವಸೆ ನೀಡಿದ ಸಿಎಂ ಸಿದ್ದರಾಮಯ್ಯ
ಈ ದಾಳಿಗಳನ್ನು ಸಿರಿಯಾದ ಸಾರ್ವಭೌಮತ್ವದ ಉಲ್ಲಂಘನೆ ಎಂದು ಟರ್ಕಿ, ಕತಾರ್, ಮತ್ತು ಇತರ ಅರಬ್ ರಾಷ್ಟ್ರಗಳು ಖಂಡಿಸಿವೆ. ಆದರೆ, ಇಸ್ರೇಲ್ ತನ್ನ ಕಾರ್ಯಾಚರಣೆಗಳನ್ನು ರಾಷ್ಟ್ರೀಯ ಭದ್ರತೆಗಾಗಿ ಅಗತ್ಯ ಎಂದು ಸಮರ್ಥಿಸಿಕೊಂಡಿದೆ.
