ಅಂತರ್ಜಾತಿ ವಿವಾಹವಾಗಿದ್ದ ಮಹಿಳೆಯನ್ನು ಆಕೆಯ ಪತಿಯೇ ಹತ್ಯೆ ಮಾಡಿರಬಹುದೆಂದು ಆಕೆಯ ಕುಟುಂಬಸ್ಥರು ದೂರು ನಿಡಿದರೂ ಕೂಡ ಪೊಲೀಸರು ಪ್ರಕರಣ ಮುಚ್ಚಿಹಾಕಲು ಹುನ್ನಾರ ನಡೆಸಿದಂತೆ ತೋರುತ್ತಿದ್ದು, ಮರುಮರಣೋತ್ತರ ಪರೀಕ್ಷೆ ನಡೆಸಿ ಸತ್ಯಾಂಶ ಬಯಲಿಗೆಳೆಯಬೇಕು ಎಂದು ಆಗ್ರಹಿಸಿ ದಲಿತಪರ ಸಂಘಟನೆಗಳ ಮಾಹಾ ಒಕ್ಕೂಟದಿಂದ ಹಾಸನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
“ಬೇಲೂರು ತಾಲೂಕಿನ ಕೆಳಹಳ್ಳಿ ಗ್ರಾಮದ ಪರಿಶಿಷ್ಠ ಜಾತಿಗೆ ಸೇರಿದ ಶಾರದ ಹಾಗೂ ಲಿಂಗಾಯತ ಸಮುದಾಯದ ಪ್ರಸನ್ನ ಕಳೆದ 6 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಆಕೆಯ ಜಾತಿ ಬೇರ ಎನ್ನುವ ಕಾರಣಕ್ಕೆ ಹುಡುಗನ ಕುಟುಂಬದವರು ಇಬ್ಬರನ್ನೂ ಮನೆಯಿಂದ ಹೊರ ಹಾಕಿದ್ದರು. ಇದರಿಂದ ಬಾಡಿಗೆ ಮನೆಯಲ್ಲಿದ್ದ ಇಬ್ಬರೂ ಕೆಲವು ವರ್ಷಗಳ ಕಾಲ ಸಹಜವಾಗಿ ಜೀವನ ನಡೆಸಿದ್ದರು. ಇತ್ತೀಚೆಗೆ ಪತ್ನಿಯನ್ನು ನಿಂದಿಸಲು ಆರಂಭಿಸಿದ್ದ ಪ್ರಸನ್ನ ಜುಲೈ 1ರಂದು ರಾತ್ರಿ ಕುಡಿದು ಬಂದು ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ. ಮರುದಿನ ಬೆಳಿಗ್ಗೆ ದೇವಸ್ಥಾನಕ್ಕೆ ಕರೆದುಕೊಂಡು ಹೋದಂತೆ ನಾಟಕವಾಡಿ, ಆಕೆಗೆ ಹೃದಯಾಘಾತವಗಿ ಮೃತಪಟ್ಟಳೆಂದು ಬಿಂಬಿಸಿದ್ದನು. ಆಕೆಯ ಸಾವಿನ ಬಗ್ಗೆ ಅನುಮಾನವಿದ್ದರೂ ಪೊಲೀಸರು ಸಹಜ ಸಾವೆಂದು ಹೇಳುತ್ತಿದ್ದಾರೆ” ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಬಿಎಸ್‌ಪಿ ರಾಜ್ಯ ಉಸ್ತುವಾರಿ ಗಂಗಾಧರ್ ಬಹುಜನ್ ಮಾತನಾಡಿ, “ಪ್ರಕರಣದ ದಿಕ್ಕು ತಪ್ಪಿಸಲು ಮುಂದಾಗಿರುವ ಪೊಲೀಸ್ ಅಧಿಕಾರಗಳನ್ನು ಅಮಾನತು ಮಾಡಿ ವಿಚಾರಣೆಗೆ ಒಳಪಡಿಸಬೇಕು. ಶಾರದ ಮೃತಪಟ್ಟಿರುವ ಸಂದರ್ಭಕ್ಕೂ, ಪತಿ ಪ್ರಸನ್ನ ಹೇಳಿರುವ ಕಾರಣಗಳಿಗೂ ಸಂಬಂಧವೇ ಇಲ್ಲ ಎನ್ನುವ ಅನುಮಾನಗಳನ್ನು ಆಕೆಯ ಕುಟುಂಬದವರೇ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮರು ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸಿ ತಪ್ಪಿತಸ್ಥರನ್ನು ಅಮಾನತು ಮಾಡಬೇಕು” ಎಂದು ಆಗ್ರಹಿಸಿದರು.
