ಸಾಂವಿಧಾನಿಕ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿರುವ ಯುಎಪಿಎ ಥರದ ಕಾನೂನುಗಳನ್ನೇ ರದ್ದು ಮಾಡಬೇಕೆಂಬ ಚರ್ಚೆಗಳು ನಡೆಯಬೇಕಾದ ಹೊತ್ತಿನಲ್ಲಿ ಮಹಾರಾಷ್ಟ್ರ ಸರ್ಕಾರ ಮತ್ತಷ್ಟು ಕರಾಳ ಕಾನೂನು ತರಲು ಹೊರಟಿದೆ.
ಮಹಾರಾಷ್ಟ್ರ ರಾಜ್ಯ ಬಿಜೆಪಿ ಸರ್ಕಾರ ಈಗ ಜನರ ದನಿಯನ್ನೇ ಸಂಪೂರ್ಣ ಹತ್ತಿಕ್ಕುವಂತಹ ವಿಷಕಾರಿ ಕಾಯ್ದೆಯನ್ನು ಜಾರಿಗೆ ತರಲು ಹೊರಟಿದೆ. ಸರ್ಕಾರದ ವಿರುದ್ಧ ಪ್ರತಿಭಟಿಸುವವರಿಗೆ ‘ಅರ್ಬನ್ ನಕ್ಸಲ್’ ಎಂಬ ಹಣೆಪಟ್ಟಿ ಕಟ್ಟಿ ವಾರೆಂಟ್ ಇಲ್ಲದೆ ಬಂಧಿಸಬಹುದಾದ ಹಾಗೂ ಜಾಮೀನುರಹಿತವಾಗಿ ಜೈಲಿಗೆ ತಳ್ಳಲು ಅವಕಾಶ ನೀಡುವ ಕಾಯ್ದೆ ಇದಾಗಲಿದ್ದು, ಈಗಾಗಲೇ ಉಭಯ ಸದನಗಳಲ್ಲೂ ಅಂಗೀಕಾರವಾಗಿದೆ.
‘ಮಹಾರಾಷ್ಟ್ರ ವಿಶೇಷ ಸಾರ್ವಜನಿಕ ಭದ್ರತಾ ಮಸೂದೆ (ಎಂಎಸ್ಪಿಎಸ್)- 2024’ ಇನ್ನಿಲ್ಲದಷ್ಟು ಸರ್ವಾಧಿಕಾರವನ್ನು ಸರ್ಕಾರಕ್ಕೆ ಕೊಟ್ಟಿದ್ದು, ಮುಂದೆ ನಡೆಯುವ ಸರ್ಕಾರ ವಿರೋಧಿ ಪ್ರತಿಭಟನೆಗಳನ್ನು ಸುಲಭವಾಗಿ ಹತ್ತಿಕ್ಕಲು ಅವಕಾಶ ನೀಡುತ್ತದೆ. ಈಗಾಗಲೇ ಜಾರಿಯಲ್ಲಿರುವ ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆ (ಯುಎಪಿಎ) ಮತ್ತು ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ(ಎಂಸಿಒಸಿಸಿ)ಗಿಂತ ಹೆಚ್ಚಿನ ದಮನಕಾರಿ ಅಂಶಗಳನ್ನು ಎಂಎಸ್ಪಿಎಸ್ ಹೊಂದಿದ್ದು, ಬಿಜೆಪಿಯ ಜನವಿರೋಧಿ ನಡೆಗೆ ಕನ್ನಡಿ ಹಿಡಿದಿದೆ.
