ಎಂಜಿನಿಯರಿಂಗ್, ನರ್ಸಿಂಗ್ ಮತ್ತು ಇತರ ವೃತ್ತಿಪರ ಕೋರ್ಸ್‌ಗಳ ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಕಾಲೇಜು ಮತ್ತು ಕೋರ್ಸ್‌ಗಳ ಆಯ್ಕೆ (ಆಪ್ಷನ್) ಸಮಯದಲ್ಲೇ ವಿದ್ಯಾರ್ಥಿಗಳಿಗೆ ₹750 ಶುಲ್ಕ ವಿಧಿಸಿರುವುದನ್ನು ವಿರೋಧಿಸಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ವಿರುದ್ಧ ಶನಿವಾರ ಔರಾದ್ ಪಟ್ಟಣದಲ್ಲಿ ವಿದ್ಯಾರ್ಥಿಗಳು ಹಾಗೂ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತ್ರತ್ವದಲ್ಲಿ ಪಟ್ಟಣದ ಕನ್ನಡಾಂಬೆ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದರು. ಬಳಿಕ ಸಿಎಂ ಸಿದ್ದರಾಮಯ್ಯ ಅವರ ಹೆಸರಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಗ್ರೇಡ್-2 ತಹಸೀಲ್ದಾರ್ ವೆಂಕಟೇಶ ಅವರಿಗೆ ಸಲ್ಲಿಸಿದರು.
ʼಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ರಾಜ್ಯಾದ್ಯಂತ ಪ್ರತಿಭಟನೆ ಗೆ ಕರೆ ನೀಡದ್ದು, ಸಿಇಟಿ ಅರ್ಜಿ ಶುಲ್ಕ ಪಾವತಿಸಿದ ಬಳಿಕ ಮತ್ತೆ ಆಯ್ಕೆ ಶುಲ್ಕ ನಿಗದಿಪಡಿಸಿರುವ ನಿರ್ಧಾರವನ್ನು ಹಿಂತೆಗೆದುಕೊಳ್ಳಬೇಕು ಹಾಗೂ ಸರ್ಕಾರಿ ಸೀಟುಗಳಿಗೂ ಹೆಚ್ಚುವರಿ ಹಣ ವಸೂಲಿ ಮಾಡುವುದನ್ನು ನಿಲ್ಲಿಸಬೇಕುʼ ಎಂದು ಪ್ರತಿಭಟನಕಾರರು ಆಗ್ರಹಿಸಿದರು.

ʼಮೊದಲ ಸುತ್ತಿನ ಕೌನ್ಸೆಲಿಂಗ್‌ನಲ್ಲಿ ಕೃಷಿ ಕಾಲೇಜು, ವಿಶ್ವವಿದ್ಯಾಲಯ, ಬಿಎಸ್‌ಸಿ ನರ್ಸಿಂಗ್, ಬಿ ಫಾರ್ಮಾ, ಆರ್ಕಿಟೆಕ್ಟರ್ ಕೋರ್ಸ್‌ಗಳನ್ನು ಆಯ್ಕೆ ನಮೂದಿನಲ್ಲಿ ತೋರಿಸಿಲ್ಲ. ಹಲವು ಕೋರ್ಸ್‌ಗಳನ್ನು ಎರಡು ಅಥವಾ ಮೂರನೇ ಸುತ್ತಿನ ಕೌನ್ಸೆಲಿಂಗ್‌ನಲ್ಲಿ ಪ್ರಕಟ ಮಾಡಲಾಗಿದೆ. ಆದರೆ, ಈ ಕುರಿತು ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟವಾಗದಿರುವ ಕಾರಣ ಮೊದಲ ಸುತ್ತಿನ ಆಯ್ಕೆಯಲ್ಲಿ ಕಾಲೇಜು ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳಿಗೆ ಹೊಸ ಕೋರ್ಸ್ ಅಥವಾ ಕಾಲೇಜುಗಳ ಬಗ್ಗೆ ಮಾಹಿತಿ ಇಲ್ಲದಂತಾಗಿದೆʼ ಎಂದು ಆರೋಪಿಸಿದರು.
ಇದನ್ನೂ ಓದಿ : ಬೀದರ್ ಜಿಲ್ಲೆಯ ಪ್ರವಾಸಿ ತಾಣಗಳ ವೀಕ್ಷಣೆಗೆ ʼಬೀದರ್ ದರ್ಶನʼ ವಿಶೇಷ ಬಸ್‌ಗೆ ಚಾಲನೆ
ಎಬಿವಿಪಿ ಮುಖಂಡ ಅಶೋಕ ಶೆಂಬೆಳ್ಳಿ, ಅಂಬಾದಾಸ ನೆಳಗೆ,ಅನೀಲ ಮೇತ್ರೆ, ಮಲ್ಲಿಕಾರ್ಜುನ ಟೇಕರಾಜ, ಎಬಿವಿಪಿ ಜಿಲ್ಲಾ ಸಂಚಾಲಕ ಶಶಿಕಾಂತ ರ್ಯಾಕಲೆ, ರಾಜ್ಯ ಕಾರ್ಯಕಾರಣಿ ಸದಸ್ಯ ಸಂಗಮೇಶ ದ್ಯಾಡೆ ಸೇರಿದಂತೆ ಪ್ರಮುಖರಾದ ಸುರೇಶ ನಿಟ್ಟೂರೆ, ಅಂಕುಶ ಪವಾರ, ಶ್ರೀದೇವಿ, ಆರತಿ, ಸುಜಾತಾ, ವನೀತಾ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಕೆಇಎ ವಿರುದ್ಧ ಬೀದರ್‌ನಲ್ಲಿ ಪ್ರತಿಭಟನೆ :
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೀದರ ಘಟಕ ವತಿಯಿಂದ ಬೀದರ ನಗರದಲ್ಲಿ ಡಾ.ಅಂಬೇಡ್ಕರ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಬಳಿಕ ಛತ್ರಪತಿ ಶಿವಾಜಿ ವೃತ್ತದಲ್ಲಿ ಮಾನವ ಸರಪಳಿ ರಚಿಸಿದರು. ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ನಗರ ಕಾರ್ಯದರ್ಶಿ ಆನಂದ, ಪವನ್ ಕುಂಬಾರ ಜಿಲ್ಲಾ ಸಂಚಾಲಕರಾದ ನಾಗರಾಜ ಸುಲ್ತಾನ್ಪುರ,ರಾಜ್ಯ ಕಾರ್ಯಕಾರಣಿ ಲಿಂಗದೇವ ಗುತ್ತಿ ಸೇರಿದಂತೆ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.