ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತದಲ್ಲಿ 11 ಜನರು ಸಾವನ್ನಪ್ಪಿ 50ಕ್ಕೂ ಹೆಚ್ಚು ಜನರು ಗಾಯಗೊಂಡ ಘಟನೆಯ ಸ್ಥಿತಿಗತಿ ವರದಿಯನ್ನು ಕರ್ನಾಟಕ ಸರ್ಕಾರವು ಹೈಕೋರ್ಟ್‌ಗೆ ಸಲ್ಲಿಸಿದೆ. ದುರ್ಘಟನೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಫ್ರಾಂಚೈಸಿಯ ಗಂಭೀರ ಲೋಪಗಳೇ ಕಾರಣವೆಂದು ಆರೋಪಿಸಿದೆ.
ರಾಜ್ಯ ಸರ್ಕಾರದ ಪ್ರಕಾರ, ಕಾರ್ಯಕ್ರಮ ಆಯೋಜಕ ಸಂಸ್ಥೆ ‘ಡಿಎನ್‌ಎ’ ಕಾರ್ಯಕ್ರಮದ ಆಯೋಜನೆಗೆ ಯಾವುದೇ ಔಪಚಾರಿಕ ಅನುಮತಿಯನ್ನು ಪಡೆದಿಲ್ಲ. ಆರ್‌ಸಿಬಿ ವಿಜಯೋತ್ಸವದ ಮೆರವಣಿಗೆಯ ಬಗ್ಗೆ ಜೂನ್ 3ರಂದು ಮಾತ್ರವೇ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಆದರೆ, ಅನುಮತಿ ನೀಡಲು ಪೊಲೀಸರು ನಿರಾಕರಿಸಿದ್ದಾರೆ. ಆದಾಗ್ಯೂ, ಕಾರ್ಯಕ್ರಮ ಆಯೋಜಿಸಲಾಗಿದೆ.
ಪೊಲೀಸರ ನಿರಾಕರಣೆಯ ಹೊರತಾಗಿಯೂ, ಆರ್‌ಸಿಬಿ ಸಾರ್ವಜನಿಕವಾಗಿ ಕಾರ್ಯಕ್ರಮ ನಡೆಸುವ ಬಗ್ಗೆ ಪ್ರಚಾರ ಮಾಡಿತು. ಜೂನ್ 4ರಂದು, ಅವರು ವಿರಾಟ್ ಕೊಹ್ಲಿ ಅವರ ವಿಡಿಯೋ ಸೇರಿದಂತೆ ಸಾಮಾಜಿಕ ಮಾಧ್ಯಮದಲ್ಲಿ ಕಾರ್ಯಕ್ರಮಕ್ಕೆ ಮುಕ್ತ ಆಹ್ವಾನಗಳನ್ನು ನೀಡಿದ್ದಾರೆ. ಅಭಿಮಾನಿಗಳಿಗೆ ಮುಕ್ತ ಪ್ರವೇಶ ಇದ್ದು, ಆಚರಣೆಯಲ್ಲಿ ಭಾಗವಹಿಸುವಂತೆ ಕರೆಕೊಟ್ಟಿದ್ದಾರೆ ಎಂದು ಸರ್ಕಾರ ಹೇಳಿದೆ.
“ಆರ್‌ಸಿಬಿ ಫ್ರಾಂಚೈಸಿ ಬೆಂಗಳೂರು ಪೊಲೀಸರ ಅನುಮತಿ ಇಲ್ಲದೆಯೂ, ಏಕಪಕ್ಷೀಯವಾಗಿ ಜೂನ್ 4ರ ಬೆಳಗ್ಗೆ 7:01 ಮತ್ತು 8:00 ಗಂಟೆಗೆ ಸಾಮಾಜಿಕ ಮಾಧ್ಯಮದ ಅಧಿಕೃತ ಆರ್‌ಸಿಬಿ ಹ್ಯಾಂಡಲ್‌ನಲ್ಲಿ (ಇನ್‌ಸ್ಟಾಗ್ರಾಮ್, ಫೇಸ್‌ಬುಕ್, ಎಕ್ಸ್) ಸಂಭ್ರಮಾಚರಣೆಗೆ ಆಹ್ವಾನಿಸಿದೆ. ಜನರಿಗೆ ಉಚಿತ ಪ್ರವೇಶವಿದೆ ಮತ್ತು ವಿಧಾನಸೌಧದಿಂದ ಚಿನ್ನಸ್ವಾಮಿ ಕ್ರೀಡಾಂಗಣದವರೆಗೆ ಮೆರವಣಿಗೆ ನಡೆಯಲಿದೆಯೆಂದು ಸಾರ್ವಜನಿಕರನ್ನು ಆಹ್ವಾನಿಸುವ ಪೋಸ್ಟರ್‌ಗಳನ್ನು ಹಂಚಿಕೊಂಡಿದೆ” ಎಂದು ವರದಿಯಲ್ಲಿ ವಿವರಿಸಲಾಗಿದೆ.
