ಕಾರವಾರ ನಗರದ ಪಿಕಳೆ ಆಸ್ಪತ್ರೆ ಎದುರು ಪಾರ್ಕಿಂಗ್ ಮಾಡಿದ್ದ ಕಾರಿನ ಮೇಲೆ ಬೃಹತ್ ಗಾತ್ರದ ಮರವೊಂದು ಬಿದ್ದ ಪರಿಣಾಮ ಕಾರಿನಲ್ಲಿದ್ದ ಮಹಿಳೆಯೊಬ್ಬರು ಮೃತಪಟ್ಟ ಘಟನೆ ನಡೆದಿದೆ.
ಮಲ್ಲಾಪುರ ಮೂಲದ ಲಕ್ಷ್ಮೀ ನಾರಾಯಣ ಮಮ್ತೆಕರ ಮೃತ ದುರ್ದೈವಿ. ಮಲ್ಲಾಪುರದಿಂದ ಕಾರವಾರಕ್ಕೆ ತನ್ನ ಸೊಸೆಯನ್ನು ಚಿಕಿತ್ಸೆಗೆ ಕರೆದುಕೊಂಡ ಬಂದಿದ್ದರು. ಸೊಸೆಯನ್ನು ಆಸ್ಪತ್ರೆಗೆ ಕಳುಹಿಸಿ ಕಾರಿನಲ್ಲಿ ಕುಳಿತಿದ್ದರು. ಇದೇ ವೇಳೆ ಭಾರೀ ಗಾತ್ರದ ಮರ ಏಕಾಏಕಿ ಕಾರಿನ ಮೇಲೆ ಬಿದ್ದಿದೆ. ಬಿದ್ದ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದ್ದು ಕಾರಿನಲ್ಲಿ ಕುಳಿತ್ತಿದ್ದ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಭಾನುವಾರ ಸಂತೆಯ ದಿನವಾಗಿದ್ದರಿಂದ ಪಿಕಳೆ ರಸ್ತೆಯಲ್ಲಿ ವಾಹನಗಳ ಓಡಾಟ ಹೆಚ್ಚಾಗಿತ್ತು. ಸುತ್ತಮುತ್ತಲಿನ ಪ್ರದೇಶದಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ತಕ್ಷಣವೇ ಸ್ಥಳಕ್ಕೆ ಪೊಲೀಸರು, ನಗರಸಭೆ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿ, ಜೆಸಿಬಿ ಯಂತ್ರದ ಸಹಾಯದಿಂದ ಮರವನ್ನು ತೆರವುಗೊಳಿಸಿದರು.
ಇದನ್ನೂ ಓದಿ: ಉತ್ತರ ಕನ್ನಡ | ಭಾರೀ ಮಳೆ ಮುನ್ಸೂಚನೆ; ಎಚ್ಚರ ವಹಿಸುವಂತೆ ಡಿಸಿ ಸೂಚನೆ
ಭಾರೀ ಗಾತ್ರದ ಮರ ಬಿದ್ದ ರಭಸಕ್ಕೆ ಅಕ್ಕಪಕ್ಕದಲ್ಲಿದ್ದ ವಿದ್ಯುತ್ ಕಂಬಗಳು ಮುರಿದುಬಿದ್ದಿದ್ದು, ವಿದ್ಯುತ್ ವ್ಯತ್ಯಯ ಉಂಟಾಗಿದೆ. ಇತರ ವಾಹನಗಳು ಅಥವಾ ಪಾದಚಾರಿಗಳಿಗೆ ಯಾವುದೇ ಹೆಚ್ಚಿನ ಹಾನಿಯಾಗಿಲ್ಲ.