ಶಾಂತಿಯುತ ಪ್ರತಿಭಟನೆ ಮಾಡಿದರೂ ಜೈಲಿಗೆ ಹಾಕುವ ಕಾಯ್ದೆ ತರುತ್ತಿದೆ ಬಿಜೆಪಿ!

Date:

Advertisements
ಯಾವುದೇ ಶಂಕಿತ ಸಂಘಟನೆಯನ್ನು ‘ಕಾನೂನುಬಾಹಿರ ಸಂಘಟನೆ’ ಎಂದು ಘೋಷಿಸುವ ಅಧಿಕಾರವನ್ನು ರಾಜ್ಯ ಸರ್ಕಾರಕ್ಕೆ ಈ ಎಂಎಸ್‌ಪಿಎಸ್ ಮಸೂದೆ ನೀಡುತ್ತದೆ

ತುರ್ತು ಪರಿಸ್ಥಿತಿಯ ಕಾಲದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲಾಯಿತು ಎಂದು ಭಾರೀ ಪ್ರಚಾರ ಮಾಡಿ ಜೂನ್ 25ನೇ ತಾರೀಖನ್ನು ‘ಸಂವಿಧಾನ ಹತ್ಯೆ ದಿನ’ ಎಂದು ಆಚರಣೆ ಮಾಡುವ ಬಿಜೆಪಿ, ತುರ್ತುಪರಿಸ್ಥಿತಿಯ ಕಾಲದಲ್ಲೂ ಇರದಂತಹ ಭೀಕರ ಕಾಯ್ದೆಯೊಂದನ್ನು ಜಾರಿಗೆ ತರಲು ಹೊರಟಿದೆ. ಶಾಂತಿಯುತ ಪ್ರತಿಭಟನೆ ನಡೆಸಿದರೂ ಜನರ ಅಭಿವ್ಯಕ್ತಿಯನ್ನು ಕಸಿಯುವಂತಹ ಮಸೂದೆಗೆ ಅಂಗೀಕಾರವನ್ನೂ ಹಾಕಿದೆ ನೆರೆಯ ಮಹಾರಾಷ್ಟ್ರ ಸರ್ಕಾರ.

ತುರ್ತುಪರಿಸ್ಥಿತಿಗೆ 50 ವರ್ಷ ತುಂಬಿದ ದಿನವನ್ನು ಆಚರಿಸಿ ಕೆಲವು ದಿನಗಳಾಗಿದೆಯಷ್ಟೇ. ಇದೇ ಹೊತ್ತಿನಲ್ಲಿ ದೇವೇಂದ್ರ ಫಡ್ನವೀಸ್ ನೇತೃತ್ವದ ಮಹಾಯತಿ ಸರ್ಕಾರವು ಜುಲೈ 10ರಂದು ರಾಜ್ಯ ವಿಧಾನಸಭೆಯಲ್ಲಿ ಧ್ವನಿ ಮತದ ಮೂಲಕ ವಿವಾದಿತ ಮಸೂದೆಯನ್ನು ಅಂಗೀಕರಿಸಿತು. ಅದರ ಹೆಸರು- ‘ಮಹಾರಾಷ್ಟ್ರ ವಿಶೇಷ ಸಾರ್ವಜನಿಕ ಭದ್ರತಾ ಮಸೂದೆ- 2024 (ಎಂಎಸ್‌ಪಿಎಸ್- 2024)’.

‘ತುರ್ತುಪರಿಸ್ಥಿತಿ ಘೋರ ಅಪರಾಧ’ ಎನ್ನುವ ಬಿಜೆಪಿಯ ನಿಜಮುಖ ಬಯಲಾಗಿದ್ದು, ತುರ್ತುಪರಿಸ್ಥಿತಿಯ ಕಾಲಕ್ಕಿಂತಲೂ ಭೀಕರವಾಗಿ ಹೋರಾಟಗಳನ್ನು ಹತ್ತಿಕ್ಕಲು ಬಿಜೆಪಿ ಹೊರಟಿದೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.