“ಅದೇ ಜೂನ್ 4ರ ಬೆಳಗ್ಗೆ 8:55ಕ್ಕೆ ಆರ್‌ಸಿಬಿಯ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರ ವಿಡಿಯೋ ಕ್ಲಿಪ್‌ಅನ್ನೂ ಆರ್‌ಸಿಬಿ ಅಧಿಕೃತ ‘ಎಕ್ಸ್’ ಹ್ಯಾಂಡಲ್ ‘@rcbtweets’ನಲ್ಲಿ ಹಂಚಿಕೊಂಡಿದೆ. ಅದರಲ್ಲಿ, ಕೊಹ್ಲಿ ಅವರು ತಂಡವು ಐಪಿಎಲ್ ಗೆಲುವನ್ನು ಬೆಂಗಳೂರು ನಗರದ ಜನರು ಮತ್ತು ಆರ್‌ಸಿಬಿ ಅಭಿಮಾನಿಗಳೊಂದಿಗೆ ಜೂನ್ 4ರಂದು ಸಂಜೆ ಬೆಂಗಳೂರಿನಲ್ಲಿ ಆಚರಿಸಲು ಉದ್ದೇಶಿಸಿದೆ ಎಂದಿದ್ದರು. ನಂತರ, ಮಧ್ಯಾಹ್ನ 3:14ಕ್ಕೆ ಮತ್ತೊಂದು ಪೋಸ್ಟ್ ಮಾಡಿದ್ದ ಆರ್‌ಸಿಬಿ, ಸಂಜೆ 5 ಗಂಟೆಯಿಂದ 6 ಗಂಟೆಯವರೆಗೆ ವಿಧಾನಸೌಧದಿಂದ ಚಿನ್ನಸ್ವಾಮಿ ಕ್ರೀಡಾಂಗಣದವರೆಗೆ ವಿಜಯೋತ್ಸವ ಮೆರವಣಿಗೆ ನಡೆಯಲಿದೆ ಮತ್ತು ಕ್ರೀಡಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂಬುದಾಗಿ ಘೋಷಿಸಿತ್ತು” ಎಂದು ವರದಿಯಲ್ಲಿ ವಿವರಿಸಲಾಗಿದೆ.
“ಮಧ್ಯಾಹ್ನ 3:14 ಗಂಟೆಗೆ ಹಂಚಿಕೊಂಡ ಪೋಸ್ಟ್‌ನಲ್ಲಿ shop.royalchallengers.comನಲ್ಲಿ ಉಚಿತ ಪಾಸ್‌ಗಳು (ಸೀಮಿತ ಪ್ರವೇಶ) ಲಭ್ಯವಿದೆ ಎಂಬುದಾಗಿ ಹೇಳಿತ್ತು. ಅಂದರೆ, ಕಾರ್ಯಕ್ರಮಕ್ಕೆ ಮುಕ್ತ ಅವಕಾಶವಿದೆ ಎಂಬುದನ್ನು ಸೂಚಿಸಿತ್ತು. ಆರ್‌ಸಿಬಿ ಪೋಸ್ಟ್ ಹಾಕಿದ ಕೆಲವೇ ನಿಮಿಷಗಳಲ್ಲಿ ಪೋಸ್ಟ್ ವೈರಲ್ ಆಗಿದ್ದು, ಅಪಾರ ಸಂಖ್ಯೆಯ ಜನರು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಧಾವಿಸಿದರು. ಸುಮಾರು 3 ಲಕ್ಷಕ್ಕೂ ಹೆಚ್ಚು ಜನರು ಕ್ರೀಡಾಂಗಣದ ಬಳಿ ಸೇರಿದ್ದರು” ಎಂದು ತಿಳಿಸಿದೆ.
ಈ ಲೇಖನ ಓದಿದ್ದೀರಾ?: ಎತ್ತ ಸಾಗುತ್ತಿದೆ ಬೆಂಗಳೂರು ಕಾಲ್ತುಳಿತ ಪ್ರಕರಣದ ತನಿಖೆ?
