ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮಳಗಲಿ ಗ್ರಾಮದಲ್ಲಿ ಭಾನುವಾರ ಕೃತಕ ಕೃಷಿ ಹೊಂಡದಲ್ಲಿ ನೀರು ತರಲು ಹೋಗಿ ತಂದೆ ಮತ್ತು ಮಗ ಇಬ್ಬರೂ ಮುಳುಗಿ ಸಾವಿಗೀಡಾದ ದುರಂತ ಸಂಭವಿಸಿದೆ.
ಮೃತರಾದವರು ಬಸವರಾಜ ನೀಲಪ್ಪ ಕೆಂಗೇರಿ (40) ಮತ್ತು ಅವರ ಪುತ್ರ ಧರೆಪ್ಪ (14) ಎಂದು ಗುರುತಿಸಲಾಗಿದೆ. ಇವರ ಜೊತೆಗೆ ಇದ್ದ ಭಾಗಪ್ಪ ಸಣ್ಣಕ್ಕಿ (16) ಎಂಬವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮೂವರು ಹುರಳಿ ಬೆಲೆಗೆ ಔಷಧಿ ಸಿಂಪಡಿಸುತ್ತಿದ್ದರು. ಈ ಸಂದರ್ಭದಲ್ಲಿ ನೀರು ತರಲು ಹೊಂಡಕ್ಕೆ ಇಳಿದ ಬಸವರಾಜ ಅವರ ಕಾಲು ಜಾರಿ ಮುಳುಗಿದ್ದಾರೆ. ಅವರನ್ನು ಕಾಪಾಡಲು ಧರೆಪ್ಪ ಮತ್ತು ಭಾಗಪ್ಪ ಹೊಂಡಕ್ಕೆ ಹಾರಿದ್ರು. ದುರಂತವೆಂದರೆ, ಧರೆಪ್ಪನೂ ಸಹಿತ ಹೊಂಡದ ನೀರಿನಲ್ಲಿ ಕೊಚ್ಚಿ ಹೋದ. ಭಾಗಪ್ಪನನ್ನು ಸ್ಥಳೀಯರು ರಕ್ಷಿಸಿ ಬೈಲಹೊಂಗಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಬಗ್ಗೆ ಮುರಗೋಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಇನ್‌ಸ್ಪೆಕ್ಟರ್ ಐ.ಎಂ. ಮಠಪತಿ ಮಾಹಿತಿ ನೀಡಿದರು.