ಸಿದ್ದು-ಡಿಕೆ ಗುದ್ದಾಟವೆಷ್ಟು, ಸುದ್ದಿಯೆಷ್ಟು, ಇತಿಹಾಸದಿಂದ ಕಲಿಯಬೇಕಾದ ಪಾಠವೇನು?

Date:

Advertisements
ಕಾಂಗ್ರೆಸ್‌ ಹೈಕಮಾಂಡ್‌ ಮೌನವೇ ಗದ್ದುಗೆ ಗುದ್ದಾಟ ಪ್ರಹಸನಕ್ಕೆ ಅಸ್ತ್ರವಾಗಿದೆ. ಇದನ್ನೇ ಪ್ರತಿಪಕ್ಷಗಳು ಮತ್ತು ಮಾಧ್ಯಮಗಳು ಇನ್ನೂ ದೊಡ್ಡದಾಗಿ ಬಿಂಬಿಸುತ್ತಿವೆ. ಇದಕ್ಕೆ ಡಿಕೆ ಮತ್ತು ಸಿದ್ದು ಬಣದ ನಾಯಕರ ಶ್ರಮವೂ ಜೊತೆಯಿದೆ. ಹೀಗೆ ಪಕ್ಷದೊಳಗಿನ ನಾಯಕರ ಸಂಘರ್ಷದಿಂದ ಭೀಕರವಾಗಿ ಪಕ್ಷಗಳು ಕಾಲ ಕಾಲಕ್ಕೆ ಸೋತ ಇತಿಹಾಸ ಕಣ್ಮುಂದಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನಡುವೆ ಆಂತರಿಕ ಸಂಘರ್ಷ ನಿಜಕ್ಕೂ ತಾರಕಕ್ಕೆ ಏರಿದೆಯೇ? ರಾಜಸ್ಥಾನದಲ್ಲೂ ಗದ್ದುಗೆ ಗುದ್ದಾಟ, ಪವರ್‌ ಶೇರಿಂಗ್‌ ವಿಚಾರದಲ್ಲಿ ನಡೆದ ಕಿತ್ತಾಟದಿಂದ ಕೊನೆಗೆ ಕಾಂಗ್ರೆಸ್‌ ಸೋತು ಸುಣ್ಣವಾಗಿತ್ತು. ಈಗ ರಾಜ್ಯದಲ್ಲೂ ಸಿದ್ದು-ಡಿಕೆಯಿಂದಾಗಿ ‘ಕೈ’ ಸರ್ಕಾರ ಬಲಿಯಾಗುವುದು ಖಚಿತವೇ?

ಹೀಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಬಗೆ ಬಗೆಯ ವಿಶ್ಲೇಷಣೆಗಳು ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿವೆ. ಪ್ರತಿಪಕ್ಷಗಳ ನಾಯಕರು ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ಸಿದ್ದು-ಡಿಕೆಯಿಂದಲೇ ಕಾಂಗ್ರೆಸ್‌ ಸರ್ಕಾರದ ಪತನ ಎಂದು ಷರಾ ಬರೆದಂತೆ ಆಡುತ್ತಿದ್ದಾರೆ. ವಾಸ್ತವದಲ್ಲಿ ಸಿದ್ದು – ಡಿಕೆ ಗುದ್ದಾಟಕ್ಕಿಂತ ಸುದ್ದಿಯ ಭರಾಟೆಯೇ ಹೆಚ್ಚಿದೆ.

2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ 136 ಸ್ಥಾನಗಳೊಂದಿಗೆ ದೊಡ್ಡ ಬಹುಮತ ಪಡೆದಾಗಿನಿಂದ ‘ಗದ್ದುಗೆ ಗುದ್ದಾಟ’ ಒಂದಿಲ್ಲಾ ಒಂದು ರೀತಿಯಲ್ಲಿ ಚಾಲ್ತಿಯಲ್ಲಿದೆ. ಹೈಕಮಾಂಡ್‌ ಜೊತೆಗಿನ ಹಲವು ಸರ್ಕಸ್‌ಗಳೊಂದಿಗೆ ಸಿಎಂ ಸಿದ್ದರಾಮಯ್ಯ ಎರಡನೇ ಅವಧಿಗೆ ಸಿಎಂ ಆದರೂ ಸರ್ಕಾರ ರಚನೆಯಾದಾಗಿನಿಂದ ಗದ್ದುಗೆ ಗುದ್ದಾಟ ಜೊತೆಯಾಗಿಯೇ ಸಾಗಿ ಬರುತ್ತಿದೆ. ಕಾರಣ ಐದು ವರ್ಷವೂ ಸಿದ್ದರಾಮಯ್ಯ ಅವರೇ ಸಿಎಂ ಆಗಿರುತ್ತಾರೆ ಎಂದು ಹೈಕಮಾಂಡ್‌ ಈ ಬಗ್ಗೆ ಎಲ್ಲಿಯೂ ಹೇಳದಿರುವುದು.

