ಕೊಪ್ಪಳ ತಾಲೂಕಿನ ಮುನಿರಾಬಾದ್ ಡ್ಯಾಂ ಗ್ರಾಮದಲ್ಲಿ ಕಳೆದ ಎರಡು ದಿನಗಳಿಂದ ಮಳೆಯ ಅಬ್ಬರ ಹೆಚ್ಚಾಗಿದ್ದು, ಈ ಪ್ರದೇಶ ಸಂಪೂರ್ಣ ಹಸಿರಿನಿಂದ ಆವೃತವಾಗಿದೆ. ಆದರೆ ಈ ಮಳೆ ಕೆಲವು ಅಪಾಯಗಳಿಗೂ ಕಾರಣವಾಗುತ್ತಿದೆ. ಹಳೆಯ ಮತ್ತು ಒಣಗಿದ ಮರಗಳು ರಸ್ತೆಗಳ ಪಕ್ಕದಲ್ಲಿ ನಿಂತು ಅಪಾಯವನ್ನು ಆಹ್ವಾನಿಸುತ್ತಿವೆ.
ಜುಲೈ 19ರಂದು ರಾತ್ರಿ 11 ಗಂಟೆ ಸುಮಾರಿಗೆ, ಪಿಳ್ಳೆ ಹೋಟೆಲ್ ಸರ್ಕಲ್ ಹತ್ತಿರ ಬಸ್ ನಿಲ್ದಾಣದ ಎದುರುಗಡೆ ನಿಂತಿದ್ದ ಒಂದು ಒಣಗಿದ ದೊಡ್ಡ ಮರ ಅಲ್ಪಕಾಲದಲ್ಲಿ ಬಿದ್ದು ಬಿಟ್ಟಿದೆ. ಈ ವೇಳೆ ಕೇವಲ ಕ್ಷಣಗಳ ವ್ಯತ್ಯಾಸದಲ್ಲಿ ಅಲ್ಲಿ ದ್ವಿಚಕ್ರ ವಾಹನ ಸವಾರನೊಬ್ಬ ಸಾಗುತ್ತಿದ್ದ. ಆದರೆ ಅದೃಷ್ಟವಶಾತ್ ಮರ ಬೀಳುವ ಮೊದಲು ಆತ ಅಲ್ಲಿಂದ ದೂರ ಸರಿದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಘಟನೆಯ ಮಾಹಿತಿ ಸಿಕ್ಕ ಕೂಡಲೆ ಮುನಿರಾಬಾದ್ ಡ್ಯಾಂ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಯೂಬ್ ಖಾನ್ ಅವರು ಸ್ಥಳಕ್ಕೆ ತುರ್ತು ಧಾವಿಸಿ, ಗ್ರಾಮಸ್ಥರ ಸಹಾಯದಿಂದ ಬಿದ್ದ ಮರವನ್ನು ತೆರವುಗೊಳಿಸಿ ರಸ್ತೆಯನ್ನು ಸ್ವಚ್ಛಗೊಳಿಸುವ ವ್ಯವಸ್ಥೆ ಮಾಡಿದರು. ತಡರಾತ್ರಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗದಂತೆ ಮುಂಜಾಗ್ರತೆಯ ಕ್ರಮ ಕೈಗೊಳ್ಳಲಾಯಿತು.
ಈ ಸಂದರ್ಭ ಮಾತನಾಡಿದ ಅಧ್ಯಕ್ಷರು, “ಇಂತಹ ಅಪಾಯಕಾರಿಯ ಮರಗಳನ್ನು ಕೂಡಲೇ ಗುರುತಿಸಿ ರಸ್ತೆಯ ಪಕ್ಕದಿಂದ ತೆರವುಗೊಳಿಸುವುದು ಅತ್ಯಂತ ಅಗತ್ಯ. ಕೆಲವು ತಿಂಗಳ ಹಿಂದೆ ಇಂತಹ ಘಟನೆ ಒಂದರಲ್ಲಿ ವ್ಯಕ್ತಿಯೊಬ್ಬರ ಮೇಲೆ ಮರ ಬಿದ್ದು ಆಸ್ಪತ್ರೆಗೆ ದಾಖಲಾಗಿ ಸುಮಾರು 4-5 ಲಕ್ಷ ರೂ. ವೆಚ್ಚವಾಗಿ, ಆ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಒಳಗಾಯಿತು. ಬಡ ಜನರ ಪರಿಸ್ಥಿತಿಯನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು. ಸಾರ್ವಜನಿಕರ ಸುರಕ್ಷತೆ ನಮ್ಮ ಮೊತ್ತ ಮೊದಲ ಆದ್ಯತೆ ಆಗಬೇಕು,” ಎಂದು ಬೇಸರ ವ್ಯಕ್ತಪಡಿಸಿದರು.
ಗ್ರಾಮಸ್ಥರು ಗ್ರಾಮ ಪಂಚಾಯಿತಿ ತ್ವರಿತ ಪ್ರತಿಕ್ರಿಯೆಗೆ ಮೆಚ್ಚುಗೆ ವ್ಯಕ್ತಪಡಿಸಿ, ಮುಂದಿನ ದಿನಗಳಲ್ಲಿ ಇಂತಹ ದುರ್ಘಟನೆಗಳು ಮರುಕಳಿಸದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
