ಬರೋಬ್ಬರಿ 3.3 ವರ್ಷಗಳ ಕಾಲ ಹೋರಾಟ ಮಾಡಿದ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ ರೈತರು ತಮ್ಮ ಭೂಮಿಯನ್ನು ಉಳಿಸಿಕೊಂಡಿದ್ದಾರೆ. ರೈತ ಹೋರಾಟಕ್ಕೆ ಮಣಿದ ಸರ್ಕಾರವು ಭೂಸ್ವಾಧೀನ ಪ್ರಕ್ರಿಯೆಯನ್ನು ರದ್ದುಗೊಳಿಸಿದೆ. ಭೂಸ್ವಾಧೀನದಿಂದ ಹಿಂದೆ ಸರಿದ ಸರ್ಕಾರವನ್ನು ಟೀಕಿಸಿ, ರೈತ ವಿರೋಧಿ ಪೋಸ್ಟ್ ಮಾಡಿದ್ದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಇದೀಗ ತನ್ನ ಪೋಸ್ಟ್‌ಅನ್ನು ಡಿಲೀಟ್ ಮಾಡಿದ್ದಾರೆ.
ಚನ್ನರಾಯಪಟ್ಟಣ ರೈತರು 2022ರಿಂದ ನಿರಂತರವಾಗಿ ಹೋರಾಟ ನಡೆಸುತ್ತಿದ್ದರು. ರೈತರು ಹೋರಾಟ ಆರಂಭಿಸಿದಾಗ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿತ್ತು. ಆದರೆ, ರೈತ ಹೋರಾಟಕ್ಕೆ ಸರ್ಕಾರದಿಂದ ಯಾವುದೇ ಸ್ಪಂದನೆ ದೊರೆತಿರಲಿಲ್ಲ. ಬಿಜೆಪಿ ಸರ್ಕಾರವು ತನ್ನ ರೈತ ವಿರೋಧಿ ಧೋರಣೆಯನ್ನು ಪ್ರದರ್ಶಿಸಿತ್ತು. ಇದೀಗ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ರೈತರ ಜೊತೆಗೆ ಹಗ್ಗಜಗ್ಗಾಟ ನಡೆಸಿ, ಅಂತಿಮವಾಗಿ ಭೂಸ್ವಾಧೀನ ಪ್ರಕ್ರಿಯೆಯನ್ನು ರದ್ದುಗೊಳಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿರೋಧ ಪಕ್ಷದಲ್ಲಿದ್ದ ರೈತರಿಗೆ ನೀಡಿದ್ದ ಭರವಸೆಯನ್ನು ಉಳಿಸಿಕೊಳ್ಳಲು ಸಚಿವ ಸಂಪುಟ ಸಭೆಯಲ್ಲಿ ಪಟ್ಟು ಹಿಡಿದು, ಭೂಸ್ವಾಧೀನ ಪ್ರಕ್ರಿಯೆಯನ್ನು ರದ್ದುಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.
ಆದಾಗ್ಯೂ, ಸರ್ಕಾರದ ನಡೆಯನ್ನು ಟೀಕಿಸಿ ಪೋಸ್ಟ್ ಹಾಕಿದ್ದ ತೇಜಸ್ವಿ ಸೂರ್ಯ, “ಉದ್ದಿಮೆಗಳನ್ನು ಆಕರ್ಷಿಸುವ ಮತ್ತು ಉದ್ಯೋಗಗಳನ್ನು ಸೃಷ್ಟಿಸುವ ಕಾಂಗ್ರೆಸ್ ಸರ್ಕಾರದ ರೀತಿ ಇದು. ಕರ್ನಾಟಕ ಸರ್ಕಾರ ನಾರಾ ಲೋಕೇಶ್ ಅವರಿಂದ ಪಾಠ ಕಲಿತುಕೊಳ್ಳಬೇಕು, ತನ್ನ ಹಾದಿಯನ್ನು ಸರಿಪಡಿಸಿಕೊಳ್ಳಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನಲ್ಲಿ ಏರೋಸ್ಪೇಸ್ ಪಾರ್ಕ್ ಸ್ಥಾಪಿಸಲು ರಾಜಕೀಯ ಇಚ್ಛಾಶಕ್ತಿ ತೋರಿಸಬೇಕು. ಎಚ್ಎಎಲ್, ಎನ್ಎಎಲ್, ಡಿಆರ್‌ಡಿಒ, ಇಸ್ರೋ, ಏರ್‌ಬಸ್, ಬೋಯಿಂಗ್ ಸೇರಿದಂತೆ ಸರ್ಕಾರಿ, ಖಾಸಗಿ ಸಂಸ್ಥೆಗಳು, ನವೋದ್ಯಮಗಳನ್ನು ಹೊಂದಿರುವ ಬೆಂಗಳೂರು ಭಾರತದ ಏರೋಸ್ಪೇಸ್ ರಾಜಧಾನಿ ಆಗಿದೆ” ಎಂದಿದ್ದರು.
