ಕ್ಯಾಬ್‌ನಲ್ಲಿ ಪ್ರಯಾಣಿಸುವಾಗ ಮಹಿಳೆಯೊಬ್ಬರು ಫೋನ್‌ನಲ್ಲಿ ಮಾತಾಡಿದ ಮಾತುಗಳನ್ನು ಕದ್ದಾಲಿಸಿ, ಅವರ ವೈಯಕ್ತಿಕ ವಿವರಗಳೊಂದಿಗೆ ಕ್ಯಾಬ್ ಚಾಲಕ ಬ್ಲ್ಯಾಕ್‌ಮೇಲ್ ಮಾಡಿ ₹22 ಲಕ್ಷ ಹಣ ಹಾಗೂ ಮುಕ್ಕಾಲು ಕೆಜಿ ಬಂಗಾರ ಸುಲಿಗೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸಂತ್ರಸ್ತ ಮಹಿಳೆ ಕ್ಯಾಬ್ ಚಾಲಕನ ವಿರುದ್ಧ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಆಗಸ್ಟ್ 2 ರಂದು ಸುಲಿಗೆ ಮಾಡಿದ ಆರೋಪಿ ಚಾಲಕ, ಬೆಂಗಳೂರಿನ ಹೆಸರುಘಟ್ಟ ನಿವಾಸಿ ಕಿರಣ್ ಕುಮಾರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಆತನಿಂದ ನಗದು ಮತ್ತು ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.
ಏನಿದು ಘಟನೆ?
ನವೆಂಬರ್ 22ರಂದು ಮಹಿಳೆಯೊಬ್ಬರು ಇಂದಿರಾನಗರದಿಂದ ಬಾಣಸವಾಡಿಗೆ ತೆರಳಲು ಕ್ಯಾಬ್ ಬುಕ್ ಮಾಡಿದ್ದರು. ಈ ವೇಳೆ, ಆರೋಪಿ ಕ್ಯಾಬ್ ಚಾಲಕ ಕಿರಣ ಆಕಯನ್ನು ಪಿಕಪ್ ಮಾಡಿದ್ದನು. ಕ್ಯಾಬ್‌ನಲ್ಲಿ ತೆರಳುವಾಗ ಮಹಿಳೆ ತಮ್ಮ ಗೆಳೆಯನ ಜೊತೆ ಫೋನ್‌ನಲ್ಲಿ ವೈಯಕ್ತಿಕ ವಿಚಾರ ಮಾತಾಡಿ, ಸಲಹೆಗಳನ್ನು ಕೇಳುತ್ತಿದ್ದರು.
ಆರೋಪಿ ಕಿರಣ್ ಕುಮಾರ್ ಮಹಿಳೆಯ ಸಂಪೂರ್ಣ ಸಂಭಾಷಣೆಯನ್ನು ಕದ್ದಾಲಿಸಿದ್ದಾನೆ. ಬಳಿಕ, ಮಹಿಳೆಯ ಬಾಲ್ಯದ ಸ್ನೇಹಿತ ಎಂದು ಹೇಳಿಕೊಂಡು ಆಕೆಗೆ ಕರೆ ಮಾಡಿ ಮಾತಾಡಿದ್ದಾನೆ. ತಾನೂ ತುಂಬಾ ಕಷ್ಟದಲ್ಲಿದ್ದು, ಸಹಾಯ ಮಾಡುವಂತೆ ಮಹಿಳೆಗೆ ಕೇಳಿಕೊಂಡಿದ್ದಾನೆ.
ಸ್ನೇಹಿತ ಎಂದು ಕಷ್ಟಕ್ಕೆ ಮರುಗಿದ ಮಹಿಳೆ ಸುಮಾರು ₹22 ಲಕ್ಷ ಹಣ ನೀಡಿದ್ದಾಳೆ. ಕೆಲ ದಿನಗಳ ಬಳಿಕ ಮಹಿಳೆಗೆ ಹಣ ಪಡೆದಿದ್ದು ಸ್ನೇಹಿತ ಅಲ್ಲ ಕ್ಯಾಬ್ ಡ್ರೈವರ್ ಎನ್ನುವುದು ಗೊತ್ತಾಗಿದೆ. ಕೋಪಗೊಂಡು ಮಹಿಳೆ ಕ್ಯಾಬ್ ಚಾಲಕನಿಗೆ ಪ್ರಶ್ನೆ ಮಾಡಿದ್ದಾಳೆ.
“ನಿನ್ನ ಹಾಗೂ ನಿನ್ನ ಗೆಳೆಯನ ವಿಷಯವನ್ನು ನಿನ್ನ ಗಂಡನಿಗೆ ಹೇಳಿ, ನಿನ್ನ ಸಂಸಾರ ಹಾಳು ಮಾಡುತ್ತೇನೆ” ಎಂದು ಮಹಿಳೆಗೆ ಆರೋಪಿ ಚಾಲಕ ಬ್ಲ್ಯಾಕ್ ಮೇಲ್ ಮಾಡುವುದಕ್ಕೆ ಪ್ರಾರಂಭಿಸಿದ್ದಾನೆ. ಹಣ ನೀಡಿದರೆ ಈ ವಿಷಯ ಯಾರಿಗೂ ತಿಳಿಸುವುದಿಲ್ಲ ಎಂದು ಹೇಳಿದ್ದಾನೆ.
ಸಂತ್ರಸ್ತೆ ತನ್ನ ಬಳಿ ಹೆಚ್ಚು ಹಣವಿಲ್ಲ ಎಂದು ಹೇಳಿದಾಗ, ಆರೋಪಿಯು ಆಕೆಯ ಬೆಲೆಬಾಳುವ ವಸ್ತುಗಳನ್ನು ಕೊಡುವಂತೆ ಕೇಳಿದ್ದಾನೆ. ಆತನಿಗೆ ಮಹಿಳೆ 750 ಗ್ರಾಂ ಚಿನ್ನಾಭರಣ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಜುಲೈನಲ್ಲಿ ವಾಡಿಕೆಗಿಂತ ಶೇ.3ರಷ್ಟು ಹೆಚ್ಚು ಮಳೆ
ಇಷ್ಟಕ್ಕೆ ಸುಮ್ಮನಾಗದ ಆರೋಪಿ ಇನ್ನೂ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಾಗ ಸಂತ್ರಸ್ತೆ ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿದ್ದಾರೆ.
ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಗಿರವಿ ಇಟ್ಟಿದ್ದ ಬೆಲೆಬಾಳುವ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
ಇಂತಹ ಸಂದರ್ಭಗಳನ್ನು ತಪ್ಪಿಸಲು ಸಾರ್ವಜನಿಕ ಸ್ಥಳಗಳಲ್ಲಿ ವೈಯಕ್ತಿಕ ಮಾಹಿತಿಯನ್ನು ಚರ್ಚಿಸದಂತೆ ಡಿಸಿಪಿ (ಪೂರ್ವ ವಿಭಾಗ) ಭೀಮಾಶಂಕರ್ ಗುಳೇದ್ ವಿನಂತಿಸಿದ್ದಾರೆ.