ಕರಾವಳಿ ಭಾಗದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಮಂಗಳೂರು ನಗರ ಹೊರವಲಯದ ಬಜೈ ಪಟ್ಟಣ ಪಂಚಾಯತ್ ವ್ಯಾಪ್ತಿಯ ಶಾಂತಿಗುಡ್ಡೆ ಕೊಂಚಾರ್ ಬಳಿ ಎಂಎಸ್‌ಇಝಡ್ ನಿರ್ಮಿಸಿದ ಕಾಲೋನಿಯಲ್ಲಿ ಗುಡ್ಡ ಜರಿದು 8 ಮನೆಗಳಿಗೆ ಹಾನಿಯಾಗಿ ಎರಡು ರಿಕ್ಷಾ ಮತ್ತು ಒಂದು ಕಾರು ಸಂಪೂರ್ಣವಾಗಿ ಮಣ್ಣಿನಡಿಯಲ್ಲಿ ಹೂತುಹೋಗಿದೆ.
ಈ ವೇಳೆ ಮನೆಯಲ್ಲಿ ಇದ್ದ ನಿವಾಸಿಗಳು ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದಾರೆ. ಈ ಸಂದರ್ಭದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಬಜೈ ನಾಗರಿಕರ ಹಿತರಕ್ಷಣಾ ವೇದಿಕೆ ಪದಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ, ಈ ಘಟನೆಗೆ ಅವೈಜ್ಞಾನಿಕ ರೀತಿಯಲ್ಲಿ ಕಾಲೋನಿ ನಿರ್ಮಿಸಿರುವ ಎಂಎಸ್‌ಇಝಡ್ ನೇರ ಕಾರಣ ಎಂದು ಆರೋಪಿಸಿದೆ.
ನಿರಂತರ ಮಳೆಯಿಂದಾಗಿ ಕಾಲೋನಿಯ ಜನರು ಆತಂಕದದಿಂದಲೇ ದಿನ ಕಳೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಲೇಔಟ್ ಮಾಡುವಾಗ ಯಾವುದೇ ಸುರಕ್ಷತಾ ಕ್ರಮ ಅನುಸರಿಸದೆ ಕೆಲಸ ಮಾಡಿದ್ದರೀಂದ ಈ ಅನಾಹುತ ನಡೆದಿದೆ ಎಂದು ಬಜೆ ನಾಗರಿಕರ ಹಿತರಕ್ಷಣಾ ವೇದಿಕೆಯ ಸಂಚಾಲಕ ಸಿರಾಜ್ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಮಂಗಳೂರು | ಸಾಹಿತ್ಯ ಕ್ಷೇತ್ರದಲ್ಲಿ ಫಗು ಹಳಕಟ್ಟಿಯವರ ಸಾಧನೆ ಅಪಾರ: ಪ್ರಭಾಕರ್ ನೀರ್ಮಾರ್ಗ
ಈ ಸಂದರ್ಭ ಬಜೈ ನಾಗರಿಕರ ಹಿತರಕ್ಷಣಾ ವೇದಿಕೆಯ ಸಹ ಸಂಚಾಲಕರಾದ ಇಸ್ಮಾಯಿಲ್ ಇಂಜಿನಿಯರ್, ಸಾಮಾಜಿಕ ಕಾರ್ಯಕರ್ತ ನಿಸಾರ್ ಕರಾವಳಿ, ವಸಂತ್,ಗ್ರಾ.ಪಂ. ಮಾಜಿ ಸದಸ್ಯರಾದ ನಝೀರ್, ನಾಗೇಶ್, ಅಫೀಝ್ ಕೊಳಂಬೆ, ಅಝಲ್ ಮತ್ತು ಒಕ್ಕೂಟದ ಸದಸ್ಯರು ಮತ್ತು ನಾಗರಿಕರು ಉಪಸ್ಥಿತರಿದ್ದರು.