ಯಾದಗಿರಿ ತಾಲ್ಲೂಕಿನ ಅರಕೇರಾ (ಕೆ) ಗ್ರಾಮದ ಕಸ್ತೂರಬಾ ಗಾಂಧಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿನಿಯರಿಂದ ಶೌಚಾಲಯ ಸ್ವಚ್ಛ ಮಾಡಿಸಿದ್ದಾರೆ ಎನ್ನಲಾದ ವಿಡಿಯೊ ಗುರುವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ವಸತಿ ಶಾಲೆಯಲ್ಲಿ 8 ರಿಂದ 10ನೇ ತರಗತಿಯವರೆಗೆ 97 ವಿದ್ಯಾರ್ಥಿನಿಯರು ಇದ್ದಾರೆ. ವಾರಕ್ಕೊಮ್ಮೆ ಪಾಳಿ ಪ್ರಕಾರ ವಿದ್ಯಾರ್ಥಿನಿಯರೇ ಸ್ವಚ್ಛಗೊಳಿಸುವುದಾಗಿ ಕೆಲವರು ಹೇಳಿರುವುದು ವಿಡಿಯೊದಲ್ಲಿದೆ ಎನ್ನಲಾಗಿದೆ.
ಶೌಚಾಲಯ ಸ್ವಚ್ಛತೆಗೆ ಯಾರೂ ಸಿಗದ ಕಾರಣ ಒಮ್ಮೆ ವಿದ್ಯಾರ್ಥಿನಿಯರೇ ಸ್ವಚ್ಛ ಮಾಡಿಸಿರಬಹುದು. ಆದರೆ, ಇದನ್ನು ವಿಡಿಯೊ ಮಾಡಿದವರು ಪುರುಷರಾಗಿದ್ದಾರೆ. ಅವರಿಗೆ ಒಳಗೆ ಬರಲು ಯಾರು ಅನುಮತಿ ಕೊಟ್ಟಿದ್ದಾರೆ ಎಂದು ವಸತಿ ಶಾಲೆಯ ಮುಖ್ಯ ಶಿಕ್ಷಕಿ ಹೇಳಿದ್ದು, ಈ ಬಗ್ಗೆ ಮೇಲಾಧಿಕಾರಿಗಳಿಗೆ ದೂರು ನೀಡಲಾಗುವುದು ಎಂದು ತಿಳಿಸಿದ್ದಾರೆ.
ಮಕ್ಕಳಿಂದ ಶೌಚಾಲಯ ಸ್ವಚ್ಛಗೊಳಿಸಿದ ವಿಷಯ ಗಮನಕ್ಕೆ ಬಂದಿದ್ದು, ಸಮಗ್ರ ವರದಿ ವರದಿ ತರಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಡಿಡಿಪಿಐ ಸಿ.ಎಸ್.ಮುಧೋಳ ಹೇಳಿದ್ದಾರೆ.