“ಮಾಹಿತಿ ಹಕ್ಕು ಆಯೋಗದಿಂದ ಬಾಕಿ ಪ್ರಕರಣಗಳ ಇತ್ಯರ್ಥಕ್ಕೆ ನವೆಂಬರ್ ನಲ್ಲಿ ಅದಾಲತ್ ಮಾದರಿಯಲ್ಲಿ ಜಿಲ್ಲೆಯಲ್ಲಿ ಕಲಾಪ ನಡೆಸುವ ಗುರಿ, ಆಡಳಿತದಲ್ಲಿ ಪಾರದರ್ಶಕತೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು” ಎಂದು ಆಯುಕ್ತರಾದ ರುದ್ರಣ್ಣ ಹರ್ತಿಕೋಟೆ, ರಾಜಶೇಖರ್ ದಾವಣಗೆರೆಯಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
“ಮಾಹಿತಿ ಹಕ್ಕು ಕಾಯಿದೆಯಿಂದ ಆಡಳಿತದಲ್ಲಿ ಪಾರದರ್ಶಕತೆ ಹೆಚ್ಚಳ, ಹೊಣೆಗಾರಿಕೆ, ಭ್ರಷ್ಟಾಚಾರ ತಡೆ ಸೇರಿದಂತೆ ಆಡಳಿತದಲ್ಲಿ ಸಾರ್ವಜನಿಕರ ಸಹಭಾಗಿತ್ವವನ್ನು ಹೆಚ್ಚಿಸಲು ಬಹಳ ಉಪಯೋಗವಾಗಿದೆ. ಆರ್.ಟಿ.ಐ. ಕಾಯಿದೆಯಡಿ ಸಲ್ಲಿಕೆಯಾಗುವ ಎರಡನೇ ಮೇಲ್ಮನವಿ ಪ್ರಕರಣಗಳನ್ನು ಗಣನೀಯವಾಗಿ ತಗ್ಗಿಸಲು ಮಾಹಿತಿ ಹಕ್ಕು ಆಯೋಗ ಮುಂದಾಗಿದ್ದು ನವೆಂಬರ್ ವೇಳೆಗೆ ಜಿಲ್ಲಾ ಹಂತದಲ್ಲಿ ಕಲಾಪ ನಡೆಸುವ ಮೂಲಕ ಅದಾಲತ್ ಮಾದರಿಯಲ್ಲಿ ಪ್ರಕರಣಗಳನ್ನು ಶೀಘ್ರ ಇತ್ಯರ್ಥಕ್ಕೆ ಕ್ರಮವಹಿಸಲಾಗುತ್ತದೆ” ಎಂದು ಮಾಹಿತಿ ಹಕ್ಕು ಆಯೋಗ ಆಯುಕ್ತರಾದ ರುದ್ರಣ್ಣ ಹರ್ತಿಕೋಟೆ ಮತ್ತು ರಾಜಶೇಖರ್ ಅವರು ಜಂಟಿಯಾಗಿ ಮಾಹಿತಿ ನೀಡಿದರು.

ಶನಿವಾರ ದಾವಣಗೆರೆ ಜಿಲ್ಲಾಧಿಕಾರಿಗಳ ಕಚೇರಿ ತುಂಗಭದ್ರಾ ಸಭಾಂಗಣದಲ್ಲಿ ಜಿಲ್ಲೆಯಲ್ಲಿನ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಮತ್ತು ಮೊದಲ ಮೇಲ್ಮನವಿ ಪ್ರಾಧಿಕಾರಗಳಿಗೆ ಏರ್ಪಡಿಸಲಾದ ತರಬೇತಿ ಕಾರ್ಯಗಾರದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ದಾವಣಗೆರೆಯಲ್ಲಿ ನಡೆದ ತರಬೇತಿ ಕಾರ್ಯಾಗಾರದಲ್ಲಿ ಆಯುಕ್ತರು ರುದ್ರಣ್ಣ ಹರ್ತಿಕೋಟೆ ಮಾತನಾಡಿ, “ಮಾಹಿತಿ ಹಕ್ಕು ಕಾಯಿದೆಯು (RTI) ಆಡಳಿತದಲ್ಲಿ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಭ್ರಷ್ಟಾಚಾರ ತಡೆಗೆ ಪರಿಣಾಮಕಾರಿ ಆಗಿದ್ದು, ಸಾರ್ವಜನಿಕರ ಸಹಭಾಗಿತ್ವವನ್ನೂ ಹೆಚ್ಚಿಸುತ್ತಿದೆ ರಾಜ್ಯದಲ್ಲಿ ಎರಡನೇ ಮೇಲ್ಮನವಿ ಅರ್ಜಿಗಳನ್ನು ತಗ್ಗಿಸಲು ಜಿಲ್ಲಾವಾರು ಅದಾಲತ್ ಮಾದರಿಯಲ್ಲಿ ವಿಚಾರಣೆ ನಡೆಸಲಾಗುವುದು” ಎಂದು ಮಾಹಿತಿ ಹಕ್ಕು ಆಯೋಗದ ಆಯುಕ್ತರು ತಿಳಿಸಿದ್ದಾರೆ.