Advertisements

‘ಅರ್ಬನ್‌ ಮಾವೋವಾದಿ ನೆಟ್‌ವರ್ಕ್‌’ಗಳಿಂದ ವೃತ್ತಿಪರರು, ನಾಗರಿಕ ಸೇವಕರು, ಯುವಕರು ಬ್ರೈನ್‌ವಾಶ್ ಆಗುತ್ತಿದ್ದಾರೆ ಎಂಬ ಮಾತನ್ನು ಫಡ್ನವೀಸ್ ಅವರು ಮಸೂದೆ ಮಂಡನೆಯ ವೇಳೆ ಆಡಿದರು. “ನಗರ ಪ್ರದೇಶದ ಯುವಕರ ತಲೆ ಕೆಡಿಸುವ ಮಾವೋವಾದಿಗಳು, ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ವಿರುದ್ಧ ಬಂಡೇಳುವುದಕ್ಕೆ ಕಾರಣರಾಗುತ್ತಾರೆ” ಎಂದು ಆಪಾದಿಸಿದರು. “ನಕ್ಸಲಿಸಂನ ಬೆದರಿಕೆ ನಕ್ಸಲ್ ಪೀಡಿತ ರಾಜ್ಯಗಳ ದೂರದ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿಲ್ಲ. ಆದರೆ ನಕ್ಸಲಿಸಂ ಸಂಘಟನೆಯ ಜೊತೆ ಸಂಪರ್ಕ ಹೊಂದಿರುವ ಮೂಲಕ ನಗರ ಪ್ರದೇಶಗಳಲ್ಲಿಯೂ ನಕ್ಸಲಿಸಂ ಹೆಚ್ಚುತ್ತಿದೆ” ಎನ್ನುವುದು ಅವರ ಪ್ರತಿಪಾದನೆ. ಆದರೆ ಇಂತಹ ವಿವಾದಿತ ಮಸೂದೆಯು ಜನಸಾಮಾನ್ಯರ ಹಕ್ಕುಗಳನ್ನು ಹೇಗೆ ಕಸಿಯುತ್ತದೆ ಎಂಬುದನ್ನು ಗಂಭೀರವಾಗಿ ಆಲೋಚಿಸಬೇಕಾಗುತ್ತದೆ.

ಎಂಎಸ್‌ಪಿಎಸ್‌ ಮಸೂದೆಯಲ್ಲಿ ಏನಿದೆ?

ಯಾವುದೇ ಶಂಕಿತ ಸಂಘಟನೆಯನ್ನು ‘ಕಾನೂನುಬಾಹಿರ ಸಂಘಟನೆ’ ಎಂದು ಘೋಷಿಸುವ ಅಧಿಕಾರವನ್ನು ರಾಜ್ಯ ಸರ್ಕಾರಕ್ಕೆ ಈ ಎಂಎಸ್‌ಪಿಎಸ್ ಮಸೂದೆ ನೀಡುತ್ತದೆ. ವಿವಾದಿತ ಸಂಘಟನೆಗಳ ಸದಸ್ಯತ್ವ, ನಿಧಿಸಂಗ್ರಹಣೆ, ಇಂತಹ ಸಂಘಟನೆಗಳನ್ನು ನಿರ್ವಹಿಸುವುದು ಅಥವಾ ಅವುಗಳಿಗೆ ಸಹಾಯ ಮಾಡುವುದು ಹಾಗೂ ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸುವುದು- ಇವಿಷ್ಟು ಅಪರಾಧಗಳಾಗಿ ಪರಿಗಣಿಸಲ್ಪಡುತ್ತವೆ.

ಇದನ್ನೂ ಓದಿರಿ: ರಷ್ಯಾ ತೈಲ ಖರೀದಿಸಿದರೆ 500% ಸುಂಕ ಬೆದರಿಕೆ: ಭಾರತದ ಮೇಲೆ ಅಮೆರಿಕ-ನ್ಯಾಟೋ ‘ಇಬ್ಬಂದಿ ನೀತಿ’

ಎರಡರಿಂದ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 2 ಲಕ್ಷ ರೂ.ಗಳಿಂದ 5 ಲಕ್ಷ ರೂ.ಗಳವರೆಗೆ ದಂಡ ವಿಧಿಸುವ ಅಧಿಕಾರವನ್ನು ಈ ಮಸೂದೆಯಲ್ಲಿ ಸೇರಿಸಲಾಗಿದೆ. ಮಸೂದೆಯಡಿ ಬರುವ ಅಪರಾಧಗಳು ಜಾಮೀನು ರಹಿತವಾಗಿರುತ್ತವೆ ಮತ್ತು ವಾರೆಂಟ್ ಇಲ್ಲದೆ ಬಂಧಿಸಲು ಕಾರಣವಾಗುತ್ತವೆ.

