ಹಲವು ದಿನಗಳಿಂದ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆ ಮಂಗಳೂರು ನಗರದ ಹಲವೆಡೆ ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿ ಜಲಾವೃತಗೊಂಡಿವೆ. ಕೆಲವೊಂದು ಮನೆಗಳ ಒಳಗೆ ನೀರು ನುಗ್ಗಿದ ಹಿನ್ನಲೆ ನಿವಾಸಿಗಳು ರಾತ್ರಿಯಿಡೀ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಬುಧವಾರ ತಡರಾತ್ರಿ ಸುರಿದ ಬಿರುಸಿನ ಮಳೆಗೆ ನಗರದ ಕೊಡಿಯಾಲಬೈಲು, ಪಂಪ್ವೆಲ್, ಪಡೀಲ್, ಬಜಾಲ್, ಮಾಲೆಮಾರ್, ಜಪ್ಪಿನಮೊಗರು, ಕೊಟ್ಟಾರಚೌಕಿ ಸೇರಿದಂತೆ ನಗರದ ಪ್ರಮುಖ ಭಾಗದ ಮನೆ ಆವರಣಕ್ಕೆ ಕೃತಕ ನೆರೆ ಆವರಿಸಿದೆ. ರಸ್ತೆಗಳಲ್ಲಿ ಮಳೆ ನೀರು ನಿಂತು ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ. ರಸ್ತೆ ಬದಿ ನಿಲ್ಲಿಸಿದ್ದ ವಾಹನಗಳಿಗೂ ಹಾನಿಯಾಗಿದೆ.

ಇದನ್ನೂ ಓದಿ: ಉಪ್ಪಿನಂಗಡಿ | ಗುಡ್ಡ ಕುಸಿತ: ಮಂಗಳೂರು-ಬೆಂಗಳೂರು ಹೆದ್ದಾರಿಯಲ್ಲಿ ಸಂಚಾರ ಸ್ಥಗಿತ
ಭಾರೀ ಮಳೆಗೆ ಮಂಗಳೂರಿನ ಸರ್ಕೀಟ್ಹೌಸ್ ಬಳಿಯ ಗುಡ್ಡ ಕುಸಿದಿದೆ. ಗುಡ್ಡದ ಮಣ್ಣು ರಸ್ತೆಗೆ ಬಿದ್ದ ಹಿನ್ನೆಲೆ ಒಂದು ಬದಿಯ ರಸ್ತೆಯಲ್ಲಿ ವಾಹನ ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಂಡು, ಜನಜೀವನ ಅಸ್ತವ್ಯಸ್ತವಾಗಿದೆ.
ಇನ್ನು ದ.ಕ. ಜಿಲ್ಲಾಧಿಕಾರಿ ದರ್ಶನ್ ಎಚ್ ವಿ, ನಗರದ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
