ಕೋಟ್ಯಂತರ ರೂಪಾಯಿ ಸಾಲ ನೀಡುವ ಆಮಿಷ ಒಡ್ಡಿ 200 ಕೋಟಿ ರೂಪಾಯಿಗಿಂತಲೂ ಅಧಿಕ ಹಣವನ್ನು ವಂಚಿಸಿದ ಆರೋಪದ ಮೇಲೆ ನಟೋರಿಯಸ್ ವಂಚಕ ರೋಹನ್ ಸಲ್ಡಾನಾ(45) ಎಂಬಾತನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಮಂಗಳೂರಿನ ಜಪ್ಪಿನಮೊಗರು ನಿವಾಸಿಯಾಗಿರುವ ಈತ ತನ್ನ ಐಷಾರಾಮಿ ಜೀವನಶೈಲಿಯನ್ನೇ ಬಂಡವಾಳವಾಗಿಸಿಕೊಂಡು ವಂಚನೆ ಎಸಗುತ್ತಿದ್ದ. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಜುಲೈ 17ರಂದು ಆತನ ಬಂಗಲೆಯಲ್ಲಿಯೇ ಬಂಧಿಸಿದ್ದಾರೆ.
ಶ್ರೀಮಂತ ವ್ಯಕ್ತಿಗಳು ಮತ್ತು ಉದ್ಯಮಿಗಳನ್ನು ಟಾರ್ಗೆಟ್ ಮಾಡಿ, ತಾನೊಬ್ಬ ದೊಡ್ಡ ಉದ್ಯಮಿ ಎಂದು ಬಿಂಬಿಸಿಕೊಳ್ಳುತ್ತಿದ್ದ ರೋಹನ್, ದೊಡ್ಡ ಮೊತ್ತದ ಸಾಲ ಅಥವಾ ಭೂಮಿ ವ್ಯವಹಾರದ ಆಸೆ ತೋರಿಸುವ ಮೂಲಕ ಅವರನ್ನು ಸಂಪರ್ಕಿಸಿ, ನಂಬಿಕೆ ಗಳಿಸುತ್ತಿದ್ದ. 50 ಕೋಟಿಯಿಂದ 100 ಕೋಟಿ ರೂಪಾಯಿಗಳವರೆಗೆ ಸಾಲ ನೀಡುವ ಭರವಸೆ ನೀಡುತ್ತಿದ್ದ. ಆದರೆ, ಸ್ಟಾಂಪ್ ಡ್ಯೂಟಿ ಮತ್ತು ಕಮಿಷನ್ ಹೆಸರಿನಲ್ಲಿ 5-10 ಕೋಟಿ ರೂಪಾಯಿಗಳನ್ನು ವಸೂಲಿ ಮಾಡಿ, ನಂತರ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗುತ್ತಿದ್ದ.
ರೋಹನ್ ತನ್ನ ಐಷಾರಾಮಿ ಬಂಗಲೆಯಲ್ಲಿ ವಿದೇಶಿ ಯುವತಿಯರೊಂದಿಗೆ ಪಾರ್ಟಿಗಳನ್ನು ಆಯೋಜಿಸುತ್ತಿದ್ದ ಮತ್ತು ತನ್ನ ಮನೆಯಲ್ಲಿ ಗುಪ್ತ ಕೋಣೆಯೊಂದನ್ನು(ಹೈಡ್ ಔಟ್ ರೂಮ್) ನಿರ್ಮಿಸಿಕೊಂಡಿದ್ದ. ಅದು ಬೆಡ್‌ರೂಮ್‌ನ ಕಬೋರ್ಡ್‌ನ ಹಿಂದೆ ರಹಸ್ಯ ಬಾಗಿಲಿನ ಮೂಲಕ ಸಂಪರ್ಕವಾಗಿತ್ತು. ಈ ಕೋಣೆಯಲ್ಲಿ ಆತ ಪೊಲೀಸರಿಂದ ಅಥವಾ ವಂಚನೆಗೊಳಗಾದವರಿಂದ ತಪ್ಪಿಸಿಕೊಳ್ಳುತ್ತಿದ್ದ. ಆತನ ಮನೆಯಲ್ಲಿ ದುಬಾರಿ ವಿದೇಶಿ ಮದ್ಯ, ಲಕ್ಷಾಂತರ ರೂಪಾಯಿ ಮೌಲ್ಯದ ಗಿಡಗಳು ಮತ್ತು ಐಷಾರಾಮಿ ವಸ್ತುಗಳಿದ್ದವು. ಇವುಗಳ ಮೂಲಕ ಶ್ರೀಮಂತನೆಂದು ಬಿಂಬಿಸಿಕೊಂಡು ವಿಶ್ವಾಸ ಗಳಿಸುತ್ತಿದ್ದ.
ಇದನ್ನೂ ಓದಿದ್ದೀರಾ? ಗೋಕರ್ಣದ ಗುಹೆಯ ಬದುಕಿಗೆ ಮನಸೋತಳೇ ರಷ್ಯಾದ ನೀನಾ ಕುಟಿನಾ
ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಮತ್ತು ಎಸಿಪಿ ರವೀಶ್ ನಾಯಕ್ ನೇತೃತ್ವದ ತಂಡ ಗುರುವಾರ ತಡರಾತ್ರಿ ದಾಳಿ ನಡೆಸಿ ಆತನನ್ನು ಬಂಧಿಸಿದೆ. ಈತನ ವಿರುದ್ಧ ಇಬ್ಬರು ಉದ್ಯಮಿಗಳ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದ್ದು, ಕೇವಲ ಮೂರು ತಿಂಗಳಲ್ಲಿ 45 ಕೋಟಿ ರೂಪಾಯಿಗಳ ವ್ಯವಹಾರ ನಡೆಸಿರುವುದು ಪತ್ತೆಯಾಗಿದೆ. ರೋಹನ್ ದೇಶದ ಪ್ರಮುಖ ನಗರಗಳಲ್ಲಿ ಏಜೆಂಟ್‌ಗಳ ಮೂಲಕ ಈ ವಂಚನೆ ಜಾಲವನ್ನು ನಡೆಸುತ್ತಿದ್ದ ಎಂಬುದನ್ನು ಪೊಲೀಸರು ತಿಳಿಸಿದ್ದಾರೆ.