ಚಾಕೊಲೇಟ್ ಪಾನ್ಗೆ ಗಾಂಜಾ ಬೆರೆಸಿ ಮಾರಾಟ ಮಾಡುತ್ತಿದ್ದ ಉತ್ತರ ಪ್ರದೇಶ ಮೂಲದ ವ್ಯಕ್ತಿಯನ್ನು ದಾವಣಗೆರೆ ಪೊಲೀಸರು ಬಂಧಿಸಿದ್ದಾರೆ.
ಪ್ಯಾರೆಲಾಲ್ ಅಲಿಯಾಸ್ ರಾಜು (38) ಬಂಧಿತ ಆರೋಪಿ. ಆರೋಪಿಯ ಅಪ್ರಾಪ್ತ ಮಗನನ್ನು ವಶಕ್ಕೆ ಪಡೆದು ಬಾಲಪರಾಧಿಗಳ ಕೇಂದ್ರಕ್ಕೆ ಕಳುಹಿಸಲಾಗಿದೆ.
ಆರೋಪಿಯು ದಾವಣಗೆರೆ ನಗರದ ರಾಮ್ ಅಂಡ್ ಕೋ ಸರ್ಕಲ್ಲ್ಲಿ ರಾಜು ಪಾನ್ ಶಾಪ್ ಹೆಸರಿಲ್ಲಿ ಅಂಗಡಿ ನಡೆಸುತ್ತಿದ್ದ. ಈತ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಮಿಶ್ರಿತ ಚಾಕೋಲೇಟ್ ಪಾನ್ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.
ತನ್ನ ಅಪ್ರಾಪ್ತ ಮಗನ ಕೈಯಲ್ಲಿ ಗಾಂಜಾ ಮಿಶ್ರಿತ ಪಾನ್ ಕೊಟ್ಟು ಕಾಲೇಜುಗಳ ಬಳಿ ಮಾರಾಟ ಮಾಡಿಸುತ್ತಿದ್ದ. ಕಳೆದ ನಾಲ್ಕು ವರ್ಷಗಳಿಂದ ಈ ದಂಧೆ ನಡೆಯುತ್ತಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ನಾಶಪಡಿಸಿದ ಮಾದಕ ದ್ರವ್ಯದ ಮಾಹಿತಿ
2023ರಿಂದ 2025ರ ಇಲ್ಲಿಯವರೆಗೆ ಒಟ್ಟು ಸುಮಾರು 34,78,424 ರೂ. ಬೆಲೆಬಾಳುವ 57 ಕೆ.ಜಿ. ಗಾಂಜಾ ವಶಕ್ಕೆ ಪಡೆಯಲಾಗಿದೆ. ಕಳೆದ 03 ವರ್ಷಗಳಲ್ಲಿ 5,50,000 ರೂ. ಮೌಲ್ಯದ 72.64 ಗ್ರಾಂ ಎಂಡಿಎಂಎ ಪೌಡರ್ ಹಾಗೂ 1,21,000 ರೂ. ಬೆಲೆಯ 42 ಗ್ರಾಂ ಅಫೀಮು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ, ಕಳೆದ 03 ವರ್ಷಗಳಲ್ಲಿ ಒಟ್ಟು 41,49,424 ರೂ. ಮೌಲ್ಯದ ಮಾದಕ ದ್ರವ್ಯಗಳನ್ನು ವಶಕ್ಕೆ ಪಡೆಯಲಾಗಿದೆ. ಕಳೆದ 06 ವರ್ಷಗಳಿಂದ ಇಲ್ಲಿಯವರೆಗೆ ಡ್ರಗ್ಸ್ ಡಿಸ್‌ಪೋಸಲ್ ಕಮಿಟಿಯ ಮೂಲಕ ನ್ಯಾಯಾಲಯದ ಆದೇಶ ಪಡೆದು, 323 ಕೆಜಿ 565 ಗ್ರಾಂ ಗಾಂಜಾವನ್ನು ನಾಶಪಡಿಸಲಾಗಿದೆ ಎಂದು ಎಸ್ಪಿ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.