Advertisements

ಕಾಂಗ್ರೆಸ್‌ ಹೈಕಮಾಂಡ್‌ ಮೌನವೇ ಗದ್ದುಗೆ ಗುದ್ದಾಟ ಪ್ರಹಸನಕ್ಕೆ ಅಸ್ತ್ರವಾಗಿದೆ. ಇದನ್ನೇ ಮುಂದಿಟ್ಟುಕೊಂಡ ಪ್ರತಿಪಕ್ಷಗಳು ಮತ್ತು ಮಾಧ್ಯಮಗಳು ಒಂದಿಷ್ಟು ಮೂಲಗಳನ್ನು ಕೆದಕಿ ಗದ್ದುಗೆ ಗುದ್ದಾಟವನ್ನು ಇನ್ನೂ ದೊಡ್ಡದಾಗಿ ಬಿಂಬಿಸುತ್ತಿವೆ. ಇದಕ್ಕೆ ಡಿಕೆ ಮತ್ತು ಸಿದ್ದು ಬಣದ ನಾಯಕರ ಶ್ರಮವೂ ಜೊತೆಯಿದೆ.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಎರಡು ವರ್ಷ ಪೂರೈಸುತ್ತಿದ್ದಂತೆ ಗದ್ದುಗೆ ಗುದ್ದಾಟ ಇನ್ನೂ ಹೆಚ್ಚು ಮುನ್ನೆಲೆಗೆ ಬಂದಿದೆ. ಡಿ.ಕೆ ಶಿವಕುಮಾರ್‌ ಮತ್ತು ತಾವು ದೆಹಲಿಯಲ್ಲಿದ್ದಾಗಲೇ ಸಿಎಂ ಸಿದ್ದರಾಮಯ್ಯ ರಾಷ್ಟ್ರೀಯ ಮಾಧ್ಯಮಕ್ಕೆ ಸಂದರ್ಶನ ನೀಡಿ, “ಡಿ.ಕೆ ಶಿವಕುಮಾರ್‌ಗೆ ಹೆಚ್ಚಿನ ಶಾಸಕರ ಬೆಂಬಲವಿಲ್ಲ. ನಾನೇ ಐದು ವರ್ಷ ಮುಖ್ಯಮಂತ್ರಿ” ಎಂದು ಹೇಳುವ ಮೂಲಕ ಅವರೇ ಗದ್ದುಗೆ ಗುದ್ದಾಟಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.

ಎರಡು ವರ್ಷಗಳ ಕಾಲ ಎಲ್ಲಿಯೂ ತಾವೇ ಐದು ವರ್ಷ ಸಿಎಂ ಎಂದು ತುಟಿ ಬಿಚ್ಚದ ಸಿದ್ದರಾಮಯ್ಯ ಹೀಗೆ ನೇರಾ ನೇರ ಹೈಕಮಾಂಡ್‌ ಹೇಳಬೇಕಿದ್ದ ಸ್ಪಷ್ಟನೆಯನ್ನು ತಾವೇ ಘೋಷಿಸಿದ್ದು ಆಶ್ಚರ್ಯ ಮತ್ತು ಕುತೂಹಲ ಸೃಷ್ಟಿಸಿದೆ. ಆ ಮೂಲಕ ಹೈಕಮಾಂಡ್‌ಗೆ ಸಿದ್ದರಾಮಯ್ಯ ಪರೋಕ್ಷವಾಗಿ ಸಿಎಂ ಬದಲಾವಣೆಗೆ ಕೈಹಾಕಬೇಡಿ ಎನ್ನುವ ಸಂದೇಶವನ್ನು ರವಾನಿಸಿದ್ದಾರೆಯೇ ಎನ್ನುವ ಪ್ರಶ್ನೆಯೂ ಮೂಡಿದೆ.