“ನಿರೀಕ್ಷೆ ಮೀರಿದ್ದ ಜನಸಂದಣಿಯನ್ನು ನಿರ್ವಹಿಸುವ ಸಾಮರ್ಥ್ಯವೂ ಹೆಚ್ಚಿತ್ತು. ಜನದಟ್ಟಣೆ ಹೆಚ್ಚಿದ್ದರಿಂದ, ಕಾರ್ಯಕ್ರಮಕ್ಕೂ ಕೆಲವೇ ನಿಮಿಷಗಳು ಬಾಕಿ ಇರುವಾಗ, ಕ್ರೀಡಾಂಗಣ ಪ್ರವೇಶಕ್ಕೆ ಪಾಸ್‌ಗಳನ್ನು ಹೊಂದಿರಬೇಕೆಂದು ಆಯೋಜಕರು ಹಠಾತ್ತನೆ ಘೋಷಿಸಿದರು. ಇದು ಆರ್‌ಬಿಸಿ ಘೋಷಿಸಿದ್ದ ಹಿಂದಿನ ಪೋಸ್ಟ್‌ಗಳಿಗೆ ವಿರುದ್ಧವಾಗಿತ್ತು. ಮಾತ್ರವಲ್ಲದೆ, ಗೊಂದಲ ಮತ್ತು ಭೀತಿಯನ್ನು ಉಂಟುಮಾಡಿತು” ಎಂದು ವರದಿ ಹೇಳಿದೆ.
“ಆರ್‌ಸಿಬಿ, ಡಿಎನ್‌ಎ ಮತ್ತು ಕೆಎಸ್‌ಸಿಎ ಪರಿಣಾಮಕಾರಿಯಾದ ಸಮನ್ವಯ ಸಾಧಿಸುವಲ್ಲಿ ವಿಫಲವಾಗಿವೆ. ಕ್ರೀಡಾಂಗಣದ ಪ್ರವೇಶ ದ್ವಾರಗಳಲ್ಲಿ ಅಸಮರ್ಪಕ ನಿರ್ವಹಣೆ, ಹಲವು ಗೇಟ್‌ಗಳನ್ನು ಬಂದ್ ಮಾಡಿದ್ದು, ಕಾಲ್ತುಳಿತಕ್ಕೆ ಕಾರಣವಾಯಿತು. ಇದರ ಪರಿಣಾಮವಾಗಿ ಏಳು ಪೊಲೀಸ್ ಸಿಬ್ಬಂದಿಗೆ ಗಾಯವಾಯಿತು. ಮತ್ತಷ್ಟು ಅಶಾಂತಿಯನ್ನು ತಡೆಗಟ್ಟಲು, ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಹರಸಾಹಸಪಟ್ಟಿದ್ದಾರೆ” ಎಂದು ಹೇಳಿದೆ.
“ದುರ್ಘಟನೆಯ ಕಾರಣಕ್ಕಾಗಿ ಮ್ಯಾಜಿಸ್ಟೀರಿಯಲ್ ಮತ್ತು ನ್ಯಾಯಾಂಗ ತನಿಖೆಗಳು, ಎಫ್‌ಐಆರ್ ನೋಂದಣಿ, ಪೊಲೀಸ್ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಯ ಅಮಾನತು, ರಾಜ್ಯ ಗುಪ್ತಚರ ಮುಖ್ಯಸ್ಥರ ವರ್ಗಾವಣೆ ಹಾಗೂ ಸಂತ್ರಸ್ತರಿಗೆ ಪರಿಹಾರ ಘೋಷಣೆ ಸೇರಿದಂತೆ ನಾನಾ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ” ಎಂದು ವರದಿಯಲ್ಲಿ ವಿವರಿಸಲಾಗಿದೆ.
ದುರ್ಘಟನೆಯ ಬಳಿಕ, ರಾಜ್ಯ ಸರ್ಕಾರವು ಜೂನ್ 5ರಂದು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯ ಉನ್ನತ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿತು. ಘಟನೆಯ ತನಿಖೆಗಾಗಿ ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಏಕವ್ಯಕ್ತಿ ಆಯೋಗವನ್ನು ರಚಿಸಿತು. ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂ.ಗಳ ಪರಿಹಾರವನ್ನು ಘೋಷಿಸಿತು. ಬಳಿಕ, ಪರಿಹಾರ ಮೊತ್ತವನ್ನು 25 ಲಕ್ಷ ರೂ.ಗೆ ಹೆಚ್ಚಿಸಲಾಯಿತು.