ಏಷ್ಯಾದ ಅತಿದೊಡ್ಡ ಕೊಳಗೇರಿ ಎಂದೇ ಹೆಸರಾಗಿರುವ ಮುಂಬೈನ ಧಾರಾವಿಯಲ್ಲಿ ಪುನರ್ ಅಭಿವೃದ್ಧಿ ಯೋಜನೆಗಾಗಿ ಸಮೀಕ್ಷೆಗಳು ನಡೆಯುತ್ತಿವೆ. ಈ ಸಮೀಕ್ಷೆ ನಡೆಸುತ್ತಿರುವ ಸಮೀಕ್ಷಕರು ಧಾರಾವಿಯ ಹಿರಿಯ ನಾಗರಿಕರು ಮತ್ತು ವಿಶೇಷಚೇತನರನ್ನು ಬೆದರಿಸಿ ಬಲವಂತವಾಗಿ ಒಪ್ಪಿಗೆ ಪಡೆಯುತ್ತಿದ್ದಾರೆ ಎಂದು ಕಾಂಗ್ರೆಸ್ ಸಂಸದೆ ವರ್ಷಾ ಗಾಯಕ್ವಾಡ್ ಗಂಭೀರ ಆರೋಪ ಮಾಡಿದ್ದಾರೆ.
ಧಾರಾವಿ ಕೊಳಗೇರಿಯು ಮುಂಬೈನ ಹೃದಯ ಭಾಗದಲ್ಲಿ, ಬರೋಬ್ಬರಿ 600 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ. ಈ ಪ್ರದೇಶದಲ್ಲಿ ವಾಸಿಸುತ್ತಿರುವ ಜನರಿಗೆ ಪುನರ್‌ವಸತಿ ಒದಗಿಸುತ್ತೇವೆಂದು ಹೇಳಿಕೊಂಡು ‘ಧಾರಾವಿ ಪುನರ್ ಅಭಿವೃದ್ಧಿ ಯೋಜನೆ’ಯನ್ನು ಸರ್ಕಾರ ರೂಪಿಸಿದೆ. ಯೋಜನೆಯ ಗುತ್ತಿಗೆಯನ್ನು ಪ್ರಧಾನಿ ಮೋದಿ ಅವರ ಅತ್ಯಾಪ್ತ ಎಂದೇ ಕರೆಯಲಾಗುವ ಗೌತಮ್ ಅದಾನಿ ಅವರ ‘ಅದಾನಿ ಗ್ರೂಪ್’ಗೆ ನೀಡಲಾಗಿದೆ. ಈ ಪ್ರದೇಶದಲ್ಲಿ ಸುಮಾರು 1 ಲಕ್ಷ ಮನೆಗಳನ್ನು ಬಹುಮಹಡಿ ಕಟ್ಟಡಗಳಲ್ಲಿ ನಿರ್ಮಿಸುವುದು ಪ್ರಮುಖ ಉದ್ದೇಶವಾಗಿದೆ. ಅಂದರೆ, 600 ಎಕರೆ ಜಾಗದ ಪೈಕಿ, ಒಂದು ಪುಟ್ಟ ಭಾಗದಲ್ಲಿ ಅಲ್ಲಿನ ನಿವಾಸಿಗಳಿಗೆ ಮನೆ ನಿರ್ಮಿಸಿಕೊಟ್ಟು, ಉಳಿದ ಬಹುಪಾಲು ಭೂಮಿಯನ್ನು ಕೈಗಾರಿಕೆಗೆ ಅರ್ಥಾತ್ ಅದಾನಿ ಗ್ರೂಪ್‌ನ ಕೈಗಾರಿಕೆಗಳಿಗೆ ನೀಡುವ ಒಳಸಂಚು ಇದೆ ಎಂದು ಆರೋಪಿಸಲಾಗಿದೆ.