ಎರಡೂವರೆ ವರ್ಷದ ಬಳಿಕ ನಾಯಕತ್ವ ಬದಲಾವಣೆಯ ಒಪ್ಪಂದ ಆಗಿದೆಯೋ ಇಲ್ಲವೋ ಎಂಬುದರ ಬಗ್ಗೆ ಹೈಕಮಾಂಡ್‌ ಈಗಾಗಲೇ ಸ್ಪಷ್ಟನೆ ನೀಡಿದ್ದರೆ ದೆಹಲಿ ಬೆಳವಣಿಗೆಯ ಪ್ರಹಸನ ನಡೆಯುತ್ತಿರಲಿಲ್ಲ. ಇದನ್ನು ಕೇಳಿಸಿಕೊಂಡ ಮೇಲೂ ಮೌನದಲ್ಲಿರುವ ಹೈಕಮಾಂಡ್‌ ತಲೆಯಲ್ಲಿ ಬೇರೆಯೇ ಯೋಚನೆ ಇದ್ದಂತಿದೆ ಎಂಬುದು ಸ್ಪಷ್ಟವಾಗಿ ಅರ್ಥವಾಗುತ್ತದೆ. ಹಾಗಂತ ಮಾಧ್ಯಮಗಳಲ್ಲಿ ಪ್ರಸಾರವಾಗುವ ರೀತಿಯಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್‌ ತಮ್ಮ ನಡುವೆ ಗದ್ದುಗೆ ಗುದ್ದಾಟ ನಡೆಯುತ್ತಿಲ್ಲ. ಪರಸ್ಪರ ಗೌರವ ಕೊಟ್ಟುಕೊಂಡೇ ಇಬ್ಬರು ನಾಯಕರು ಮಾತನಾಡುತ್ತಾರೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪ್ರತಿಭಟಿಸಿದರೆ ಸಾಕು ಜೈಲು ಶಿಕ್ಷೆ; ಇದು ಬಿಜೆಪಿಯ ಅಸಲಿ ಮುಖವೇ?

ದೆಹಲಿಯ ಬೆಳವಣಿಗೆಯ ನಂತರವೂ ಮುಖಾಮುಖಿಯಾದ ಸಿದ್ದು-ಡಿಕೆ ತಮ್ಮ ನಡುವೆ ಯಾವ ಸಂಘರ್ಷವೂ ಇಲ್ಲದಂತೆ ಎದುರು ಬದುರಾಗಿದ್ದಾರೆ. ಪರಸ್ಪರ ಕೂಡಿಕೊಂಡು ಸರಣಿ ಸಭೆಗಳನ್ನು ನಡೆಸಿದ್ದಾರೆ. ಎಲ್ಲೂ ಒಬ್ಬರಿಗೊಬ್ಬರು ಮುಖ ಸಿಂಡರಿಸಿಕೊಂಡು ಯಾವುದೇ ಸಭೆಯಲ್ಲಿ ಭಾಗಿಯಾದ ಬೆಳವಣಿಗೆ ಕಂಡಿಲ್ಲ. ಇದನ್ನು ನೋಡಿದರೆ ಇಬ್ಬರಲ್ಲೂ ಬೇರೆ ತರಹದ ವ್ಯಕ್ತಿತ್ವ ಎದ್ದು ಕಾಣುತ್ತದೆ.

ಉಪಮುಖ್ಯಮಂತ್ರಿ ಹುದ್ದೆಯ ಜೊತೆಗೆ ಬೆಂಗಳೂರಿನ ಉಸ್ತುವಾರಿ, ಜಲಸಂಪನ್ಮೂಲ ಖಾತೆಯನ್ನು ತಮ್ಮದಾಗಿಸಿಕೊಂಡಿದ್ದರೂ ಅನುದಾನ ವಿಚಾರದಲ್ಲಿ ತಾರತಮ್ಯ ಆಗಿದೆ ಎನ್ನುವ ಒಂದು ಸಣ್ಣ ಮಾತು ಡಿ.ಕೆ ಶಿವಕುಮಾರ್‌ ಕಡೆಯಿಂದ ಈವರೆಗೂ ಹೊರಬಿದ್ದಿಲ್ಲ. ಡಿ.ಕೆ ಶಿವಕುಮಾರ್‌ ಜೊತೆ ಸಿಎಂ ಸಂಘರ್ಷಕ್ಕೆ ಇಳಿದಿಲ್ಲ ಎಂಬುದು ಇದನ್ನು ತೋರಿಸುತ್ತದೆ.