ಯುಎಪಿಎ ಅಡಿಯಲ್ಲಿ, ಕೇಂದ್ರ ಸರಕಾರ ಯಾವುದೇ ಸಂಘಟನೆಯನ್ನು ಕಾನೂನುಬಾಹಿರ ಅಥವಾ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಬಹುದು. ಆದರೆ ಯುಎಪಿಎ ಅನ್ವಯ, ಒಂದು ಸಂಘಟನೆಯನ್ನು ಕಾನೂನುಬಾಹಿರ ಎಂದು ಘೋಷಿಸಿದಾಗ, ಅದರ ಮೇಲೆ ಶಾಶ್ವತ ನಿಷೇಧ ಹೇರಲು ವಿಶೇಷ ನ್ಯಾಯಮಂಡಳಿಯನ್ನು ರಚಿಸಲಾಗುತ್ತದೆ. ಇದು ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿರುತ್ತದೆ. ಈ ನ್ಯಾಯಮಂಡಳಿ ನಿಷೇಧ ಸರಿಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ತನಿಖೆ ಮಾಡಿ, ನಂತರ ಅಂತಿಮ ನಿರ್ಧಾರ ಪ್ರಕಟಿಸುತ್ತದೆ. ಅಂದರೆ, ಸರಕಾರಕ್ಕೆ ಇದರ ಮೇಲೆ ಸಂಪೂರ್ಣ ನಿಯಂತ್ರಣ ಇರುವುದಿಲ್ಲ. ಸರಕಾರ ಯಾವುದೇ ಸಂಘಟನೆಯನ್ನು ದೇಶವಿರೋಧಿ ಎಂದು ತಾನೇ ಘೋಷಿಸಲು ಸಾಧ್ಯವಿಲ್ಲ. ವಿವಾದಿತ ಸಂಘಟನೆಯ ಮೇಲೆ ಯಾವುದೇ ಪ್ರಕರಣ ಅಥವಾ ಭಯೋತ್ಪಾದಕ ಚಟುವಟಿಕೆಗಳಿಗೆ ಸಂಬಂಧಿಸಿದ ಯಾವುದೇ ಪುರಾವೆಗಳಿಲ್ಲದಿದ್ದರೆ, ಅದನ್ನು ಸಂಘಟನೆ ಎಂಬ ಕಾರಣಕ್ಕಾಗಿ ಮಾತ್ರವೇ ಶಂಕಿತ ಎಂದು ಘೋಷಿಸುವುದು ಕಾನೂನಿನ ಮೂಲ ತತ್ವಗಳಿಗೆ ವಿರುದ್ಧ. ಆದರೆ ಮಹಾರಾಷ್ಟ್ರ ಸರಕಾರದ ಹೊಸ ಕಾನೂನು ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳುವ ಅವಕಾಶ ಹೊಂದಿದೆ. ಹಾಗಾಗಿ, ಇದು ಯುಎಪಿಎ ಮತ್ತು ಎಂಸಿಒಸಿಎಗಿಂತ ಭಿನ್ನವಾಗಿದೆ ಎನ್ನುತ್ತಾರೆ ಕಾನೂನು ವಿಶ್ಲೇಷಕರು.
”ನಗರ ಮಾವೋವಾದಿಗಳು ಯುವಜನರನ್ನು ಪ್ರಭಾವಿಸಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕ್ಷೋಭೆಯನ್ನು ತರುತ್ತಿದ್ದಾರೆ. ನಗರ ಮಾವೋವಾದಿ ಸಂಘಟನೆಗಳ ನಿಯಂತ್ರಣಕ್ಕಾಗಿ ಈ ಎಂಎಸ್ಪಿಎಸ್ ಜಾರಿಗೆ ತರಲಾಗುತ್ತಿದೆ” ಎಂಬುದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸರ ಸಮರ್ಥನೆ. ಅರ್ಬನ್ ನಕ್ಸಲ್ ಎಂಬ ಪಿತೂರಿ ಥಿಯರಿಯ ಮೂಲಕ ಜನಪರ ಸಂಘಟನೆಗಳ ದನಿಯನ್ನು ಇಲ್ಲವಾಗಿಸುವ ಷಡ್ಯಂತ್ರ ಇದಲ್ಲವೇ?
