ಮಹಾರಾಷ್ಟ್ರದಲ್ಲಿ ಬೃಹತ್ ಹನಿಟ್ರ್ಯಾಪ್ ಹಗರಣ ನಡೆದಿದೆ ಎಂಬ ಸುದ್ದಿ ಬೆಳಕಿಗೆ ಬಂದಿದ್ದು, ಆಡಳಿತ ವ್ಯವಸ್ಥೆಯನ್ನು ಬೆಚ್ಚಿಬೀಳಿಸಿದೆ. ಸುಮಾರು 75ಕ್ಕೂ ಹೆಚ್ಚು ಹಿರಿಯ ಸರ್ಕಾರಿ ಅಧಿಕಾರಿಗಳು, ಕಾನೂನು ಜಾರಿ ಸಂಸ್ಥೆಗಳ ಅಧಿಕಾರಿಗಳು ಹಾಗೂ ರಾಜಕೀಯ ನಾಯಕರ ಮೇಲೆ ಹನಿಟ್ರ್ಯಾಪ್ ನಡೆಸಲಾಗಿದೆ ಎಂದು ವರದಿಯಾಗಿದೆ. ಸುದ್ದಿ ಬೆಳಕಿಗೆ ಬಂದ ಬೆನ್ನಲ್ಲೇ, ಮಹಾರಾಷ್ಟ್ರದ ವಿಪಕ್ಷಗಳು ತನಿಖೆಗೆ ಆಗ್ರಹಿಸಿವೆ.
ವಿಧಾನಸಭೆಯಲ್ಲಿ ಹನಿಟ್ರ್ಯಾಪ್ ವಿಚಾರವನ್ನು ಪ್ರಸ್ತಾಪಿಸಿರುವ ಕಾಂಗ್ರೆಸ್ ಹಿರಿಯ ನಾಯಕ ನಾನಾ ಪಟೋಲೆ, “ಇದು ಸಾಮಾನ್ಯ ಅಪರಾಧವಲ್ಲ. ಈ ಹಗರಣವು ರಾಷ್ಟ್ರದ ಭದ್ರತೆಗೆ ಭಾರೀ ಅಪಾಯ ಉಂಟುಮಾಡುವ ಸಾಧ್ಯತೆ ಇದೆ. ಇಂತಹ ಟ್ರ್ಯಾಪ್‌ಗಳಿಂದ ರಹಸ್ಯ ದಾಖಲೆಗಳು ರಾಷ್ಟ್ರ ವಿರೋಧಿ ಶಕ್ತಿಗಳಿಗೆ ದೊರೆಯುವ ಅಪಾಯವಿದೆ. ಈ ಬಗ್ಗೆ ಸರ್ಕಾರ ಕೂಡಲೇ ತನಿಖೆ ನಡೆಸಬೇಕು” ಎಂದು ಒತ್ತಾಯಿಸಿದ್ದಾರೆ.
ಎನ್‌ಸಿಪಿ (ಎಸ್‌ಪಿ) ವಕ್ತಾರ ಮಹೇಶ್ ತಪಸೇ, “ಹನಿಟ್ರ್ಯಾಪ್ ಹಗರಣವು ಮುಂಬೈ, ಥಾಣೆ, ಪುಣೆ ಹಾಗೂ ನಾಸಿಕ್ ಸೇರಿದಂತೆ ಪ್ರಮುಖ ನಗರಗಳಲ್ಲಿ ನಡೆದಿದೆ. ಇದರಿಂದ ರಾಜ್ಯದ ಆಡಳಿತಕ್ಕೆ ಅಪಾಯವಾಗಲಿದೆ. ಉನ್ನತ ಹುದ್ದೆಯಲ್ಲಿ ಇರುವ ಅಧಿಕಾರಿಗಳ ಖಾಸಗಿ ಜೀವನಕ್ಕೂ ಭದ್ರತೆ ಇಲ್ಲವಾಗಿದೆ. ಇಂತಹ ಹಗರಣಗಳ ಬಗ್ಗೆ ಸರ್ಕಾರದ ಮೌನವು ಅನುಮಾನ ಹುಟ್ಟುಹಾಕಿದೆ. ಗುಪ್ತಚರ ಇಲಾಖೆಗಳು ತಮ್ಮ ಕರ್ತವ್ಯ ನಿರ್ವಹಿಸುವಲ್ಲಿ ವಿಫಲವಾಗಿವೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹನಿಟ್ರ್ಯಾಪ್ ಜಾಲದ ಹಿಂದೆ ನಾಸಿಕ್ ಮೂಲಕ ರಾಜಕೀಯ ಮಾಜಿ ಪದಾಧಿಕಾರಿಯ ಕೈವಾಡವಿದೆ ಎಂಬ ಅನುಮಾನ ವ್ಯಕ್ತವಾಗಿದೆ.
ಸಾಮಾಜಿಕ ಕಾರ್ಯಕರ್ತ ವಿಜಯ್ ಕುಂಭಾರ್, “ನಾಸಿಕ್‌ನ ಐಷಾರಾಮಿ ಹೋಟೆಲ್‌ಗಳಲ್ಲಿ ಈ ಸಂಚು ನಡೆಯುತ್ತಿದೆ. ಈ ಬಗ್ಗೆ ಮಹಿಳೆಯೊಬ್ಬರು ಮುಂಬೈನ ನಾಕಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ” ಎಂದು ತಿಳಿಸಿದ್ದಾರೆ.