“ಸಾರ್ವಜನಿಕ ಸುವ್ಯವಸ್ಥೆ, ಶಾಂತಿ-ನೆಮ್ಮದಿಗೆ ತೊಂದರೆ ಕೊಡುವುದು, ಬೆದರಿಕೆಯನ್ನು ಉಂಟು ಮಾಡುವುದು ಅಥವಾ ಕಾನೂನಿನ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವ ಯಾವುದೇ ಕೃತ್ಯವನ್ನು ಕಾನೂನುಬಾಹಿರ ಚಟುವಟಿಕೆ” ಎಂದು ಮಸೂದೆ ವ್ಯಾಖ್ಯಾನಿಸುತ್ತದೆ. ಈ ವ್ಯಾಖ್ಯಾನದ ಅಡಿಯಲ್ಲಿ ಸತ್ಯಾಗ್ರಹ, ನಾಗರಿಕ ಅಸಹಕಾರ ಮತ್ತು ಶಾಂತಿಯುತ ಪ್ರತಿಭಟನೆಗಳು ಬರುವ ಸಾಧ್ಯತೆ ಇದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾಂವಿಧಾನಿಕವಾಗಿ ಇರುವ ಅಭಿವ್ಯಕ್ತಿಗಳನ್ನೂ ಈ ಮಸೂದೆ ಅಪಾಯವೆಂದು ನಿರೂಪಿಸಲು ಹೊರಟಿದೆ.

2024ರ ಮಳೆಗಾಲದ ಅಧಿವೇಶನದಲ್ಲಿ ಅಂದಿನ ಉಪಮುಖ್ಯಮಂತ್ರಿ ಫಡ್ನವೀಸ್ ಅವರು ಈ ಮಸೂದೆಯನ್ನು ಮುನ್ನಲೆಗೆ ತಂದರು. 2024ರ ನವೆಂಬರ್‌ನಲ್ಲಿ ಮಹಾಯುತಿ ಅಧಿಕಾರಕ್ಕೆ ಬಂದ ಬಳಿಕ ಮಸೂದೆ ಮತ್ತೆ ಮೇಲೆದ್ದು ಬಂದಿತು. ಕಂದಾಯ ಸಚಿವ ಚಂದ್ರಶೇಖರ್ ಬವಾಂಕುಲೆ ನೇತೃತ್ವದ ಜಂಟಿ ಆಯ್ಕೆ ಸಮಿತಿಯು ಮಾರ್ಚ್ 4 ಮತ್ತು ಜೂನ್ 26ರ ನಡುವೆ ಐದು ಸಭೆಗಳನ್ನು ನಡೆಸಿ, 12,500ಕ್ಕೂ ಹೆಚ್ಚು ಸಲಹೆಗಳನ್ನು ಹಾಗೂ ಆಕ್ಷೇಪಣೆಗಳನ್ನು ಸ್ವೀಕರಿಸಿತು.

ಮಹಾರಾಷ್ಟ್ರದಲ್ಲಿ ನಡೆದ ಭಾರತ್ ಜೋಡೋ ಅಭಿಯಾನ ಮತ್ತು ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ಸೇರಿದಂತೆ ಅನೇಕ ನಾಗರಿಕ ಗುಂಪುಗಳು ಈ ಮಸೂದೆಯನ್ನು ವಿರೋಧಿಸಿದವು. ಇದು ಸರ್ವಾಧಿಕಾರಕ್ಕೆ ಆರಂಭಿಕ ಸಿದ್ಧತೆ ಎಂದು ಬಣ್ಣಿಸಿದವು. ತಕ್ಷಣವೇ ಮಸೂದೆಯನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಿದವು.

ಚಂದ್ರಶೇಖರ್ ಬವಾಂಕುಲೆ ಸಮಿತಿಯು ಮೂರು ತಿದ್ದುಪಡಿಗಳನ್ನು ಶಿಫಾರಸು ಮಾಡಿತು: ಅವುಗಳೆಂದರೆ- 1. ಎಡಪಂಥೀಯ ಉಗ್ರಗಾಮಿ ಸಂಘಟನೆಗಳು ಅಥವಾ ಅಂತಹುದೇ ಸಂಘಟನೆಗಳು ಎಂದು ನಿರ್ದಿಷ್ಟಪಡಿಸಲು ಶೀರ್ಷಿಕೆಯನ್ನು ಬದಲಾಯಿಸುವುದು. 2. ಮೂವರು ಹೈಕೋರ್ಟ್ ನ್ಯಾಯಾಧೀಶರು ಅಥವಾ ಅರ್ಹ ವ್ಯಕ್ತಿಗಳನ್ನು ಒಳಗೊಂಡ ಸಲಹಾ ಮಂಡಳಿಯನ್ನು ಕಡ್ಡಾಯಗೊಳಿಸುವುದು. 3. ತನಿಖಾಧಿಕಾರಿಯು ಸಬ್-ಇನ್‌ಸ್ಪೆಕ್ಟರ್‌ ದರ್ಜೆಯವರಾಗಿರಬೇಕೆಂದು ಸೂಚಿಸಲಾಗಿದ್ದು, ಈ ಜವಾಬ್ದಾರಿಯನ್ನು ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್‌ಪಿ) ಹುದ್ದೆಗೆ ಏರಿಸಬೇಕು.