ಯಾವುದೇ ಪಕ್ಷ ಇರಲಿ, ತಾವು ಪಕ್ಷ ಕಟ್ಟಿ ಬೆಳೆಸುವಲ್ಲಿ ಬಹಳಷ್ಟು ಕೊಡುಗೆ ನೀಡಿದ್ದರೆ ಸಹಜವಾಗಿಯೇ ಸಿಎಂ ಸ್ಥಾನ ನೀಡಿ ಎಂದು ತಮ್ಮ ಹೈಕಮಾಂಡ್‌ ಮುಂದೆ ಕೇಳುವುದರಲ್ಲಿ ತಪ್ಪಿಲ್ಲ. ಇಲ್ಲಿ ಡಿ.ಕೆ ಶಿವಕುಮಾರ್‌ ನ್ಯಾಯಯುತವಾಗಿ ಸಿಎಂ ಸ್ಥಾನ ಕೇಳುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದ್ಯಾವುದು ತಪ್ಪಲ್ಲ. ಆದರೆ, ಹೈಕಮಾಂಡ್‌ಗೆ ವ್ಯಕ್ತಿ ಎಷ್ಟು ಮುಖ್ಯವೋ ಅದಕ್ಕಿಂತ ಹೆಚ್ಚು ಪಕ್ಷ ಮುಖ್ಯವಾಗಿರುತ್ತದೆ ಎಂಬುದನ್ನು ಸದ್ಯದ ಬೆಳವಣಿಗೆಯಲ್ಲಿ ಅರಿಯಬೇಕಾಗಿದೆ.

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಬಿಹಾರ ಚುನಾವಣೆ ಮೇಲೆ ಹೆಚ್ಚು ಕೇಂದ್ರಿಕೃತರಾಗಿದ್ದಾರೆ. ಡಿ.ಕೆ ಶಿವಕುಮಾರ್‌ ಸಿಎಂ ಬದಲಾವಣೆಗೆ ಎಷ್ಟೇ ಒತ್ತಡ ಹಾಕಿದರೂ ಬಿಹಾರ ಚುನಾವಣೆ ಮುಗಿಯುವರೆಗೂ ಇದಕ್ಕೆ ರಾಹುಲ್‌ ಗಾಂಧಿ ಕಿವಿಯಾಗುವುದಿಲ್ಲ ಎಂದೇ ಹೇಳಲಾಗುತ್ತಿದೆ. ರಾಜ್ಯದಲ್ಲಿ ಸಿಎಂ ಬದಲಾವಣೆಗೆ ಕೈ ಹಾಕಿದರೆ ಬಿಹಾರ ಚುನಾವಣೆ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಪಕ್ಷದ ಹಿಂದುಳಿದ ವರ್ಗದ ಮುಖವಾಗಿರುವ ಸಿದ್ದರಾಮಯ್ಯ ಅವರನ್ನು ತೆಗೆದುಹಾಕಲು ರಾಹುಲ್ ಒಲವು ತೋರುತ್ತಿಲ್ಲ ಎಂದು ಮೂಲಗಳು ಹೇಳಿವೆ.

ಹೀಗಾಗಿ ಇಬ್ಬರೂ ನಾಯಕರು ಜಾಣ ನಡೆ ಪ್ರದರ್ಶಿಸುತ್ತಿದ್ದು, ಅಧಿಕಾರ ಹಂಚಿಕೆ ವಿಚಾರದಲ್ಲಿ “ಹೈಕಮಾಂಡ್‌ ತೀರ್ಮಾನಕ್ಕೆ ಬದ್ದ” ಎಂದು ಸಿದ್ದರಾಮಯ್ಯ ಹೇಳಿದರೆ, “ಖರ್ಗೆ ಅವರು ದೀಕ್ಷೆ ಕೊಟ್ಟಿದ್ದಾರೆ, ಪಕ್ಷ ಹೇಳಿದಂತೆ ಕೇಳುವುದು ನನ್ನ ಕೆಲಸ” ಎಂದು ಡಿಕೆ ಹೇಳುತ್ತಿದ್ದಾರೆ. ಬಿಹಾರ ಚುನಾವಣೆಯ ನಂತರ ಗದ್ದುಗೆ ಗುದ್ದಾಟಕ್ಕೆ ಮತ್ತಷ್ಟು ಇಂಬು ಸಿಗಬಹುದು.

