ಧರ್ಮಸ್ಥಳದಲ್ಲಿ ನಡೆದಿದೆ ಎಂದು ಆರೋಪಿಸಲಾಗಿರುವ ಹಲವಾರು ಅತ್ಯಾಚಾರ, ಕೊಲೆ ಹಾಗೂ ಗೌಪ್ಯವಾಗಿ ಮೃತದೇಹಗಳನ್ನು ಹೂತು ಹಾಕಿರುವ ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡ(ಎಸ್‌ಐಟಿ) ರಚನೆ ಮಾಡಬೇಕು ಎಂದು ಒತ್ತಾಯಿಸಿ ನೈಜ ಹೋರಾಟಗಾರರ ವೇದಿಕೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ(ಸಿಜೆಐ) ಬಿ ಆರ್ ಗವಾಯಿ ಅವರಿಗೆ ಪತ್ರ ಬರೆದಿದೆ.
ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದ ತನಿಖೆ ನಡೆಸಲು ವಿವಿಧ ರಾಜ್ಯಗಳ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳ ತನಿಖಾ ಸಮಿತಿಯನ್ನು ರಚಿಸಿ ಎಂದು ನೈಜ ಹೋರಾಟಗಾರರ ವೇದಿಕೆಯು ಮನವಿ ಮಾಡಿದೆ.
ಇದನ್ನು ಓದಿದ್ದೀರಾ? ಧರ್ಮಸ್ಥಳ ಪ್ರಕರಣ | ದೂರುದಾರನ ಮಾಹಿತಿ ಬಹಿರಂಗಪಡಿಸಿದವರ ವಿರುದ್ಧ ಪ್ರತ್ಯೇಕ ತನಿಖೆ: ಎಸ್‌ಪಿ
“ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದ ಮಂಜುನಾಥ ಸ್ವಾಮಿ ದೇವಸ್ಥಾನ ಮುಜರಾಯಿ ಇಲಾಖೆಯ ಕಾನೂನು ಕಾಯ್ದೆಗಳನ್ನು ಉಲ್ಲಂಘಿಸಿ ತಮ್ಮ ಸ್ವಾರ್ಥಕ್ಕಾಗಿ, ಶ್ರೇಯೋಭಿವೃದ್ಧಿ ಮತ್ತು ವ್ಯಾಪಾರ ವ್ಯವಹಾರಗಳಿಗಾಗಿ ಈ ಸಾರ್ವಜನಿಕ ದೇವಸ್ಥಾನವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದು ಅತ್ಯಂತ ದುರಾದೃಷ್ಟಕರ ಸಂಗತಿ” ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
“ಮುಖ್ಯವಾಗಿ ಧರ್ಮಸ್ಥಳದ ಕೆಲವು ಧಾರ್ಮಿಕ ಮುಖಂಡರು ರಾಜ್ಯಗಳ ಆಡಳಿತವನ್ನು ನಡೆಸುತ್ತಿರುವ ಎಲ್ಲಾ ರಾಜಕೀಯ ಪಕ್ಷಗಳ ಜೊತೆ ಅವಿನಭಾವ ಸಂಬಂಧವನ್ನು ಇಟ್ಟುಕೊಂಡಿದ್ದಾರೆ. ಈ ಮೂಲಕ ತನ್ನ ಪ್ರಭಾವವನ್ನು ಬಳಸಿಕೊಂಡು ಧರ್ಮಸ್ಥಳ ವ್ಯಾಪ್ತಿಯಲ್ಲಿ ಯುವತಿಯರ ಮೇಲೆ ನಡೆಯುವ ಅತ್ಯಾಚಾರ, ಕೊಲೆ ಪ್ರಕರಣಗಳನ್ನು ಮುಚ್ಚಿಹಾಕಿ ತನಿಖೆ ನಡೆಸದಂತೆ ಮಾಡುತ್ತಿದ್ದಾರೆ. ಸಂತ್ರಸ್ಥರ ಕುಟುಂಬಗಳಿಗೆ ನ್ಯಾಯ ಸಿಗದಂತೆ ಮಾಡಲು ತಮ್ಮ ಪ್ರಭಾವವನ್ನು ಬಳಸಿಕೊಳ್ಳುತ್ತಿದ್ದಾರೆ. ಇವೆಲ್ಲವುದನ್ನು ಸುಮಾರು ವರ್ಷಗಳಿಂದ ರಾಜ್ಯದ ಪ್ರಜ್ಞಾವಂತ ನಾಗರಿಕರು ಮೂಕ ಪ್ರೇಕ್ಷಕರಂತೆ ನೋಡುತ್ತಿದ್ದಾರೆ” ಎಂದು ಹೇಳಿದ್ದಾರೆ.