ಜನಪ್ರತಿನಿಧಿಗಳ ವಿರೋಧ

ವಿಧಾನಸಭೆಯಲ್ಲಿ ಸಿಪಿಐ(ಎಂ) ಶಾಸಕ ವಿನೋದ್ ನಿಕೋಲ್ ಅವರು ಮಾತ್ರ ಈ ಮಸೂದೆಯನ್ನು ಖಂಡಾತುಂಡವಾಗಿ ವಿರೋಧಿಸಿದರು, ಜೊತೆಗೆ ಮಸೂದೆಯನ್ನು ಸಂಪೂರ್ಣವಾಗಿ ವಾಪಸ್ ಪಡೆಯುವಂತೆ ಒತ್ತಾಯಿಸಿದರು. ಎನ್‌ಸಿಪಿಯ ರೋಹಿತ್ ಪವಾರ್ (ಶರದ್ ಪವಾರ್ ಬಣ), ಮಸೂದೆಯ ದುರುಪಯೋಗದ ಬಗ್ಗೆ ಕಳವಳ ವ್ಯಕ್ತಪಡಿಸಿದರು. “ರಾಜಕೀಯ ಮತ್ತು ಸಾಮಾಜಿಕ ಕಾರ್ಯಕರ್ತರನ್ನು ಗುರಿಯಾಗಿಸಲಾಗುವುದಿಲ್ಲ. ಪ್ರತಿಭಟಿಸುವ ಹಕ್ಕನ್ನು ರಕ್ಷಿಸಲಾಗುವುದು” ಎಂದು ಫಡ್ನವೀಸ್ ಪ್ರತಿಕ್ರಿಯಿಸಿದರು.

ಇದನ್ನೂ ಓದಿರಿ: ಗೋಕರ್ಣದ ಗುಹೆಯ ಬದುಕಿಗೆ ಮನಸೋತಳೇ ರಷ್ಯಾದ ನೀನಾ ಕುಟಿನಾ

ಕಾಂಗ್ರೆಸ್ ನಾಯಕ ನಿತಿನ್ ರಾವತ್ ಮಾತನಾಡುತ್ತಾ, 2018ರ ವಿವಾದಾತ್ಮಕ ಭೀಮಾ ಕೋರೆಗಾಂವ್ ಪ್ರಕರಣವನ್ನು ಉಲ್ಲೇಖಿಸಿದರು. ಈ ಪ್ರಕರಣದಲ್ಲಿ ಹಲವಾರು ಜನರನ್ನು “ನಗರ ನಕ್ಸಲ್” ಹಣೆಪಟ್ಟಿಯಡಿಯಲ್ಲಿ ಬಂಧಿಸಲಾಯಿತು ಎಂಬುದನ್ನು ತಿಳಿಸಿದರು. ಇದರ ಹೊರತಾಗಿಯೂ, ವಿಧಾನಸಭಾ ಅಧಿವೇಶನದ ವೇಳೆ ಹೆಚ್ಚಿನ ಪ್ರತಿರೋಧ ಕಂಡುಬರಲಿಲ್ಲ. ಒಂದು ವರ್ಷಕ್ಕೂ ಹೆಚ್ಚು ಕಾಲ ಮಸೂದೆಯನ್ನು ವಿರೋಧಿಸುತ್ತಿದ್ದ ಸಾಮಾಜಿಕ ಕಾರ್ಯಕರ್ತರು ಆಘಾತಗೊಂಡಿದ್ದು ಸುಳ್ಳಲ್ಲ.

