ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರಿಗೆ ತೀವ್ರ ಬಳಲಿಕೆ ಮತ್ತು ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇಂದು (ಜು.19) ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬಾಗಲಕೋಟೆ ಕೆರೂಡಿ ಆಸ್ಪತ್ರೆಗೆ ದಾಖಲಾಗಿದ್ದು, ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ವಾಮೀಜಿ ಅವರಿಗೆ ತಲೆನೋವು, ವಾಂತಿ, ಎದೆನೋವು ತೊಂದರೆ ಕಾಣಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.
“ಸ್ವಾಮೀಜಿ ಎರಡು ದಿನದಿಂದ ಸರಿಯಾಗಿ ಊಟ ಮಾಡಿರಲಿಲ್ಲ. ಒಂದಿಷ್ಟು ಯೋಚನೆಯಲ್ಲಿ ಮುಳುಗಿದ್ದರು. ಬೆಳಿಗ್ಗೆ ವಾಂತಿ ಮತ್ತು ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಆತಂಕ ಪಡುವ ಅಗತ್ಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ” ಎಂದು ಸ್ವಾಮೀಜಿ ಆಪ್ತ ದೀಪಕ್ ಹೇಳಿದ್ದಾರೆ.