ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ನಾಗನಕಲ್ ಬಳಿ ಜುಲೈ 31ರಂದು ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಮೃತಪಟ್ಟಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೊಬ್ಬನನ್ನು ಕಾರಟಗಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಕಾರಟಗಿ ತಾಲೂಕಿನ ಗುಡೂರು ಗ್ರಾಮದ ಗೌಡಪ್ಪ ಅಲಿಯಾಸ್ ಗರುಡಪ್ಪ (22) ಎಂದು ಗುರುತಿಸಲಾಗಿದೆ ಎಂದು ಎಸ್‌ಪಿ ಯಶೋಧಾ ವಂಟಗೋಡಿ ತಿಳಿಸಿದ್ದಾರೆ.
ಕೊಪ್ಪಳದ ಎಸ್‌ಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, “ಜುಲೈ 31ರಂದು ರಾತ್ರಿ ಸುಮಾರು 10-40 ರ ವೇಳೆಗೆ ಕಾರಟಗಿ ತಾಲೂಕಿನ ನಾಗನಕಲ್ ಬಳಿ ಕಾರಟಗಿಯ ನಜೀರಸಾಬ ಕಾಲೋನಿ ನಿವಾಸಿ ರಾಘವೇಂದ್ರರೆಡ್ಡಿ (36) ಎಂಬಾತ ಅನುಮಾನಾಸ್ಪದವಾಗಿ ಮೃತಪಟ್ಟಿದ್ದ. ಈ ಕುರಿತಂತೆ ರಾಘವೇಂದ್ರರೆಡ್ಡಿ ತಾಯಿ ಕಾರಟಗಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅಲ್ಲದೆ ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿದ್ದರು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಲಂಚ ಸ್ವೀಕಾರ ಆರೋಪ; ವಸತಿಶಾಲೆ ಪ್ರಾಂಶುಪಾಲ ಲೋಕಾಯುಕ್ತ ಬಲೆಗೆ
“ಪ್ರಕರಣ ಕುರಿತಂತೆ ತನಿಖೆ ನಡೆಸಿದ ಕಾರಟಗಿ ಪೊಲೀಸರು ಗುಡೂರು ಗ್ರಾಮದ ಗೌಡಪ್ಪ ಅಲಿಯಾಸ್ ಗರುಡಪ್ಪ ಎಂಬ ಯುವಕನನ್ನು ಬಂಧಿಸಿದ್ದಾರೆ. ಮೃತ ರಾಘವೇಂದ್ರರೆಡ್ಡಿ ಗೌಡಪ್ಪನ ತಾಯಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ. ಇದೇ ಕಾರಣಕ್ಕೆ ರಾತ್ರಿ ವೇಳೆ ರಾಘವೇಂದ್ರರೆಡ್ಡಿಯನ್ನು ನಾಗನಕಲ್ ಬಳಿ ಕಟ್ಟಿಗೆಯಿಂದ ಹೊಡೆದು ಗೌಡಪ್ಪ ಕೊಲೆ ಮಾಡಿರುವುದಾಗಿ ವಿಚಾರಣೆ ವೇಳೆ ಬಾಯಿ ಬಿಟ್ಡಿದ್ದಾನೆ” ಎಂದರು.
“ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೊಬ್ಬ ಆರೋಪಿ ಇದ್ದು, ಆತನ ಪತ್ತೆಗೆ ಬಲೆ ಬೀಸಲಾಗಿದೆ” ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಹೇಳಿದ್ದಾರೆ.