ಆರ್‌ಪಿಐ ರಾಜ್ಯಾಧ್ಯಕ್ಷ ಸತೀಶ್ ಮಾತನಾಡಿ, “ಶಾರದ ಸಾವಿನ ಬಗ್ಗೆ ಆಕೆಯ ಮಗಳನ್ನು ವಿಚಾರಿಸಿದಾಗ ತಂದೆಯೇ ಅಮ್ಮನನ್ನು ಹಲ್ಲೆ ಮಾಡಿರುವುದಾಗಿ ತಿಳಿಸಿದ್ದ. ಕೂಡಲೇ ಆಕೆಯ ಸಂಬಂಧಿಕರು ಹಳೇಬೀಡು ಠಾಣೆ ಪೊಲೀಸರಿಗೆ ದೂರು ನೀಡಿದರೂ ಈವರೆಗೆ ಸರಿಯಾದ ತನಿಖೆ ನಡೆಸದೆ ಕೊಲೆ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸುತ್ತಿದ್ದಾರೆ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ಕೋಮುಲ್ ನೇಮಕಾತಿ ಹಗರಣ: ಕಾಂಗ್ರೆಸ್ ಶಾಸಕ ನಂಜೇಗೌಡರ 1.32 ಕೋಟಿ ರೂ. ಆಸ್ತಿ ಜಪ್ತಿ
“ಮೃತ ಶಾರದಾಳ ಅಣ್ಣ ತಿಮ್ಮಯ್ಯ ಅವರು ಆರೋಪಿ ಪತಿ ಪ್ರಸನ್ನ ವಿರುದ್ಧ ತನಿಖೆ ನಡೆಸುವಂತೆ ಜುಲೈ 2ರಂದು ದೂರು ನೀಡಿದ್ದಾರೆ. ಮರಣೋತ್ತರ ಪರೀಕ್ಷೆ ಬಗ್ಗೆ ವಿಚಾರಿಸಿದಾಗ ಸಹಜ ಸಾವೆಂದು ಸಬೂಬು ಹೇಳುತ್ತಾರೆ. ಇತ್ತೀಚೆಗೆ ಜಿಲ್ಲೆಯಲ್ಲಿ ಕೊಲೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಪೊಲೀಸ್ ಇಲಾಖೆ ಮೇಲೆ ನಂಬಿಕೆ ಇಲ್ಲದಂತಾಗಿದೆ. ಈ ಕೂಡಲೇ ಶಾರದ ಸಾವಿನ ಬಗ್ಗೆ ಸರಿಯಾದ ರೀತಿಯಲ್ಲಿ ತನಿಖೆ ಆಗಬೇಕು. ಆಕೆಯ ಶವವನ್ನು ಹೊರ ತೆಗೆಸಿ ಮರು ಮರಣೋತ್ತರ ಪರೀಕ್ಷೆ ನಡೆಸಬೇಕು” ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ದಸಂಸ ಮುಖಂಡ ಮಲ್ಲೇಶ್ ಅಂಬುಗ, ಕೃಷ್ಣದಾಸ್, ಲಕ್ಷ್ಮಣ್, ಬೇಲೂರು ಪುರಸಭೆ ಮಾಜಿ ಸದಸ್ಯ ಮಂಜುನಾಥ್, ನಿಂಗರಾಜು, ಸ್ವಾಮಿ, ಚಂದ್ರು, ಲೋಕೇಶ್, ಕೆಡಿಪಿ ಸದಸ್ಯ ನವೀನ್, ಹರೀಶ್, ನಿಂಗರಾಜು, ರಮೇಶ್, ಶಿವಕುಮಾರ್ ಸೇರಿದಂತೆ ಇತರರು ಇದ್ದರು.