ಇದನ್ನೂ ಓದಿರಿ: ಈ ದಿನ ಸಂಪಾದಕೀಯ | ‘ಮನೆ-ಮನೆಗೆ ಪೊಲೀಸ್’ ಕಾರ್ಯಕ್ರಮ: ಪೊಲೀಸ್ ಇಲಾಖೆಯ ಮಾದರಿ ಹೆಜ್ಜೆ
ಭೀಮಾ ಕೋರೆಂಗಾವ್ ಪ್ರಕರಣದಲ್ಲಿ ಹೋರಾಟಗಾರರನ್ನು ಸಿಲುಕಿಸಲಾಯಿತು. ಖ್ಯಾತ ರಾಜಕೀಯ ವಿಶ್ಲೇಷಕ ಆನಂದ್ ತೇಲ್ತುಂಬ್ಡೆ, ಹೋರಾಟಗಾರರಾದ ವರವರರಾವ್, ಸುಧಾ ಭಾರದ್ವಾಜ್, ಸ್ಟ್ಯಾನ್ ಸ್ವಾಮಿ ಸೇರಿದಂತೆ ಹದಿನಾರು ಮಂದಿಯನ್ನು ಜೈಲಿಗೆ ದೂಡಲಾಯಿತು. ಸ್ಟ್ಯಾನ್ ಸ್ವಾಮಿಯವರು ಪಾರ್ಕಿಸನ್ ಕಾಯಿಲೆಯಿಂದ ನರಳುತ್ತಿದ್ದರೂ ಜಾಮೀನು ನೀಡದೆ ಶೋಷಿಸಲಾಯಿತು. ಕೊನೆಗೆ ಜೈಲಿನಲ್ಲೇ ಅವರು ಮೃತರಾದರು. ಈ ಹೋರಾಟಗಾರರ ಮೇಲೆಲ್ಲ ಬಲಪಂಥೀಯ ಪಡೆ ‘ಅರ್ಬನ್ ನಕ್ಸಲರು’ ಎಂಬ ಹಣೆಪಟ್ಟಿ ಕಟ್ಟಿತು. ಅಷ್ಟೇ ಅಲ್ಲ, ಐತಿಹಾಸಿಕ ರೈತ ಚಳವಳಿಯ ಸಂದರ್ಭದಲ್ಲೂ ಬಿಜೆಪಿ ಬೆಂಬಲಿತ ಟ್ರೋಲ್ ಪಡೆಗಳು ಹೋರಾಟಗಾರರನ್ನು ‘ನಗರ ನಕ್ಸಲರು’ ಎಂದು ಮೂದಲಿಸಿದರು. ಬಿಜೆಪಿ ಸರ್ಕಾರದ ವಿರುದ್ಧ ದನಿ ಎತ್ತುವ ಯಾರನ್ನೇ ಆಗಲೀ ‘ಅರ್ಬನ್ ನಕ್ಸಲ್’ ಎಂದು ಹೀಗಳೆಯುವುದು ಇತ್ತೀಚಿನ ವರ್ಷಗಳಲ್ಲಿ ವ್ಯಾಪಕವಾಗಿ ಹೆಚ್ಚುತ್ತದೆ. ಮಹಾರಾಷ್ಟ್ರ ಸರ್ಕಾರದ ಉದ್ದೇಶ ಏನೆಂಬುದು ಇಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ.