“ಪ್ರಮುಖವಾಗಿ ಕಾಲೇಜು ವಿದ್ಯಾರ್ಥಿನಿ ಸೌಜನ್ಯಳ ಮೇಲೆ ನಡೆದ ಅತ್ಯಾಚಾರ ಕೊಲೆ ದೇಶದಾದ್ಯಂತ ಸಂಚಲವನ್ನುಂಟು ಮಾಡಿತ್ತು. ಅತ್ಯಾಚಾರ ನಡೆಸಿ ಕೊಲೆ ಮಾಡಿ ಮೃತ ದೇಹಗಳನ್ನು ಗೌಪ್ಯವಾಗಿ ವಿಲೇವಾರಿ ಮಾಡಲು ಎಂದರೆ ಮಣ್ಣು ಮಾಡುವುದು ಮತ್ತು ದಫನ ಮಾಡುವಂತೆ ಇಲ್ಲಿನ ಮೇಲ್ವಿಚಾರಕರು ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿದ್ದ ಕಾರ್ಮಿಕರೊಬ್ಬರನ್ನು ಬಳಸಿಕೊಳ್ಳುತ್ತಿದ್ದರು. ಈಗ ಸ್ವಚ್ಛತಾ ಕಾರ್ಮಿಕ ತಾನು ಮಾಡಿದ ಹೇಯ ಕೃತ್ಯಗಳ ಪಾಪಪ್ರಜ್ಞೆ ಕಾಡುತ್ತಿದ್ದ ಕಾರಣ ಈಗ ಮುಂದೆ ಬಂದಿದ್ದಾರೆ. ಈ ಸಂಬಂಧ ಸ್ಥಳೀಯ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹೇಳಿಕೆಯನ್ನೂ ನೀಡಿದ್ದಾರೆ” ಎಂದು ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರದಲ್ಲಿ ಬರೆಯಲಾಗಿದೆ.
ಇದನ್ನು ಓದಿದ್ದೀರಾ? ಧರ್ಮಸ್ಥಳ ಸರಣಿ ಅತ್ಯಾಚಾರ ಕೊಲೆ ಪ್ರಕರಣ | ಎಫ್‌ಐಆರ್ ದಾಖಲು, ಸೂಕ್ತ ಕಾನೂನು ಕ್ರಮ: ದ.ಕ. ಜಿಲ್ಲಾ ಎಸ್‌ಪಿ
“ಆದರೆ ರಾಜ್ಯ ಸರ್ಕಾರ, ಧರ್ಮಸ್ಥಳ ಠಾಣೆಯ ಪೊಲೀಸರು, ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ಇಲಾಖೆ, ಗೃಹ ಇಲಾಖೆಯು ಈ ದೂರನ್ನು ಗಂಭೀರವಾಗಿ ಪರಿಗಣಿಸದೆ ತನಿಖೆಯನ್ನು ಸಮರ್ಪಕವಾಗಿ ಕಾನೂನು ಬದ್ಧವಾಗಿ ಮಾಡದೆ ಇರುವುದನ್ನು ಖಂಡಿಸಿ ಪ್ರಜ್ಞಾವಂತ ನಾಗರೀಕರೆಲ್ಲರೂ ಸೇರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಈ ಪ್ರಕರಣದ ತನಿಖೆಗೆ ಎಸ್‌ಐಟಿ ರಚಿಸುವಂತೆ ಮನವಿ ಮಾಡಿತ್ತು. ಆದರೆ ಮುಖ್ಯಮಂತ್ರಿಯವರು ಧರ್ಮಸ್ಥಳದ ಪ್ರಭಾವಿ ವ್ಯಕ್ತಿಗಳ ಪ್ರಭಾವಕ್ಕೆ ಒಳಗಾಗಿ ಎಸ್ಐಟಿ ರಚನೆ ಮಾಡುವಂತೆ ಮಾಡಿದ ಮನವಿಯನ್ನು ತಿರಸ್ಕರಿಸಿದ್ದಾರೆ” ನೈಜ ಹೋರಾಟಗಾರರ ವೇದಿಕೆ ಆರೋಪಿಸಿದೆ.
