ಬಾಕಿ ಬಿಲ್ ಪಾವತಿಗೆ ಸರ್ಕಾರ ವಿಫಲವಾದ ಹಿನ್ನೆಲೆಯಲ್ಲಿ, ಬೆಳಗಾವಿ ಜಿಲ್ಲಾಧಿಕಾರಿಯ ಅಧಿಕೃತ ಕಾರನ್ನು ಇಲ್ಲಿನ ಹೆಚ್ಚುವರಿ ಹಿರಿಯ ದಿವಾಣಿ ನ್ಯಾಯಾಲಯದ ಆದೇಶದಂತೆ ಶುಕ್ರವಾರ ಜಪ್ತಿ ಮಾಡಲಾಗಿದೆ.
1992-93ರಲ್ಲಿಯೇ ಸಣ್ಣ ನೀರಾವರಿ ಇಲಾಖೆ ದೂಧಗಂಗಾ ನದಿಯ ಬ್ಯಾರೇಜ್ ನಿರ್ಮಾಣದ ಗುತ್ತಿಗೆಯನ್ನು ನಾರಾಯಣ ಕಾಮತ್ ಅವರಿಗೆ ನೀಡಿತ್ತು. ಅಗತ್ಯ ಅನುದಾನ ಮತ್ತು ಸಿಮೆಂಟ್ ನೀಡಲಾಗುವುದು ಎಂದು ಇಲಾಖೆಯು ಭರವಸೆ ನೀಡಿದ್ದರೂ, ಮೂರು ವರ್ಷಗಳ ಕಾಲ ಅನುದಾನ ಬಿಡುಗಡೆ ಮಾಡಲಾಗಲಿಲ್ಲ. ಹೀಗಾಗಿ ಗುತ್ತಿಗೆದಾರರು 1995ರಲ್ಲಿ ನ್ಯಾಯಾಲಯದ ಮೊರೆ ಹೋಗಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಪ್ರಾರಂಭದಲ್ಲಿ ₹35 ಲಕ್ಷ ಪಾವತಿಸುವಂತೆ ಆದೇಶಿಸಿತು. ಈ ತೀರ್ಪಿಗೆ ಸರ್ಕಾರ ಮೇಲ್ಮನವಿ ಸಲ್ಲಿಸಿದ್ದು, ಹೈಕೋರ್ಟ್ ಮರುವಿಚಾರಣೆ ನಡೆಸುವಂತೆ ನಿರ್ದೇಶಿಸಿತು. ಮರುವಿಚಾರಣೆ ನಂತರ 2025ರ ಜೂನ್ ಒಳಗೆ ಬಾಕಿ ಮೊತ್ತದಲ್ಲಿ ಶೇ 50ರಷ್ಟು ಬಡ್ಡಿ ಸೇರಿಸಿ ಪಾವತಿಸಲು ಕೆಳ ನ್ಯಾಯಾಲಯ ತೀರ್ಪು ನೀಡಿತು.
ಆದರೆ ಸರ್ಕಾರ ಈ ತೀರ್ಪನ್ನು ಪಾಲಿಸದ ಹಿನ್ನೆಲೆ, ನ್ಯಾಯಾಲಯದ ಆದೇಶದ ಮೇರೆಗೆ ವಾರೆಂಟ್ ಜಾರಿ ಆಗಿದ್ದು, ಅದರಲ್ಲಿ ಜಿಲ್ಲಾಧಿಕಾರಿಯ ವಾಹನವನ್ನು ಜಪ್ತಿ ಮಾಡಲಾಗಿದೆ ಎಂದು ಅರ್ಜಿದಾರರ ಪರ ವಕೀಲ ಓ.ಬಿ. ಜೋಶಿ ತಿಳಿಸಿದ್ದಾರೆ.