ಮಹಿಳೆಯೋರ್ವರು ತನ್ನ 60 ವರ್ಷದ ಮಾವನನ್ನು ಕೊಂದು ಅರಿಶಿನ ಹಚ್ಚಿ ಗಾಯಗಳನ್ನು ಮುಚ್ಚಿಡಲು ಯತ್ನಿಸಿದ ಘಟನೆ ಛತ್ತೀಸ್‌ಗಢದ ಬಲೋದ್ ಜಿಲ್ಲೆಯಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಮನೋಹರ್ ನಿರ್ಮಲ್ಕರ್ ಎಂದು ಗುರುತಿಸಲಾಗಿದೆ.
ಆರೋಪಿ ಮಹಿಳೆ ಗೀತಾ ನಿರ್ಮಲ್ಕರ್ ತನ್ನ ಸ್ನೇಹಿತ ಲೇಖ್ರಾಮ್ ನಿಶಾದ್ ಸಹಾಯದಿಂದ ಈ ಕೊಲೆ ಮಾಡಿದ್ದಾಳೆ ಎಂದು ಹೇಳಲಾಗಿದೆ. ತನ್ನ ಮಾವ ನಿದ್ದೆ ಮಾಡುತ್ತಿದ್ದಾಗ ವಿದ್ಯುತ್ ಶಾಕ್ ನೀಡಿ ಹತ್ಯೆ ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ.
ಇದನ್ನು ಓದಿದ್ದೀರಾ? ಶಿವಮೊಗ್ಗ | ಬೊಮ್ಮನಕಟ್ಟೆಯಲ್ಲಿ ಕುಡಿದ ಅಮಲಿನಲ್ಲಿ ಗಲಾಟೆ : ಕೊಲೆಯಲ್ಲಿ ಅಂತ್ಯ
ಮನೋಹರ್ ಕುಡಿದು ಸೈಕಲ್‌ನಿಂದ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಗೀತಾ ಕುಟುಂಬಸ್ಥರು ಮತ್ತು ಗ್ರಾಮಸ್ಥರಿಗೆ ತಿಳಿಸಿದ್ದಾಳೆ. ಆದರೆ ಅಂತ್ಯಕ್ರಿಯೆ ಸಿದ್ಧತೆ ನಡೆಸುವಾಗ ಗ್ರಾಮಸ್ಥರು ದೇಹದ ಮೇಲೆ ಹಲವು ಗಾಯದ ಗುರುತುಗಳನ್ನು ನೋಡಿ ದೋಂಡಿ ಲೋಹರಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮರಣೋತ್ತರ ಪರೀಕ್ಷೆಯಲ್ಲಿ ವಿದ್ಯುತ್ ಆಘಾತದಿಂದ ಸಾವು ಸಂಭವಿಸಿದೆ ಎಂದು ದೃಢಪಟ್ಟಿದೆ.
ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿರುವ ಪೊಲೀಸ್ ವರಿಷ್ಠಾಧಿಕಾರಿ ಯೋಗೇಶ್ ಪಟೇಲ್, “ಕೊಲೆ ನಡೆದಾಗ ಮನೋಹರ್ ಕುಡಿದು ನಿದ್ರಿಸುತ್ತಿದ್ದರು. ಅಂತ್ಯಕ್ರಿಯೆಗೆ ಸಿದ್ಧತೆ ನಡೆಸುತ್ತಿದ್ದಾಗ ಗ್ರಾಮಸ್ಥರು ದೇಹದ ಮೇಲೆ ಗಾಯಗಳನ್ನು ನೋಡಿ ಕೊಲೆ ಶಂಕೆ ವ್ಯಕ್ತಪಡಿಸಿ ಪೊಲೀಸರಿಗೆ ಮಾಹಿತಿ ನೀಡಿದರು. ಮರಣೋತ್ತರ ಪರೀಕ್ಷೆ ವೇಳೆ ಕೊಲೆ ನಡೆದಿರುವುದು ದೃಢಪಟ್ಟಿದೆ” ಎಂದು ತಿಳಿಸಿದ್ದಾರೆ.
ತನಿಖೆಯ ಸಮಯದಲ್ಲಿ, ಪೊಲೀಸರು ಕುಟುಂಬ ಮತ್ತು ಗ್ರಾಮಸ್ಥರನ್ನು ಪ್ರಶ್ನಿಸಿದ್ದು ಮನೋಹರ್ ಮತ್ತು ಅವರ ಸೊಸೆಯ ನಡುವೆ ಆಗಾಗ್ಗೆ ಜಗಳಗವಾಗುತ್ತಿತ್ತು ಎಂದು ತಿಳಿದುಬಂದಿದೆ. ಇನ್ನು ಸೊಸೆ ತನಗೆ ಮಾವ ಹಿಂಸೆ ನೀಡುತ್ತಿದ್ದರು ಎಂದು ಆರೋಪಿಸಿದ್ದಾಳೆ.
“ಆರೋಪಿಗಳು ಮನೋಹರ್ ಮಲಗಿದ್ದಾಗ ದೇಹದ ವಿವಿಧ ಭಾಗಗಳಿಗೆ ವಿದ್ಯುತ್ ಶಾಕ್ ನೀಡಿ ಕೊಂದಿದ್ದಾರೆ. ಬಳಿಕ ಗಾಯಗಳನ್ನು ಮರೆಮಾಡಲು ಅರಿಶಿನ ಮತ್ತು ರೋಸ್ ವಾಟರ್ ಹಚ್ಚಿದ್ದಾರೆ. ಕುಟುಂಬಸ್ಥರು ಮತ್ತು ಗ್ರಾಮದ ಜನರಿಗೆ ಮನೋಹರ್ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ” ಎಂದು ಘಟನೆಯ ವಿವರ ನೀಡಿದ್ದಾರೆ.
ಇಬ್ಬರೂ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದ್ದು ತನಿಖೆ ಮುಂದುವರೆದಿದೆ.