ವಿಧಾನಸಭೆಯಲ್ಲಿ ಮಸೂದೆಯ ಸಂಬಂಧ ಅಷ್ಟೇನೂ ಚರ್ಚೆಯಾಗದಿದ್ದರೂ ವಿಧಾನ ಪರಿಷತ್ನಲ್ಲಿ ವಿಪಕ್ಷಗಳು ಭಾರೀ ವಾಗ್ದಾಳಿ ನಡೆಸಿದವು. ಜೊತೆಗೆ ರಾಜ್ಯಪಾಲರಿಗೆ ಎಂಟು ಪುಟಗಳ ಜ್ಞಾಪಕ ಪತ್ರವನ್ನು ಸಲ್ಲಿಸಿ, ಒಪ್ಪಿಗೆಯನ್ನು ತಡೆಹಿಡಿಯುವಂತೆ ಒತ್ತಾಯಿಸಿದವು. ಮತ್ತೊಂದೆಡೆ ಸಂಘಟನೆಗಳು ಬೀದಿಗಿಳಿಯಲು ಸಜ್ಜಾದವು. ಕಾನೂನು ಹೋರಾಟ ಮಾಡುವುದಾಗಿಯೂ ವಂಚಿತ್ ಬಹುಜನ್ ಅಘಾಡಿ ನಾಯಕ ಪ್ರಕಾಶ್ ಅಂಬೇಡ್ಕರ್ ಘೋಷಿಸಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಮಹಾರಾಷ್ಟ್ರ ಇನ್ನಿಲ್ಲದಷ್ಟು ದ್ವೇಷ ಭಾಷಣಗಳಿಗೆ ಸಾಕ್ಷಿಯಾಗಿದೆ. ನಿತೇಶ್ ರಾಣೆಯಂತಹ ಕ್ಯಾಬಿನೇಟ್ ದರ್ಜೆಯ ಸಚಿವರೇ ದ್ವೇಷ ಭಾಷಣಗಳ ಮುಂಚೂಣಿಯಲ್ಲಿದ್ದಾರೆ. ಈಗಾಗಲೇ ದಾಖಲಾಗಿರುವ ಶೇ.90ರಷ್ಟು ದ್ವೇಷ ಭಾಷಣ ಪ್ರಕರಣಗಳು ಬಲಪಂಥೀಯ ನಾಯಕರ ಮೇಲಿವೆ ಎಂಬುದನ್ನು ಗಮನಿಸಬೇಕು. ಇಂತಹ ರಾಜ್ಯದ ಮುಖ್ಯಮಂತ್ರಿ ಶಾಂತಿ ಮತ್ತು ಸುವ್ಯವಸ್ಥೆಯ ನೆಪದಲ್ಲಿ ಎಡಪಂಥೀಯ ಸಂಘಟನೆಗಳನ್ನು ಮುಗಿಸಲು ಹೊರಟಿರುವುದು ಅವರ ಸಾಂವಿಧಾನಿಕ ವಿರೋಧಿ ನಡೆಗಳನ್ನು ಸೂಚಿಸುತ್ತವೆ. ಯಾವುದಕ್ಕೆ ಕ್ರಮ ತೆಗೆದುಕೊಳ್ಳಬೇಕೋ ಅದರ ವಿರುದ್ಧ ಕಾನೂನು ಮಾಡದೆ, ಪ್ರಜಾತಂತ್ರದ ಸೌಂದರ್ಯವನ್ನು ಎತ್ತಿಹಿಡಿಯುವ ಶಾಂತಿಯುತ ಹೋರಾಟಗಳನ್ನು ‘ಕಾನೂನುಬಾಹಿರ ಕೃತ್ಯ’ ಎಂದು ಬಿಂಬಿಸಲು ಹೊರಟಿದ್ದಾರೆ ಫಡ್ನವೀಸ್.
