ವೈದ್ಯಕೀಯ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಬಳ್ಳಾರಿ ನಗರದ ಹಿರಿಯ ವೈದ್ಯ ಡಾ. ಸುಮನ್ ಸೋಮೇಶ್ವರ್ ಗಡ್ಡಿಯವರಿಗೆ ವೈದ್ಯಕೀಯ ಕ್ಷೇತ್ರದಲ್ಲಿ ಗಣನೀಯ ಸಾಧನೆಗೈದ ವೈದ್ಯರಿಗೆ ನೀಡುವ ಪ್ರತಿಷ್ಠಿತ ಐಎಂಎ ನ್ಯಾಷನಲ್ ಡಾಕ್ಟರ್ ಅಕಾಡೆಮಿಕ್ ಪ್ರಶಸ್ತಿ ಲಭಿಸಿದೆ.
ಅಬ್ದುಲ್ ನಬಿ ಸಾಬ್ ಅಬೂಬಕರ್ ಸಿದ್ದಿಕ್ ಎಜುಕೇಶನಲ್ ವೆಲ್ಫೇರ್ ಟ್ರಸ್ಟ್ ವತಿಯಿಂದ ಡಾ. ಸುಮನ್ ಗಡ್ಡಿ ಅವರನ್ನು ಸನ್ಮಾನಿಸಿ ಗೌರವಿಸಲಾಗಿದೆ.
ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ವಕ್ಫ್ ಬೋರ್ಡ್ ಅಧ್ಯಕ್ಷ ಹುಮಯೂನ್ ಖಾನ್ ಮಾತನಾಡಿ, “ಇಂದಿನ ದಿನಗಳಲ್ಲಿ ಮಹಿಳೆಯರು ಮಿಲಿಟರಿ, ಎರೋಸ್ಪೇಸ್ ಸಾಹಿತ್ಯ, ಕಲೆ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ಅದೇ ಪ್ರಕಾರವಾಗಿ ನಗರದ ದಾನಮ್ಮ ಆಸ್ಪತ್ರೆಯ ಹಿರಿಯ ಮಹಿಳಾ ವೈದ್ಯರಾದ ಡಾ. ಸುಮನ್ ಗಡ್ಡಿಯವರು ಸಹ ತಮ್ಮ ವೈದ್ಯಕೀಯ ವೃತ್ತಿಯಲ್ಲಿ ಕಳೆದ ಹಲವು ದಶಕಗಳಿಂದ ನಗರದಲ್ಲಿ ಗಣನೀಯ ಸೇವೆಯನ್ನು ಮಾಡುತ್ತಾ ಬಂದಿರುತ್ತಾರೆ ಇವರಿಗೆ ದೇಶದ ಪ್ರತಿಷ್ಠಿತ ಐಎಂಎ ನ್ಯಾಷನಲ್ ಡಾಕ್ಟರೇಟ್ ಪ್ರಶಸ್ತಿ ಲಭಿಸಿರುವುದು ಸಂತಸದ ವಿಷಯ” ಎಂದರು.
ಟ್ರಸ್ಟ್ ಅಧ್ಯಕ್ಷ ಮಹಮದ್ ಅಲಿ ಮಾತನಾಡಿ, “ಡಾ. ಸುಮನ್ ಸೋಮೇಶ್ವರ್ ಗಡ್ಡಿ ಅವರು ನಮಗೆ ಕಳೆದ ಹಲವು ವರ್ಷಗಳಿಂದ ಚಿರಪರಿಚಿತರಿದ್ದು ನಮ್ಮ ಯಾವುದೇ ಆರೋಗ್ಯ ತೊಂದರೆ ಇದ್ದಲ್ಲಿ ಇವರನ್ನ ಸಂಪರ್ಕಿಸಿ ಸಲಹೆ ಮತ್ತು ಚಿಕಿತ್ಸೆ ಪಡೆಯುತ್ತಿದ್ದೇವೆ. ಆರ್ಥಿಕವಾಗಿ ಅಸಹಾಯಕರಾದ ರೋಗಿಗಳಿಗೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಹಾಗೂ ಉಚಿತವಾಗಿ ಚಿಕಿತ್ಸೆ ನೀಡಿದ ಉದಾಹರಣೆಗಳಿವೆ ಇಂಥ ವೈದ್ಯರಿಗೆ ಅಕಾಡೆಮಿಕ್ ಪ್ರಶಸ್ತಿ ಬಂದಿರುವುದು ಅವರ ಸೇವೆಗೆ ತಕ್ಕ ಪ್ರತಿಫಲ” ಎಂದರು.
ಇದನ್ನೂ ಓದಿ: ಬಳ್ಳಾರಿ | ಫಲಿಸಿದ ವರ್ಷಗಳ ಹೋರಾಟ; ತೋರಣಗಲ್ಲಿನಲ್ಲಿ ನೂತನ ಪದವಿಪೂರ್ವ ಕಾಲೇಜು
ಡಾ. ಸುಮನ್ ಗಡ್ಡಿ ಅವರು ತಮ್ಮ ಭಾಷಣದಲ್ಲಿ ಮಾತನಾಡಿ, “ಇದು ನನಗೆ ನನ್ನ ವೈದ್ಯಕೀಯ ವೃತ್ತಿಯಲ್ಲಿ ಖುಷಿ ಹಾಗೂ ಹೆಮ್ಮೆ ಪಡುವ ದಿನವಾಗಿದೆ ಕಳೆದ ಹಲವಾರು ದಶಕಗಳಿಂದ ನಗರದ ಸಾರ್ವಜನಿಕರಿಗೆ ವೈದ್ಯಕೀಯ ಸೇವೆಯನ್ನು ಒದಗಿಸಿರುವುದೇ ನನಗೆ ಈ ಪ್ರಶಸ್ತಿಗೆ ಆಯ್ಕೆಯಾಗಲು ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ರೀತಿಯಲ್ಲಿ ಸಮಾಜ ಸೇವೆಯನ್ನು ಮಾಡಲು ನನಗೆ ಜವಾಬ್ದಾರಿ, ಗೌರವ ಮತ್ತು ಇನ್ನಷ್ಟು ಹೊಣೆಗಾರಿಕೆಯನ್ನು ನೀಡಿದೆ” ಎಂದು ಸಂತಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮನಯ್ಯಾ, ಮೇತಬ್ ಅಲಿ, ಸಾರ್ಫಾರಾಜ್, ಜಾಹಿರುದ್ದಿನ್, ಅಲ್ತಾಫ್, ಹುಸೇನ್ ಭಾಷಾ ಸ್ಟಾರ್ ರಫೀಕ್, ಸೇಠು ವಲಿ, ಗಫ್ಫರ್, ಗೌಸ್, ಹನೀಫ್, ಜೈನುಲ್, ಟಿಪ್ಪು, ಅಬ್ದುಲ್ ಶೇಕ್ ಹಾಗೂ ಇತರರು ಉಪಸ್ಥಿತರಿದ್ದರು.