ಕನ್ನಡ ಚಿತ್ರರಂಗದ ಅತ್ಯುತ್ತಮ ನಟ ಡಾ. ವಿಷ್ಣುವರ್ಧನ್‌ಗೆ ಮರಣೋತ್ತರ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡುವಂತೆ ನಟ, ನಿರ್ದೇಶಕ ಅನಿರುದ್ಧ್ ಜತಕರ ಮನವಿ ಮಾಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ವರಿಗೆ ಪತ್ರ ಬರೆದಿರುವ ಅನಿರುದ್ಧ್, “ವಿಷ್ಣುವರ್ಧನ್ ಅವರು ಕನ್ನಡ ಚಿತ್ರರಂಗದಲ್ಲಿ 225ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಹೆಮ್ಮೆ ತಂದಿದ್ದಾರೆ. ಅವರು ಭೌತಿಕವಾಗಿ ನಮ್ಮನ್ನು ಅಗಲಿ 15 ವರ್ಷಗಳಾದರೂ ಜನರ ಹೃದಯದಲ್ಲಿ ಅವರ ಸ್ಥಾನ ಅಚಲವಾಗಿದೆ” ಎಂದು ಹೇಳಿದ್ದಾರೆ.
“ಇದುವರೆಗೂ ಅವರಿಗೆ ಕೇಂದ್ರ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿ ಕೂಡ ದೊರೆತಿಲ್ಲ. ನಮ್ಮ ರಾಜ್ಯದ ಅತ್ಯುನ್ನತ ಗೌರವವಾದ ಕರ್ನಾಟಕ ರತ್ನ ಪ್ರಶಸ್ತಿ ಕೂಡ ಮರಣೋತ್ತರವಾಗಿಯಾದರೂ ಅವರಿಗೆ ದೊರೆಯದೇ ಇರುವುದು ಬೇಸರದ ಸಂಗತಿ” ಎಂದು ಅನಿರುದ್ಧ್ ತಿಳಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಅಡಕತ್ತರಿಯಲ್ಲಿದ್ದ ಸಿದ್ದರಾಮಯ್ಯ ಕೊಟ್ಟ ಮಾತು ಉಳಿಸಿಕೊಂಡಿದ್ದು ಹೇಗೆ?
“ಸೆಪ್ಟೆಂಬರ್ 18ರಂದು ಅವರ 75ನೇ ಜನ್ಮ ವಾರ್ಷಿಕೋತ್ಸವ ಇದೆ. ಆ ವಿಶೇಷ ಸಂದರ್ಭದಲ್ಲಿ ಅವರ ಅಪಾರ ಸಾಧನೆಗಳನ್ನು ಗೌರವಿಸಿ, ಅಭಿಮಾನಿಗಳ ಇಚ್ಛೆ ಈಡೇರಿಸಬೇಕು. ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕು” ಎಂದು ಮನವಿ ಮಾಡಿದ್ದಾರೆ.