ಧರ್ಮಸ್ಥಳದಲ್ಲಿ ನೂರಾರು ಹೆಣ್ಣುಮಕ್ಕಳ ಅತ್ಯಾಚಾರ, ಕೊಲೆ ಕೃತ್ಯಗಳು ನಡೆದಿದೆ ಎಂದು ವ್ಯಕ್ತಿಯೋರ್ವ ನ್ಯಾಯಾಲಯದಲ್ಲಿ ಹೇಳಿಕೆ ನೀಡಿರುವ ಪ್ರಕರಣ ದೇಶವನ್ನೇ ತಲ್ಲಣಗೊಳಿಸಿದೆ. ಈ ಪ್ರಕರಣದ ಸತ್ಯಾಸತ್ಯತೆಯನ್ನು ಅರಿಯಲು ರಾಜ್ಯ ಸರ್ಕಾರ ವಿಶೇಷ ತನಿಖಾ ದಳ ರಚನೆ ಮಾಡಿ ಸೂಕ್ತ ತನಿಖೆ ನಡೆಸಬೇಕೆಂದು ಸೋಲಿಡಾರಿಟಿ ಯೂತ್ ಮೂವ್ಮೆಂಟ್ ರಾಜ್ಯಾಧ್ಯಕ್ಷರಾದ ಡಾ.ನಸೀಮ್ ಅಹ್ಮದ್ ಆಗ್ರಹಿಸಿದ್ದಾರೆ.
ಧರ್ಮಸ್ಥಳದಲ್ಲಿ ಮೂರು ದಶಕಗಳಲ್ಲಿ ನೂರಾರು ಹೆಣ್ಣುಮಕ್ಕಳ ಶವಗಳನ್ನು ಹೂತುಹಾಕಿರುವುದಾಗಿ ವ್ಯಕ್ತಿಯೊಬ್ಬ ಸಾಕ್ಷ್ಯ ಸಮೇತ ದೂರು ನೀಡಿದ್ದರೂ ಸರ್ಕಾರ ತನಿಖೆ ಮಾಡಲು ಹಿಂದೇಟು ಹಾಕುತ್ತಿದೆ. ಕೃತ್ಯಗಳ ಮಹತ್ವದ ಸಾಕ್ಷಿಯೆನಿಸುವ ವ್ಯಕ್ತಿಯೇ ಖುದ್ದಾಗಿ ದ.ಕ.ಎಸ್ಪಿಗೆ ದೂರು ನೀಡಿದ್ದರೂ ರಾಜ್ಯದ ಗೃಹ ಸಚಿವರು ಈವರೆಗೆ ಮೌನವಾಗಿರುವುದು ಧರ್ಮಸ್ಥಳದ ಪ್ರಭಾವಿಗಳನ್ನು ರಕ್ಷಿಸುವ ಸಂಕೇತವೇ? ಫೇಸ್ಟುಕ್ ಪೋಸ್ಟ್ ವಿಚಾರಕ್ಕೂ ರಾತ್ರೋರಾತ್ರಿ ಮನೆಗೆ ನುಗ್ಗಿ ಬಂಧಿಸುವ ಪೊಲೀಸ್ ಇಲಾಖೆಯ ಸಕ್ರಿಯತೆ ಧರ್ಮಸ್ಥಳದ ಸರಣಿ ಕೊಲೆ ಪ್ರಕರಣಗಳಲ್ಲಿ ನಿಷ್ಕ್ರಿಯವಾಗಿರುವುದು ಏನನ್ನು ಸೂಚಿಸುತ್ತದೆ? ಪ್ರಭಾವಿಗಳ ಸುಪರ್ದಿಯಲ್ಲಿ ನಡೆಯುವ ಜನಸಾಮಾನ್ಯರ ಸಾವು ನೋವುಗಳಿಗೆ ನ್ಯಾಯ ನಿರಾಕರಿಸಲಾಗುತ್ತಿದೆಯೇ? ಸರಕಾರವು ತನ್ನ ಹೊಣೆಗಾರಿಕೆಯನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕೆಂದು ಡಾ.ನಸೀಮ್ ಅಹ್ಮದ್ ಒತ್ತಾಯಿಸಿದ್ದಾರೆ.
ಇದನ್ನು ಓದಿದ್ದೀರಾ? ‘ಮನೆ-ಮನೆಗೆ ಪೊಲೀಸ್’ ಯೋಜನೆಗೆ ಗೃಹ ಸಚಿವರಿಂದ ಚಾಲನೆ: ಏನಿದು ಯೋಜನೆ?
ಸರ್ಕಾರದ ನಡೆ ಅನುಮಾನಕ್ಕೀಡು ಮಾಡಿದೆ. ಆದಷ್ಟು ಬೇಗ ಪ್ರಕರಣವನ್ನು ಎಸ್ ಐ ಟಿ ಗೆ ವಹಿಸಿ ಅಪರಾಧಿಗಳಿಗೆ ಶಿಕ್ಷೆ ಕೊಡಿಸಬೇಕೆಂದು ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕ ಆಗ್ರಹಿಸಿದೆ.
