ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ನಡೆದಿರುವ ಗಂಭೀರ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯ ಒದಗಿಸಲು ಹಾಗೂ ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯುವ ಸಲುವಾಗಿ ತಾವು ಮಧ್ಯ ಪ್ರವೇಶಿಸಬೇಕು ಎಂದು ಒತ್ತಾಯಿಸಿ ಸಾಮಾಜಿಕ ಕಾರ್ಯಕರ್ತೆ ನಾಗಮಣಿಯವರು, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರಿಗೆ ತುರ್ತು ಮನವಿ ಸಲ್ಲಿಸಿದ್ದಾರೆ.
“ಧರ್ಮಸ್ಥಳ ಪ್ರಕರಣವು ಎರಡು ದಶಕಗಳಿಂದ ನಡೆದಿರುವ ಕ್ರೂರ ಅತ್ಯಾಚಾರ, ಕೊಲೆ ಮತ್ತು ಸಾಮೂಹಿಕ ಶವ ಸಂಸ್ಕಾರ ಮಾಡಿರುವ ಆರೋಪಗಳನ್ನು ಎದುರಿಸುತ್ತಿದ್ದು, ಇದು ದೇಶದ ಆತ್ಮಸಾಕ್ಷಿಗೆ ಗಂಭೀರ ಕಳಂಕವಾಗಿದೆ” ಎಂದು ಒತ್ತಿ ಹೇಳಿದ್ದಾರೆ.
ಪ್ರಕರಣದ ಹಿನ್ನೆಲೆ:
“1995ರಿಂದ 2014ರವರೆಗೆ ಧರ್ಮಸ್ಥಳದ ಮಂಜುನಾಥ ದೇವಸ್ಥಾನದಲ್ಲಿ ಶುಚಿಕರ್ಮಿಯಾಗಿದ್ದ ದಲಿತ ವ್ಯಕ್ತಿಯೊಬ್ಬರು ತಮ್ಮ ದೂರನ್ನು ದಾಖಲಿಸಿದ್ದದು. ಈ ವ್ಯಕ್ತಿಯು, ದೇವಸ್ಥಾನದ ಆಡಳಿತಕ್ಕೆ ಸಂಬಂಧಿಸಿದ ಪ್ರಭಾವಿ ವ್ಯಕ್ತಿಗಳಿಂದ ನಡೆದಿವೆ ಎನ್ನಲಾದ ಅತ್ಯಾಚಾರ ಮತ್ತು ಕೊಲೆಗೊಳಗಾದ ನೂರಾರು ಮಹಿಳೆಯರು ಹಾಗೂ ಬಾಲಕಿಯರ ಶವಗಳನ್ನು ಬಲವಂತವಾಗಿ ಸಮಾಧಿ ಮಾಡಲು ಒತ್ತಾಯಿಸಲಾಗಿತ್ತೆಂದು ಆರೋಪಿಸಿದ್ದಾರೆ. ಈ ಭೀಕರ ಕೃತ್ಯಗಳನ್ನು ಎರಡು ದಶಕಗಳಿಗೂ ಹೆಚ್ಚು ಕಾಲ ಗೌಪ್ಯವಾಗಿಡಲಾಗಿತ್ತು. 2014ರಲ್ಲಿ ಭಯದಿಂದ ಪರಾರಿಯಾಗಿದ್ದ ದೂರುದಾರರು 2025ರ ಜುಲೈ 3ರಂದು ಮರಳಿ ಬಂದು, ಸಾಕ್ಷ್ಯವಾಗಿ ಅಸ್ಥಿಪಂಜರಗಳನ್ನು ಒದಗಿಸಿದ್ದಾರೆ. ಅಲ್ಲದೆ ನೇತ್ರಾವತಿ ನದಿಯ ಸಮೀಪದ ಸಮಾಧಿ ಸ್ಥಳಗಳನ್ನು ಗುರುತಿಸಲು ಸಿದ್ಧರಿದ್ದಾರೆ” ಎಂದು ಮನವಿಯಲ್ಲಿ ತಿಳಿಸಿದ್ದಾರೆ.
“ಈ ಪ್ರಕರಣದ ಗಂಭೀರತೆಯ ಹೊರತಾಗಿಯೂ, ದಕ್ಷಿಣ ಕನ್ನಡ ಪೊಲೀಸರ ತನಿಖೆಯಲ್ಲಿ ವಿಳಂಬವಾಗಿದ್ದು, ದುರ್ವರ್ತನೆಯ ಆರೋಪಗಳು ಕೇಳಿಬಂದಿವೆ. ಜುಲೈ 4ರಂದು ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 211(a) ಅಡಿಯಲ್ಲಿ FIR ದಾಖಲಾದರೂ, ಶವಗಳ ಗುರುತನ್ನು ತೋರಿಸಿ ಎರಡು ವಾರಗಳಾದರೂ ಸಮಾಧಿಗಳು ದೊರೆತ ಸ್ಥಳಕ್ಕೆ ಭೇಟಿಯಾಗಿಲ್ಲ. ಇದರಿಂದ ಸಾಕ್ಷ್ಯಗಳು ನಾಶವಾಗುವ ಸಂಭವವಿದೆ” ಎಂದು ನಾಗಮಣಿ ಆತಂಕ ವ್ಯಕ್ತಪಡಿಸಿದ್ದಾರೆ.