ಮಹಾರಾಷ್ಟ್ರದಲ್ಲಿ ಆಡಳಿತಾರೂಢ ಸರ್ಕಾರ ಶಾಸಕರ ಗೂಂಡಾಗಿರಿಗಳು ಮಿತಿಮೀರಿವೆ. ಭ್ರಷ್ಟಾಚಾರದ ಘಾಟು ಹೆಚ್ಚಿದೆ. ಭಾಷಾ ಚಳವಳಿಗಳು ತೀವ್ರವಾಗಿದೆ. ಬಿಜೆಪಿ ಪ್ರಸ್ತಾಪಿಸಿರುವ ಅಭಿವೃದ್ಧಿ ಮಾದರಿಗಳು ಕಾರ್ಪೊರೇಟ್ ಪರವಾಗಿಯೂ ಜನಸಾಮಾನ್ಯರ ಬದುಕಿಗೆ ವಿರುದ್ಧವಾಗಿಯೂ ಇವೆ. ಅದು ಧಾರಾವಿಯ ಪುನರಾಭಿವೃದ್ಧಿ ಯೋಜನೆಯಾಗಿರಬಹುದು ಅಥವಾ ವಿದರ್ಭದಲ್ಲಿ ಖನಿಜ ಸಂಪತ್ತು ಲೂಟಿಗೆ ಮಾಡಿರುವ ಕಾರ್ಯಯೋಜನೆಯಾಗಿರಬಹುದು- ಇವೆಲ್ಲವನ್ನೂ ನೋಡಿಕೊಂಡು ಜನರು ಮೌನವಾಗಿರುವುದಿಲ್ಲ. ಪ್ರತಿಭಟನೆಗಳು ಭುಗಿಲೇಳದೆ ಇರುವುದಿಲ್ಲ. ಅಂತಹ ಸಂದರ್ಭದಲ್ಲಿ ಜನರ ದನಿಯನ್ನು ಹತ್ತಿಕ್ಕಲು ಇಂತಹ ಕಾಯ್ದೆಗಳನ್ನು ದುರ್ಬಳಕೆ ಮಾಡಿಕೊಳ್ಳಬಹುದು. ಸಾಂವಿಧಾನಿಕ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿರುವ ಯುಎಪಿಎ ಥರದ ಕಾನೂನುಗಳನ್ನೇ ರದ್ದು ಮಾಡಬೇಕೆಂಬ ಚರ್ಚೆಗಳು ನಡೆಯಬೇಕಾದ ಹೊತ್ತಿನಲ್ಲಿ ಮಹಾರಾಷ್ಟ್ರ ಸರ್ಕಾರ ಮತ್ತಷ್ಟು ಕರಾಳ ಕಾನೂನು ತರಲು ಹೊರಟಿದೆ.
ಇದನ್ನೂ ಓದಿರಿ: ಈ ದಿನ ಸಂಪಾದಕೀಯ | ತುಳಿದಷ್ಟು ಪುಟಿದೇಳುವ ರಾಹುಲ್ ಎಂಬ ಜನನಾಯಕ
ಇತ್ತೀಚೆಗಷ್ಟೇ ತುರ್ತುಪರಿಸ್ಥಿತಿಗೆ 50 ವರ್ಷ ತುಂಬಿತು. ಇಂದಿರಾ ಗಾಂಧಿಯವರು ಅಂದು ನಡೆಸಿದ ಆಡಳಿತವನ್ನು ಕಟುಪದಗಳಿಂದ ಬಿಜೆಪಿಯವರು ಟೀಕಿಸಿದರು. ಆದರೆ ತುರ್ತುಪರಿಸ್ಥಿತಿ ಕಾಲದಲ್ಲೂ ಇರಲಾಗದಷ್ಟು ಕರಾಳ ಅನುಭವ ತರುವ ಕಾಯ್ದೆಯನ್ನು ಮಹಾರಾಷ್ಟ್ರ ಸರ್ಕಾರ ತರುತ್ತಿದೆ. ಇದು ಬಿಜೆಪಿ ಅಧಿಕಾರದಲ್ಲಿರುವ ಇತರೆ ರಾಜ್ಯಗಳಲ್ಲೂ ಪುನರಾವರ್ತನೆಯಾಗುವ ಸಾಧ್ಯತೆ ಇದೆ. ಇವರ ಬೂಟಾಟಿಕೆಗೆ ಮಿತಿ ಇಲ್ಲವೆ ಎಂದು ನಾಗರಿಕ ಸಮಾಜ ಪ್ರಶ್ನಿಸಲೇಬೇಕಾಗಿದೆ.