ಇದನ್ನೂ ಓದಿರಿ: ‘ಅಹಿಂದ’ಕ್ಕೆ ರಾಯಭಾರಿ ಸಿದ್ದು, ದೇಶದಲ್ಲಿ ಒಬಿಸಿ ರಾಜಕಾರಣಕ್ಕೆ ಮಾದರಿಯಾಗಿ ಕರ್ನಾಟಕ!

ಜೂನ್ 28ರಂದು ಮುಂಬೈನಲ್ಲಿ ಮಸೂದೆಯ ವಿರುದ್ಧ ನಡೆದ ರ್ಯಾಲಿಯಲ್ಲಿ ಉದ್ಧವ್ ಠಾಕ್ರೆ ಮತ್ತು ಹಿರಿಯ ಕಾಂಗ್ರೆಸ್ ನಾಯಕರು ಭಾಗವಹಿಸಿದ್ದರು. ಮಸೂದೆಯು ವಿಧಾನ ಪರಿಷತ್ತಿಗೆ ತಲುಪಿದಾಗ ಮಾತ್ರ ಕಾಂಗ್ರೆಸ್ ಮತ್ತು ಶಿವಸೇನೆ (ಉದ್ಧವ್ ಠಾಕ್ರೆ) ನಾಯಕರು ಬಲವಾಗಿ ದನಿ ಎತ್ತಿದರು.

“ಈ ಮಸೂದೆಯ ಮೂಲಕ ಪ್ರಜಾತಾಂತ್ರಿಕ ಹಕ್ಕುಗಳ ಮೇಲೆ ದಾಳಿ ಮಾಡಲಾಗುತ್ತಿದೆ” ಎಂದು ಕಾಂಗ್ರೆಸ್ ನಾಯಕರಾದ ಸತೇಜ್ ಪಾಟೀಲ್ ಮತ್ತು ಅಭಿಜಿತ್ ವಂಜಾರಿ ವಾಗ್ದಾಳಿ ನಡೆಸಿದರು. ಶಿವಸೇನೆ (ಯುಬಿಟಿ) ಎಂಎಲ್‌ಸಿ ಅನಿಲ್ ಪರಬ್ ಅವರು ಮಸೂದೆಯ ನ್ಯೂನತೆಗಳನ್ನು ಎತ್ತಿ ತೋರಿಸುವ ನಿಟ್ಟಿನಲ್ಲಿ ವಿಸ್ತೃತವಾಗಿ ಮಾತನಾಡಿದರು. “ಎಡಪಂಥೀಯ ಉಗ್ರವಾದವನ್ನು ಮಾತ್ರ ಗುರಿಯಾಗಿಸಿಕೊಂಡಿದ್ದಾರೆ, ಆದರೆ ಬಲಪಂಥೀಯ ಉಗ್ರವಾದವನ್ನು ಏಕೆ ನಿರ್ಲಕ್ಷಿಸಲಾಗಿದೆ” ಎಂದು ವಂಜಾರಿ ಕೇಳಿದರು. ಠಾಕ್ರೆಯವರು, “ಇದು ಜನ ಸುರಕ್ಷಾ ಮಸೂದೆಯಲ್ಲ, ಬಿಜೆಪಿ ಸುರಕ್ಷಾ ಮಸೂದೆ” ಎಂದು ಜರಿದಿದ್ದಾರೆ.

ಆಕ್ಷೇಪಣೆಗಳ ಹೊರತಾಗಿಯೂ, ಎರಡೂ ಸದನಗಳಲ್ಲಿ ಸರ್ಕಾರದ ಸಂಖ್ಯಾ ಬಲದಿಂದಾಗಿ ಮಸೂದೆಯನ್ನು ಅಂಗೀಕರಿಸಲಾಯಿತು. ಪರಿಷತ್ತಿನ ವಿರೋಧ ಪಕ್ಷದ ಸದಸ್ಯರು ರಾಜ್ಯಪಾಲರಿಗೆ ಎಂಟು ಪುಟಗಳ ಜ್ಞಾಪಕ ಪತ್ರವನ್ನು ಸಲ್ಲಿಸಿ, ಒಪ್ಪಿಗೆಯನ್ನು ತಡೆಹಿಡಿಯುವಂತೆ ಒತ್ತಾಯಿಸಿದರು.

