ಪರಿಶಿಷ್ಟ ಜಾತಿ ಜನಾಂಗದ ಭೂಮಿ-ವಸತಿ ಮಂಜೂರಾತಿ ಸೇರಿದಂತೆ ನಾನಾ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಜಿಲ್ಲಾ ಸಮಿತಿಯಿಂದ ಬೀದರ್ ನಗರದಲ್ಲಿ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಿದರು.
ಬಳಿಕ ತಹಸಿಲ್ ಕಚೇರಿಗೆ ತೆರಳಿದ ಬಳಿಕ ಧರಣಿ ನಡೆಸಿ ಮುಖ್ಯಮಂತ್ರಿಗೆ ಸಿದ್ದರಾಮಯ್ಯ ಹೆಸರಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ತಹಸೀಲ್ದಾರ್ ಅವರಿಗೆ ಸಲ್ಲಿಸಲಾಯಿತು.
ʼಬಗರ್ ಹುಕುಂ ಸಾಗುವಳಿ ಮಾಡುತ್ತಿರುವ ದಲಿತರನ್ನು ಅರಣ್ಯ ಭೂಮಿ, ಸಾಮಾಜಿಕ ಅರಣೀಕರಣ, ಗೋವುಗಳ ಗೊಮಾಳಗಳಿಗೆ ಕಾಯ್ದಿರಿಸುವ ನೆಪದಲ್ಲಿ ಒಕ್ಕಲೆಬ್ಬಿಸುವುದು ಖಂಡನೀಯ. ದಲಿತರು ಎದುರಿಸುತ್ತಿರುವ ಸಮಸ್ಯೆಗಳನ್ನು ಶೀಘ್ರವೇ ಪರಿಹರಿಸಬೇಕುʼ ಎಂದು ಆಗ್ರಹಿಸಿದರು.
ʼಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯಡಿ ವಿದ್ಯಾರ್ಥಿ ನಿಲಯ ಉನ್ನತೀಕರಣಗೊಳಿಸಿ, ಪ್ರವೇಶಕ್ಕೆ ಅರ್ಜಿ ಸಲ್ಲಿಸಿರುವ ಎಲ್ಲ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಬೇಕು.ಜನವಾಡ ಗ್ರಾಮದಲ್ಲಿ ನೂತನವಾಗಿ ಅಂಬೇಡ್ಕರ್ ಭವನದ ನಿರ್ಮಾಣಕ್ಕಾಗಿ ಆದರ್ಶ ಶಾಲೆಯ ಪಕ್ಕದಲ್ಲಿ ಸರಕಾರಿ 2 ಎಕರೆ ಜಮೀನು ಮಂಜೂರು ಮಾಡಬೇಕುʼ ಎಂದು ಆಗ್ರಹಿಸಿದರು.
ಮಂದಕನಳ್ಳಿ ಗ್ರಾಮದಲ್ಲಿ ಹರಿಜನ ಜಾತಿಗೆ ಸ್ಮಶಾನ ಭೂಮಿಗಾಗಿ 2 ಎಕರೆ ಜಮೀನು ಮಂಜೂರು ಮಾಡಬೇಕು. ಅಲಿಯಬಾದ್ ಗ್ರಾಮದ ಸರ್ವೆನಂ. 37,38, 40 ಪ್ರಕರಣ ನ್ಯಾಯಾಲಯದ ತಡೆಯಾಜ್ಞೆ ಇದ್ದರೂ ಪದೆಪದೇ ಕಿರುಕುಳ ನೀಡುತ್ತಿರುವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿದರು.
ಇದನ್ನೂ ಓದಿ : ಬೀದರ್ | ʼಗೃಹ ಆರೋಗ್ಯʼ ಯೋಜನೆಗೆ ಚಾಲನೆ; ಮನೆ ಬಾಗಿಲಲ್ಲೇ ಆರೋಗ್ಯ ತಪಾಸಣೆ : ಸಚಿವ ಈಶ್ವರ ಖಂಡ್ರೆ
ಧರಣಿಯಲ್ಲಿ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ರಮೇಶ ಡಾಕುಳಗಿ, ಕಲಬುರಗಿ ವಿಭಾಗೀಯ ಸಂಘಟನಾ ಸಂಚಾಲಕ ರಾಜಕುಮಾರ ಬನ್ನೇರ್, ಬೀದರ್ ಜಿಲ್ಲಾ ಸಂಚಾಲಕ ರಮೇಶ ಮಂದಕನಳ್ಳಿ, ಝರೆಪ್ಪಾ ರಾಂಪೂರೆ, ಸುಭಾಷ ಜ್ಯೋತಿ, ಕೈಲಾಸ ಮೇಟಿ, ಸಂಜುಕುಮಾರ ಬ್ಯಾಗಿ, ಅಹ್ಮದ್ ಆಲಿಯಾಬಾದ್, ಖಾಜಾ ಮೈನೋದ್ದೀನ್, ಗೌತಮ ಸಾಗರ, ಬಸವರಾಜ ಕಾಂಬಳೆ, ನಾಗೇಂದ್ರ ಜನವಾಡ, ಲಕ್ಷ್ಮಣ ಶೇರಿಕರ್, ಜಗದೇವಿ ಕೆ. ಭಂಡಾರಿ, ರಂಜೀತಾ ಜೈನೂರ, ದೇವಸಿಲಾ ಸದಾಫುಲೆ, ರುಕ್ಕಿಣಿ ಕಾಂಬಳೆ, ಸುಧಾಕಾರ ಮಾಳಗೆ, ಸುವರ್ಣಾ ಪೂಜಾರಿ, ಮಹೇಶ ಗೋರನಾಳಕರ್, ಶಶಿ ಪೊಲೀಸ್ ಪಾಟೀಲ್, ಅಂಬದಾಸ ಗಾಯಕವಾಡ, ಬೀರು ಸಿಂಗ್, ಗೌತಮ ಪ್ರಸಾದ ಇತರರಿದ್ದರು.