“ರಾಜ್ಯ ಮಾಹಿತಿ ಹಕ್ಕು ಆಯೋಗದಲ್ಲಿ 10 ಆಯುಕ್ತರು, ಒಬ್ಬರು ಮುಖ್ಯ ಆಯುಕ್ತರು ಇರುತ್ತಾರೆ. ಪ್ರಸ್ತುತ 56,000 ಮೇಲ್ಮನವಿ ಪ್ರಕರಣಗಳಿದ್ದು, ಅವು 46,446ಕ್ಕೆ ಇಳಿದಿವೆ. ಹೆಚ್ಚಿನ ಪ್ರಕರಣಗಳು ಬೆಂಗಳೂರು ನಗರದಲ್ಲಿ (11,428), ಕಡಿಮೆ ಪ್ರಕರಣಗಳು ಕೊಡಗಿನಲ್ಲಿ (75) ಇವೆ. ದಾವಣಗೆರೆ ಜಿಲ್ಲೆಯಲ್ಲಿ 559 ಪ್ರಕರಣಗಳಿವೆ.
“ಅರ್ಜಿ ಸಂಖ್ಯೆ ಕಡಿಮೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಆರ್ ಟಿ ಐ(RTI) ಕಾಯಿದೆಯ 4(1) (A)(B) ಪ್ರಕಾರ ಮಾಹಿತಿ ಮುಂಚಿತವಾಗಿ ಪ್ರಕಟಿಸಬೇಕು. ಮಾಹಿತಿ ನೀಡದಿದ್ದರೆ ಪ್ರಥಮ ಹಾಗೂ ಎರಡನೇ ಮೇಲ್ಮನವಿ ಪ್ರಾಧಿಕಾರಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ”.
ಮಾಹಿತಿ ಹಕ್ಕು ಆಯೋಗದ ಆಯುಕ್ತರಾದ ರಾಜಶೇಖರ್ ಮಾತನಾಡಿ “ಮಾಹಿತಿ ಹಕ್ಕು ಕಾಯಿದೆ ಎರಡನೇ ಸ್ವಾತಂತ್ರ್ಯ ಹಕ್ಕು ಎಂದರೆ ತಪ್ಪಾಗಲಾರದು. ಕಾಯಿದೆ ಬರುವುದಕ್ಕೂ ಮುಂಚೆ ಜನಸಾಮಾನ್ಯರಿಗೆ ಅಫಿಸಿಯಲ್ ಸೀಕ್ರೆಸಿ ಕಾಯಿದೆ ಅನ್ವಯ ಕೇಳಿದ ಮಾಹಿತಿಯನ್ನು ನೀಡಲಾಗುತ್ತಿರಲಿಲ್ಲ. ಮಾಹಿತಿ ಹಕ್ಕು ಕಾಯಿದೆ ಬಂದಾಗಿನಿಂದ ಆಡಳಿತದಲ್ಲಿ ಪಾರದರ್ಶಕತೆ ಹೆಚ್ಚಳ ಮತ್ತು ಆಡಳಿತದಲ್ಲಿ ಶಿಸ್ತು ಮೂಡಿದೆ. ಆದರೆ ಕೆಲವರು ಮಾಹಿತಿ ಕೇಳುವುದನ್ನು ಕಸುಬನ್ನಾಗಿ ಮಾಡಿಕೊಂಡಿದ್ದಾರೆ. ಮಾಹಿತಿ ಹಕ್ಕು ಕಾಯಿದೆಯಡಿ ಪಡೆಯುವ ದಾಖಲೆಗಳು ಸಾರ್ವಜನಿಕ ಹಿತಾಸಕ್ತಿ ಮತ್ತು ಸ್ವ ಹಿತಾಸಕ್ತಿಯಿಂದ ಕೂಡಿರಬೇಕು, ಆದರೆ ಅವ್ಯವಹಾರಕ್ಕೆ ಅವಕಾಶ ಮಾಡಿಕೊಡಬಾರದು. ದುರುದ್ದೇಶದಿಂದ ಅರ್ಜಿ ಸಲ್ಲಿಸುವವರ ವಿರುದ್ದ ಕ್ರಮ ತೆಗೆದುಕೊಳ್ಳಲು ಆಯೋಗ ಮುಂದಾಗಿದೆ. ಈಗಾಗಲೇ 26 ಅರ್ಜಿದಾರರ ಮೇಲೆ ನಿರ್ಬಂಧ ಹಾಕಲಾಗಿದೆ” ಎಂದು ಮಾಹಿತಿ ನೀಡಿದರು.