ನಗರ ನಕ್ಸಲ್; ಬಿಜೆಪಿ ಟೂಲ್‌ಕಿಟ್

ಬಿಜೆಪಿ ಬೆಂಬಲಿಗರು ಮತ್ತು ಬಲಪಂಥೀಯ ವಿಚಾರಧಾರೆಯವರು ಬಹಳ ಹಿಂದಿನಿಂದಲೂ ‘ನಗರ ನಕ್ಸಲರು’ ಎಂಬ ಅಂಶವನ್ನು ಪ್ರಚಾರ ಮಾಡುತ್ತಾ ಬಂದಿದ್ದಾರೆ. ಇದು ಟೂಲ್‌ ಕಿಟ್ ರೀತಿ ಬಳಕೆಯಾಗುತ್ತಾ ಬಂದಿದೆ.

ಸಿಎಎ-ಎನ್‌ಆರ್‌ಸಿ ವಿರೋಧಿಸಿ ನಡೆದ ಚಳವಳಿಗಳ ಸಂದರ್ಭದಲ್ಲಿ, ವಿವಾದಿತ ಕೃಷಿ ಕಾನೂನುಗಳ ವಿರುದ್ಧ ನಡೆದ ಸುದೀರ್ಘ ಹೋರಾಟದ ವೇಳೆ ‘ಅರ್ಬನ್ ನಕ್ಸಲ್’ ಎಂಬ ಪದವನ್ನು ಬಿಜೆಪಿ ಬೆಂಬಲಿಗರು ವ್ಯಾಪಕವಾಗಿ ಬಳಕೆಗೆ ತಂದರು. ಈ ನಿಟ್ಟಿನಲ್ಲಿ ಭೀಮಾ ಕೋರೆಗಾಂವ್ ಪ್ರಕರಣವು ಹೆಚ್ಚು ಉಲ್ಲೇಖಿಸಬಹುದಾದ ಉದಾಹರಣೆಯಾಗಿದೆ. ರಾಜಕೀಯ ವಿದ್ವಾಂಸ ಆನಂದ್ ತೇಲ್ತುಂಬ್ಡೆ, ಹೋರಾಟಗಾರ್ತಿ ಸುಧಾ ಭಾರದ್ವಾಜ್ ಮತ್ತು 84 ವರ್ಷದ ಫಾದರ್ ಸ್ಟಾನ್ ಸ್ವಾಮಿ ಸೇರಿದಂತೆ ಹದಿನಾರು ಮಂದಿಯನ್ನು ಬಂಧಿಸಲಾಯಿತು. ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದರೂ ಪದೇ ಪದೇ ಜಾಮೀನು ನಿರಾಕರಿಸಲ್ಪಟ್ಟ ನಂತರ ಸ್ಟಾನ್‌ ಸ್ವಾಮಿಯವರು ಜುಲೈ 5, 2021 ರಂದು ಜೈಲಿನಲ್ಲೇ ನಿಧನರಾದರು. ದೆಹಲಿ ವಿಶ್ವವಿದ್ಯಾಲಯದ ಶೈಕ್ಷಣಿಕ ಮತ್ತು ಮಾನವ ಹಕ್ಕುಗಳ ಕಾರ್ಯಕರ್ತ ಪ್ರೊಫೆಸರ್ ಜಿ.ಎನ್. ಸಾಯಿಬಾಬಾ ಅವರಿಗೆ ಸೆಷನ್ಸ್ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿತು. ಸುಮಾರು ಒಂದು ದಶಕ ಜೈಲಿನಲ್ಲಿ ಕಳೆದ ನಂತರ ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠವು ಅವರನ್ನು ಖುಲಾಸೆಗೊಳಿಸಿತು. ಹೈದರಾಬಾದ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಸಾಯಿಬಾಬಾ ಅವರು ಅಕ್ಟೋಬರ್ 12, 2024 ರಂದು ನಿಧನರಾದರು.