This 'Young BJP MP' deleted this tweet criticising Siddaramaiah's decision of cancellation of the Devanahalli farmers land acquisition. pic.twitter.com/r8EI6zbdY4
— Mohammed Zubair (@zoo_bear) July 16, 2025
ಬಳಿಕ, ತಮ್ಮ ಪೋಸ್ಟ್‌ಅನ್ನು ತೇಜಸ್ವಿ ಸೂರ್ಯ ಡಿಲೀಟ್ ಮಾಡಿದ್ದಾರೆ. ಅವರ ಪೋಸ್ಟ್‌ನ ಸ್ಕ್ರೀನ್‌ಶಾಟ್ ಹಂಚಿಕೊಂಡಿರುವ ಪತ್ರಕರ್ತ ಮುಹಮ್ಮದ್ ಝುಭೇರ್, “ದೇವನಹಳ್ಳಿ ರೈತರ ಹೋರಾಟದ ಫಲವಾಗಿ ಭೂಸ್ವಾಧೀನ ರದ್ದುಗೊಳಿಸಿದ ಸಿದ್ದರಾಮಯ್ಯ ಅವರ ನಿರ್ಧಾರವನ್ನು ಬಿಜೆಪಿ ಯುವ ಸಂಸದ ಟೀಕಿಸಿದ್ದು, ಈಗ ತನ್ನ ಟ್ವೀಟ್‌ಅನ್ನು ಡಿಲೀಟ್ ಮಾಡಿದ್ದಾರೆ” ಎಂದು ಹೇಳಿದ್ದಾರೆ.
ನಟ ಪ್ರಕಾಶ್ ರಾಜ್ ಕೂಡ ಸ್ಕ್ರೀನ್‌ಶಾಟ್‌ಅನ್ನು ಹಂಚಿಕೊಂಡಿದ್ದು, “ತೇಜಸ್ವಿ ಸೂರ್ಯ ಅವರೇ, ರೈತ ವಿರೋಧಿ ಪೋಸ್ಟ್‌ನ್ನು ಯಾಕೆ ಡಿಲೀಟ್ ಮಾಡಿದ್ದೀರಿ? ಹೆದರಿಕೊಂಡ್ರಾ” ಎಂದು ಪ್ರಶ್ನಿಸಿದ್ದಾರೆ.
ತೇಜಸ್ವಿ ಸೂರ್ಯ ಅವರು ರೈತ ವಿರೋಧಿ ಹೇಳಿಕೆ ನೀಡಿರುವುದು ಇದೇ ಮೊದಲೇನೂ ಅಲ್ಲ. ರೈತರ ಸಾಲ ಮನ್ನಾ ಮಾಡುವ ವಿಚಾರವನ್ನೂ ತೇಜಸ್ವಿ ಸೂರ್ಯ ಟೀಕಿಸಿದ್ದರು. ರೈತರ ಸಾಲ ಮನ್ನಾ ಮಾಡಿದರೆ ಯಾವುದೇ ರೀತಿಯ ಉಪಯೋಗ ಇಲ್ಲ ಎಂದಿದ್ದ ಅವರು ರೈತರ ಕೆಂಗಣ್ಣಿಗೆ ಗುರಿಯಾಗಿದ್ದರು.