“ಮಾಹಿತಿ ನೀಡದ ಅಧಿಕಾರಿಗಳಿಗೆ ರೂ.25000 ರವರೆಗೆ ದಂಡ ಹಾಗೂ ಅರ್ಜಿದಾರರಿಗೆ ರೂ.1 ಲಕ್ಷವರೆಗೆ ಪರಿಹಾರ ನೀಡುವ ಅಧಿಕಾರ ಆಯೋಗಕ್ಕಿದೆ. RTI ಪ್ರಗತಿಯನ್ನು ಕೆಡಿಪಿ ಸಭೆಯಲ್ಲಿ ಪರಿಶೀಲಿಸಲು ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ. ಈ ಎಲ್ಲ ಕ್ರಮಗಳನ್ನು RTI ದುರ್ಬಳಕೆ ತಡೆ ಹಾಗೂ ಕಾರ್ಯಕ್ಷಮ ಆಡಳಿತದ ಉದ್ದೇಶದಿಂದ ಕೈಗೊಳ್ಳಲಾಗಿದೆ” ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಮಾತನಾಡಿ “ಜಿಲ್ಲೆಯಲ್ಲಿ ವಿವಿಧ ಇಲಾಖೆಗಳಿಗೆ ಸಲ್ಲಿಕೆಯಾಗುವ ಮಾಹಿತಿ ಹಕ್ಕು ಕಾಯಿದೆ ಅರ್ಜಿಗಳ ಸಂಖ್ಯೆಯನ್ನು ಕಡಿಮೆ ಮಾಡುವುದು ನಮ್ಮ ಗುರಿಯಾಗಿದ್ದು, ಎರಡನೇ ಮೇಲ್ಮನವಿ ಅರ್ಜಿಗಳ ಸಂಖ್ಯೆಯನ್ನು ಗಣನೀಯವಾಗಿ ತಗ್ಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ” ಎಂದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ನಗರಸಭೆಯಿಂದ ನೈರ್ಮಲ್ಯ ಕಾಪಾಡಲು ಹೋಟೆಲ್ ಗಳಲ್ಲಿ ಆಹಾರ ತಯಾರಿಕೆ ಪರಿಶೀಲನೆ, ಎಚ್ಚರಿಕೆ
“ದಾವಣಗೆರೆ ಜಿಲ್ಲೆಗೆ ಸಂಬಂಧಿಸಿದ ಎರಡನೇ ಮೇಲ್ಮನವಿ ಅರ್ಜಿಗಳು ಕಂದಾಯ ಇಲಾಖೆ 161, ಪಂಚಾಯತ್ ರಾಜ್ ಇಲಾಖೆ 90, ನಗರಾಭಿವೃದ್ದಿ ಇಲಾಖೆ 75, ಜಲಸಂಪನ್ಮೂಲ 53, ಲೋಕೋಪಯೋಗಿ ಇಲಾಖೆ 35, ಶಿಕ್ಷಣ ಇಲಾಖೆ 31, ಸಮಾಜ ಕಲ್ಯಾಣ 30, ಗೃಹ ಇಲಾಖೆ 13, ಅಲ್ಪಸಂಖ್ಯಾತರ ಇಲಾಖೆ 11, ಅರಣ್ಯ ಇಲಾಖೆ 11, ಆರೋಗ್ಯ 10, ಇಂಧನ 9, ಸಹಕಾರ 8, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ 7, ಕೈಗಾರಿಕೆ ಮತ್ತು ವಾಣಿಜ್ಯ 4, ಕೃಷಿ 2, ಸಾರಿಗೆ 2, ವಸತಿ 2 ಸೇರಿ ಇತರೆ 5 ಅರ್ಜಿಗಳು ಬಾಕಿ ಇವೆ” ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಾಧವ ವಿಠ್ಠಲರಾವ್ ಉಪಸ್ಥಿತರಿದ್ದರು.