ಕಾನೂನಿನ ಮೂಲಕ ಬಾಯಿ ಮುಚ್ಚಿಸುವ ಷಡ್ಯಂತ್ರ

ಅಸ್ತಿತ್ವದಲ್ಲಿರುವ ಹಲವಾರು ಕಾಯ್ದೆಗಳು ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಹಿಡಿಯುತ್ತವೆ. ಹೀಗಿರುವಾಗ ಎಂಎಸ್‌ಪಿಎಸ್‌ ಮಸೂದೆಯ ಹಿಂದಿರುವ ಉದ್ದೇಶವೇನು ಎಂದು ಕಾಂಗ್ರೆಸ್ ಎಂಎಲ್‌ಸಿ ಅಭಿಜಿತ್ ವಂಜಾರಿ ಪ್ರಶ್ನಿಸಿದ್ದಾರೆ. “ನಕ್ಸಲ್ ಚಳವಳಿ ಬಹುತೇಕ ಮುಗಿದ ಅಧ್ಯಾಯ. ಅದು ಕೇವಲ 28 ಪ್ರತಿಶತ ಮಾತ್ರ ಉಳಿದಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿಕೊಳ್ಳುತ್ತಾರೆ. ಹಾಗಾದರೆ ನಕ್ಸಲ್ ನಿಗ್ರಹವನ್ನು ಯಾವ ಕಾನೂನಿನ ಅಡಿಯಲ್ಲಿ ಸಾಧಿಸಲಾಗಿದೆ?” ಎಂದು ಕೇಳಿದ್ದಾರೆ ವಂಜಾರಿ. ಅದಕ್ಕೆ ಫಡ್ನವೀಸ್, “ನಮ್ಮ ಗುರಿ ನಗರ ನಕ್ಸಲರು. ಅದಕ್ಕಾಗಿ ಈ ಮಸೂದೆ ಮಾಡಿದ್ದೇವೆ” ಎಂದು ಸಮರ್ಥನೆ ಕೊಡುತ್ತಿದ್ದಾರೆ.

ನ್ಯಾಷನಲ್ ಅಲೈಯನ್ಸ್ ಫಾರ್ ಪೀಪಲ್ಸ್ ಮೂವ್ಮೆಂಟ್ಸ್‌ನ ಸಂಜಯ್ ಎಂ.ಜಿ ಅವರ ಆತಂಕಗಳ ಕುರಿತು ಎಲ್ಲರೂ ಯೋಚಿಸಬೇಕಾಗುತ್ತದೆ. “ಮುಂದಿನ ದಿನಗಳಲ್ಲಿ ಭಾರತದಲ್ಲಿ ನಡೆಯುವ ಲೂಟಿಗಳ ವಿರುದ್ಧ ಪ್ರತಿಭಟನೆಗಳು ನಡೆಯುತ್ತವೆ. ಅವುಗಳನ್ನು ಹತ್ತಿಕ್ಕಲು ಈ ಕಾನೂನು ಉದ್ದೇಶಿಸಿದೆ. ಬಿಜೆಪಿ ಪ್ರಸ್ತಾಪಿಸಿರುವ ಅಭಿವೃದ್ಧಿ ಮಾದರಿಗಳಿಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಅದು ಧಾರಾವಿಯ ಪುನರಾಭಿವೃದ್ಧಿ ಯೋಜನೆಯಾಗಿರಬಹುದು ಅಥವಾ ವಿದರ್ಭದಲ್ಲಿ ಖನಿಜ ಸಂಪತ್ತು ಲೂಟಿಗೆ ಮಾಡಿರುವ ಕಾರ್ಯಯೋಜನೆಯಾಗಿರಬಹುದು- ಇವುಗಳನ್ನು ನೋಡಿಕೊಂಡು ಜನರು ಮೌನವಾಗಿರುವುದಿಲ್ಲ. ಆದರೆ ಈ ಕಾನೂನಿನ ಮೂಲಕ ಜನರ ಬಾಯಿ ಮುಚ್ಚಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ” ಎನ್ನುತ್ತಾರೆ ಸಂಜಯ್.

ಇದನ್ನೂ ಓದಿರಿ: ಏರೋಸ್ಪೇಸ್‌ಗೆ ಆಂಧ್ರ ಆಹ್ವಾನ; ಕೈಗಾರಿಕೆ ವಿಚಾರದಲ್ಲಿ ಪ್ರಾದೇಶಿಕ ಸ್ಫರ್ಧೆ

ಹಿರಿಯ ಸಾಮಾಜಿಕ ಕಾರ್ಯಕರ್ತ ವಿವೇಕ್ ಕೊರ್ಡೆ, ಸಂಘಟಿತ ದ್ವೇಷದ ಅಧ್ಯಯನ ಕೇಂದ್ರದ 2024ರ ವರದಿಯನ್ನು ಉಲ್ಲೇಖಿಸಿ, ಸರ್ಕಾರ ಮಾಡಬೇಕಿದ್ದ ಕೆಲಸಗಳ ಬಗ್ಗೆ ಮಾತನಾಡಿದ್ದಾರೆ. “ಮಹಾರಾಷ್ಟ್ರ ರಾಜ್ಯವು ದ್ವೇಷ ಭಾಷಣಗಳಲ್ಲಿ ಮುಂಚೂಣಿಯಲ್ಲಿದೆ. ಅಂತಹ ಪ್ರಕರಣಗಳಲ್ಲಿ ಭಾಗಿಯಾದವರ ಪೈಕಿ ಶೇ. 90 ಕ್ಕಿಂತ ಹೆಚ್ಚು ಜನರು ಬಲಪಂಥೀಯ ನಾಯಕರೇ ಆಗಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಫಡ್ನವೀಸ್ ನಿಜವಾಗಿಯೂ ಕಾಳಜಿ ವಹಿಸಿದ್ದರೆ, ಅವರು ದ್ವೇಷ ಭಾಷಣ ಮತ್ತು ಹಿಂಸಾಚಾರಗಳ ವಿರುದ್ಧ ಕಾನೂನು ರೂಪಿಸುತ್ತಿದ್ದರು” ಎಂದು ಕುಟುಕಿದ್ದಾರೆ.

