ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ (ಕೋಮುಲ್) ವಿವಿಧ ಹುದ್ದೆಗಳಿಗೆ 2023ರಲ್ಲಿ ನಡೆದಿದ್ದ ನೇಮಕಾತಿಯಲ್ಲಿ ಹಗರಣ ನಡೆದಿದೆ ಎಂದು ಆರೋಪಿಸಲಾಗಿದೆ. ಇದೇ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ಕೆ.ವೈ ನಂಜೇಗೌಡ ಕೂಡ ಆರೋಪಿಯಾಗಿದ್ದು, ಅವರಿಗೆ ಸೇರಿದ 1.32 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದ್ದೇವೆಂದು ಜಾರಿ ನಿರ್ದೇಶನಾಲಯ (ಇಡಿ) ತಿಳಿಸಿದೆ.
ಮಾಲೂರು ಕ್ಷೇತ್ರದ ಶಾಸಕ ನಂಜೇಗೌಡ ಅವರು 2023ರಿಂದ ಕೋಮುಲ್‌ನ ಅಧ್ಯಕ್ಷರಾಗಿದ್ದಾರೆ. 2023ರಲ್ಲಿ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಕೋಮುಲ್‌ನ 81 ಹುದ್ದೆಗಳ ನೇಮಕಾತಿ ನಡೆಸಲಾಗಿತ್ತು. ನೇಮಕಾತಿಯಲ್ಲಿ ಶಾಸಕ ಕೆ.ವೈ ನಂಜೇಗೌಡ ನೇತೃತ್ವದ ಸಮಿತಿಯು ಕೆಲವು ಅಭ್ಯರ್ಥಿಗಳಿಗೆ ಅನುಕೂಲ ಮಾಡಿಕೊಟ್ಟಿದೆ. ಆ ಅಭ್ಯರ್ಥಿಗಳಿಂದ ತಲಾ 30 ಲಕ್ಷ ರೂ. ಹಣ ಪಡೆದಿದೆ ಎಂದು ಇಡಿ ಆರೋಪಿಸಿದೆ.
ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಲಾಗುತ್ತಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ನಂಜೇಗೌಡ ಅವರ 1.32 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ವಿವರಿಸಿದೆ.