ಅಭಿವೃದ್ಧಿ ಹೆಸರಿನಲ್ಲಿ ತಮ್ಮ ಭೂಮಿಯನ್ನು ಕಸಿದುಕೊಂಡು ಬಂಡವಾಳಿಗರಿಗೆ ನೀಡುವ ಸರ್ಕಾರದ ಹುನ್ನಾರವನ್ನು ಅರಿತಿರುವ ಧಾರಾವಿ ಜನರು ಯೋಜನೆಯನ್ನು ವಿರೋಧಿಸುತ್ತಿದ್ದಾರೆ. ಸಮೀಕ್ಷೆಯಲ್ಲಿ ಭಾಗಿಯಾಗಲು ನಿರಾಕರಿಸುತ್ತಿದ್ದಾರೆ. ಆದರೆ, ಸಮೀಕ್ಷಕರು ಅಲ್ಲಿನ ಜನರನ್ನು ಬೆದರಿಸಿ, ಯೋಜನೆಗೆ ಒಪ್ಪಿಗೆ ಪಡೆಯುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ವರ್ಷಾ ಗಾಯಕ್ವಾಡ್, “ಇದು ಸಮೀಕ್ಷೆಯಲ್ಲ, ರಾಜ್ಯ ಸರ್ಕಾರ ಪ್ರಾಯೋಜಿತ ಶೋಷಣೆ. ಅದಾನಿ ಗ್ರೂಪ್‌ನ ಸಮೀಕ್ಷಕರು ಮನೆಯಲ್ಲಿ ಯುವಕರು ಇಲ್ಲದಿದ್ದಾಗ, ಮನೆಗಳಿಗ ನುಗ್ಗಿ ಹಿರಿಯ ನಾಗರಿಕರನ್ನು ಬೆದರಿಸಿ ಬಲವಂತವಾಗಿ ಒಪ್ಪಿಗೆ ಪಡೆಯುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.
SHOCKING! This is not a survey, this is state-sponsored exploitation. See this video.
— Prof. Varsha Eknath Gaikwad (@VarshaEGaikwad) July 16, 2025
In Kamala Nagar, Dharavi, when families refused to give in to Adani Sarkar’s lies, they waited till the young were away at work — and then preyed on our elders.
Old, frail senior citizens were… pic.twitter.com/IaCCqfpvDa
“ಧಾರಾವಿಯ ಬಡವರನ್ನು ಹೆದರಿಸಿ, ಮೂಲೆಗೆ ದೂಡಿ, ಮುಂಬೈಯ ಹೃದಯ ಭಾಗವನ್ನು ಅದಾನಿಗೆ ಕೊಡಲು ಹುನ್ನಾರ ನಡೆದಿದೆ. ಈ ಸಮೀಕ್ಷೆಯನ್ನು ತಕ್ಷಣವೇ ನಿಲ್ಲಿಸಬೇಕು. ಧಾರಾವಿ ಎಂದಿಗೂ ತಲೆಬಾಗುವುದಿಲ್ಲ. ನಾವು ನಮ್ಮ ಹಿರಿಯರಿಗೆ ಬೆಂಬಲವಾಗಿ ನಿಲ್ಲುತ್ತೇವೆ” ಎಂದು ವರ್ಷಾ ಗಾಯಕ್ವಾಡ್ ಹೇಳಿದ್ದಾರೆ.
ಅವರು ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಅಧಿಕಾರಿಯೊಬ್ಬ ವೃದ್ಧೆಯ ಕೈ ಹಿಡಿದು ಸಹಿ ಹಾಕುವಂತೆ ಒತ್ತಾಯಿಸುತ್ತಿರುವುದು ಮತ್ತು ಸಮೀಕ್ಷಕ ವೃದ್ಧೆಯ ಹೆಬ್ಬೆರಳನ್ನು ಹಿಡಿದು ಬಲವಂತವಾಗಿ ಒಪ್ಪಿಗೆ ಪತ್ರಕ್ಕೆ ಸಹಿ ಪಡೆಯುತ್ತಿರುವುದು ಕಂಡು ಬಂದಿದೆ.