“ನಾವು ಮಹಾರಾಷ್ಟ್ರದಾದ್ಯಂತ ಬೃಹತ್ ಪ್ರತಿಭಟನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದೇವೆ” ಎಂದು ಭಾರತ್ ಜೋಡೋ ಅಭಿಯಾನದ ಉಲ್ಕಾ ಮಹಾಜನ್ ತಿಳಿಸಿದ್ದಾರೆ. “ಇಲ್ಲಿ ಗುರಿ ಸ್ಪಷ್ಟವಾಗಿದೆ. ತಮ್ಮ ಹಕ್ಕುಗಳನ್ನು ಪ್ರತಿಪಾದಿಸುವ ಜನರ ಬಾಯಿ ಮುಚ್ಚಿಸುವುದೇ ಈ ಜನವಿರೋಧಿ ಮಸೂದೆಯ ಉದ್ದೇಶವಾಗಿದೆ” ಎಂದಿರುವ ವಂಚಿತ್ ಬಹುಜನ್ ಅಘಾಡಿ ನಾಯಕ ಪ್ರಕಾಶ್ ಅಂಬೇಡ್ಕರ್, ಕಾನೂನು ಹೋರಾಟ ನಡೆಸುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.

ಮಹಾರಾಷ್ಟ್ರ ಇತ್ತೀಚೆಗೆ ವಿವಾದಗಳಿಂದ ಸುದ್ದಿಯಲ್ಲಿದೆ. ವ್ಯಾಪಕ ಭ್ರಷ್ಟಾಚಾರ, ಶಾಸಕರ ಗೂಂಡಾಗಿರಿ, ಹಿಂಸಾತ್ಮಕ ಭಾಷಾ ಪ್ರತಿಭಟನೆಗಳು ಮತ್ತು ಕುಸಿಯುತ್ತಿರುವ ಮೂಲಸೌಕರ್ಯ- ಮೊದಲಾದ ನಕಾರಾತ್ಮಕ ವಿಷಯಗಳ ಮೂಲಕ ಮಹಾರಾಷ್ಟ್ರ ಗಮನ ಸೆಳೆಯುತ್ತಿದೆ. ಸರ್ಕಾರ ಇಟ್ಟಿರುವ ಹೆಜ್ಜೆಯು ಮತ್ತೊಂದು ಕುಸಿತವನ್ನು ನಿಚ್ಚಳವಾಗಿ ತೆರೆದಿಟ್ಟಿದೆ.

ತುರ್ತುಪರಿಸ್ಥಿತಿಯ ವಿರುದ್ಧ ಪುಂಕಾನುಪುಂಕವಾಗಿ ಭಾಷಣ ಮಾಡುವ ಬಿಜೆಪಿಯವರು, ಅಘೋಷಿತ ತುರ್ತುಪರಿಸ್ಥಿತಿ ಮಾದರಿಯಲ್ಲಿ ಜನರ ಬಾಯಿ ಮುಚ್ಚಿಸಲು ಹೊರಟಿರುವುದು ಸ್ಪಷ್ಟವಾಗಿ ಕಾಣುತ್ತಿದೆ.

ಮಾಹಿತಿ ಕೃಪೆ: Frontline

ಭಾವಾನುವಾದ: ಯತಿರಾಜ್ ಬ್ಯಾಲಹಳ್ಳಿ

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗದಗ | ಮುಶಿಗೇರಿ ವಸತಿ ನಿಲಯಕ್ಕೆ ಮೂಲ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಗೋಳು ಕೇಳೋರ್ಯಾರು?

ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ವಸತಿ...

Download Eedina App Android / iOS

X