“ದೂರುದಾರರ ಗೌಪ್ಯ ಹೇಳಿಕೆ(ಸೆಕ್ಷನ್ 183, BNSS) ಮತ್ತು ವೈಯಕ್ತಿಕ ಮಾಹಿತಿಯನ್ನು ಕೆಲವು ಪೊಲೀಸ್ ಅಧಿಕಾರಿಗಳು ಸೋರಿಕೆ ಮಾಡಿದ್ದಾರೆಂಬ ಆರೋಪವಿದೆ. ಇದು ಸಾಕ್ಷಿಗಳ ರಕ್ಷಣಾ ಯೋಜನೆ, 2018ರ ನಿಯಮಗಳ ಉಲ್ಲಂಘನೆಯಾಗಿದೆ. ಈ ಲೋಪಗಳು ತನಿಖೆಯ ಸಮಗ್ರತೆಯನ್ನು ದುರ್ಬಲಗೊಳಿಸುತ್ತಿವೆ. ಅಲ್ಲದೆ ದೂರುದಾರರ ಜೀವಕ್ಕೆ ತೊಂದರೆಯನ್ನುಂಟು ಉಂಟುಮಾಡಿವೆ” ಎಂದು ಉಲ್ಲೇಖಿಸಿದ್ದಾರೆ.
ಮೂರು ದಶಕಗಳಿಂದ ಮಹಿಳೆಯರು, ಬಡವರು, ದಲಿತರು ಮತ್ತು ಸಾಮಾಜಿಕವಾಗಿ ಶೋಷಿತರ ಹಕ್ಕುಗಳಿಗಾಗಿ ಹೋರಾಡುತ್ತಿರುವ ನಾಗಮಣಿ, “ಈ ಪ್ರಕರಣವು ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಇಂತಹ ಗಂಭೀರ ಅಪರಾಧವನ್ನು ಬೆಳಕಿಗೆ ತಂದಿದೆ. ಹಾಗಾಗಿ ತಾವು ಮಧ್ಯಪ್ರವೇಶಿಸಿ ನ್ಯಾಯ ಒದಗಿಸುವಲ್ಲಿ ಕ್ರಮಕೈಗೊಳ್ಳಬೇಕು” ಎಂದು ರಾಹುಲ್ ಗಾಂಧಿ ಅವರಿಗೆ ಒತ್ತಾಯಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಮಾನಸಿಕ ಅಸ್ವಸ್ಥೆ ಮೇಲೆ ಅತ್ಯಾಚಾರ ಪ್ರಕರಣ : ಅಪರಾಧಿಗೆ 10 ವರ್ಷ ಕಠಿಣ ಶಿಕ್ಷೆ
- ವಿಶೇಷ ತನಿಖಾ ತಂಡ (SIT): ಪ್ರಾಮಾಣಿಕ ಮತ್ತು ಭ್ರಷ್ಟಾಚಾರ ರಹಿತ IPS ಅಧಿಕಾರಿಯ ನೇತೃತ್ವದಲ್ಲಿ, ಸುಪ್ರೀಂ ಕೋರ್ಟ್‌ನ ನಿವೃತ್ತ ಅಥವಾ ಕಾರ್ಯನಿರ್ವಾಹಕ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ SIT ರಚಿಸಬೇಕು.
- ದುರ್ವರ್ತನೆಯ ಪೊಲೀಸರ ವಿರುದ್ಧ ಕ್ರಮ: ಗೌಪ್ಯ ಮಾಹಿತಿ ಸೋರಿಕೆ ಮಾಡಿದ ಅಧಿಕಾರಿಗಳ ವಿರುದ್ಧ ಕಾನೂನು ಮತ್ತು ಶಿಸ್ತು ಕ್ರಮ ಕೈಗೊಳ್ಳಬೇಕು.
- ತನಿಖೆಯ ವಿಳಂಬ ತಡೆಗಟ್ಟುವಿಕೆ: ಸಾಕ್ಷ್ಯ ಉಳಿಸಲು ತಕ್ಷಣವೇ ಉತ್ಖನನ ಮತ್ತು ಸ್ಥಳ ಭೇಟಿಯನ್ನು ಖಾತ್ರಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ಪ್ರಕರಣವು ಭಾರತದ ಸಂವಿಧಾನದ ಘನತೆ, ಸಮಾನತೆ ಮತ್ತು ನ್ಯಾಯದ ಆದರ್ಶಗಳನ್ನು ಕಾಪಾಡುವ ಪರೀಕ್ಷೆಯಾಗಿದೆ. ಸಾಮಾಜಿಕ ಕಾರ್ಯಕರ್ತೆಯಾಗಿ, ನಾಗಮಣಿಯವರು ಈ ಅಮಾನವೀಯ ಕೃತ್ಯದ ವಿರುದ್ಧ ಧ್ವನಿಯಾಗಿ, ಲೋಕಸಭೆಯಲ್ಲಿ ಈ ವಿಷಯವನ್ನು ಎತ್ತಿಹಿಡಿಯಲು ಮತ್ತು ದೂರುದಾರರಿಗೆ ಹಾಗೂ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸಲು ರಾಹುಲ್ ಗಾಂಧಿಯವರಿಗೆ ಮನವಿ ಮಾಡಿದ್ದಾರೆ.