“ಈ ಪ್ರಕರಣದ ಹಿಂದಿರುವ ವ್ಯಕ್ತಿಗಳು ಕೇಂದ್ರ ಮತ್ತು ರಾಜ್ಯ ಸರ್ಕಾರದಲ್ಲಿ ಅತ್ಯಂತ ಪ್ರಭಾವಿಗಳಾಗಿದ್ದು ಅತ್ಯಾಚಾರ ನಡೆಸಿ ಕೊಲೆಯಾದ ನೂರಾರು ಹೆಣ್ಣು ಮಕ್ಕಳ ಕುಟುಂಬದವರು ಭಯಭೀತರಾಗಿದ್ದಾರೆ, ನ್ಯಾಯಕ್ಕಾಗಿ ಹಪಹಪಿಸುತ್ತಿದ್ದಾರೆ. ಈ ಪ್ರಕರಣದಲ್ಲಿ ಮಾತ್ರ ರಾಜ್ಯ ಪೊಲೀಸರ ಬಗ್ಗೆ ನಾಗರಿಕರಿಗೆ ವಿಶ್ವಾಸವಿಲ್ಲ. ಆದ್ದರಿಂದ ವಿವಿಧ ರಾಜ್ಯದ ಐದು ಐಪಿಎಸ್ ಅಧಿಕಾರಿಗಳ ವಿಶೇಷ ತನಿಖೆ ತಂಡವನ್ನು ರಚಿಸಬೇಕು. ಈ ತನಿಖೆ ತಂಡವನ್ನು ನ್ಯಾಯಮೂರ್ತಿಗಳ ಸಮಿತಿಯು ಮೇಲುಸ್ತುವಾರಿ ಮಾಡಬೇಕು” ಎಂದು ಸಿಜೆಐ ಬಳಿಕ ಪತ್ರ ಬರೆದು ಮನವಿ ಮಾಡಿದ್ದಾರೆ.
“ನ್ಯಾಯಾಂಗದಲ್ಲಿನ ಭ್ರಷ್ಟಾಚಾರದ ವಿರುದ್ಧ ದೆಹಲಿ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಯಶವಂತ್ ವರ್ಮಾ ಭ್ರಷ್ಟಾಚಾರ ಪ್ರಕರಣದ ತನಿಖೆಗೆ ರಚಿಸಿದ ಸಮಿತಿಯಂತೆ ಧರ್ಮಸ್ಥಳದಲ್ಲಿ ನಡೆದ ಹದಿಹರೆಯದ ಯುವತಿಯರ, ಮಹಿಳೆಯರ ಮೇಲೆ ನಡೆದ ಅತ್ಯಾಚಾರ ಕೊಲೆ ಪ್ರಕರಣದ ತನಿಖೆಗಾಗಿ ನ್ಯಾಯಮೂರ್ತಿಗಳ ಸಮಿತಿಯನ್ನು ತಕ್ಷಣ ರಚಿಸಬೇಕು. ಸಮಿತಿಯ ಮೇಲ್ವಿಚಾರಣೆಯಲ್ಲಿ ತನಿಖೆ ನಡೆದಾಗ ಮಾತ್ರ ನಮಗೆ ನ್ಯಾಯ ಸಿಗುತ್ತದೆ” ಎಂದು ಮನವಿ ಪತ್ರದಲ್ಲಿ ಹೋರಾಟಗಾರರು ಉಲ್ಲೇಖಿಸಿದ್ದಾರೆ.