ಇನ್ನು ಬಿಜೆಪಿ ವಿಷಯಕ್ಕೆ ಬರೋಣ. ಕಾಂಗ್ರೆಸ್‌ನ ರಾಜ್ಯ ಘಟಕದಲ್ಲಿನ ‘ಅಧಿಕಾರ ಹಸ್ತಾಂತರ’ದ ಚಡಪಡಿಕೆಯ ನಡುವೆ ಬಿಜೆಪಿಯ ಚಡಪಡಿಕೆಗೆ ಅರ್ಥವೇ ಇಲ್ಲವಾಗಿದೆ. ಬಿಜೆಪಿ ಕಾಂಗ್ರೆಸ್‌ನ ಗದ್ದುಗೆ ಗುದ್ದಾಟವನ್ನು ರಾಜಕೀಯ ಅಜೆಂಡಾ ತರ ಜೀವಂತವಾಗಿಟ್ಟುಕೊಂಡು, ಸರ್ಕಾರ ಅಸ್ಥಿರಗೊಂಡಿದೆ ಎನ್ನುವ ನರೇಷನ್‌ ಕಟ್ಟುತ್ತಿದೆ. ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿರುವ ರಾಜ್ಯ ಬಿಜೆಪಿ ನಾಯಕರು ಕಾಂಗ್ರೆಸ್‌ನಲ್ಲಿ ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಧಾನ ಮಂತ್ರಿ ಅಭ್ಯರ್ಥಿಯಾಗಲಿ ಎಂದು ಶಂಖ ಊದುತ್ತಿದ್ದಾರೆ.

ಬಿಜೆಪಿಯವರ ನಡೆ ಹೇಗಿದೆ ಎಂದರೆ ತಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿರೂ ಪರವಾಗಿಲ್ಲ ಕಾಂಗ್ರೆಸ್‌ ತಟ್ಟೆಯಲ್ಲಿನ ನೊಣವೇ ಇವರಿಗೆ ಮುಖ್ಯವಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರ ಪಕ್ಷದೊಳಗೆ ಭುಗಿಲೆದ್ದಿದ್ದರೂ ಮಾಧ್ಯಮದಲ್ಲಿ ಏನೂ ಸಮಸ್ಯೆಯೇ ಇಲ್ಲ ಎನ್ನುವಂತೆ ನೋಡಿಕೊಳ್ಳಲಾಗುತ್ತಿದೆ. ದಲಿತರ ಬಗ್ಗೆ ನಿಜಕ್ಕೂ ಬಿಜೆಪಿಗೆ ಕಾಳಜಿ ಇದ್ದರೆ ಬಿಜೆಪಿ ರಾಜ್ಯಾಧ್ಯಕ್ಷರ ಸ್ಥಾನವನ್ನು ದಲಿತರಿಗೆ ಬಿಟ್ಟು, ಮೋದಿ ಅವರ ಬದಲು ದಲಿತರನ್ನೇ ಪ್ರಧಾನಿ ಮಾಡುವ ಮೂಲಕ ದಲಿತಪ್ರೇಮ ತೋರಿ ಮಾತನ್ನಾಡಿದರೆ ಅದಕ್ಕೆ ತೂಕ ಹೆಚ್ಚು. ಬರೀ ಇವರದ್ದು ಮಾತಿನ ಶೂರತ್ವ ಅಷ್ಟೇ.

ಸಿದ್ದು-ಡಿಕೆಯನ್ನು ಮುಂದು ಮಾಡಿ ಮಾತನಾಡುತ್ತಿರುವ ಬಿಜೆಪಿ, ಜೆಡಿಎಸ್‌ನವರು ಇತಿಹಾಸದಿಂದ ಪಾಠವನ್ನು ಕಲಿಯುವುದು ಬಹಳ ಇದೆ. 1984ರಲ್ಲಿ ಜನತಾ ಪಾರ್ಟಿಯಲ್ಲಿನ ಎಸ್‌ ಆರ್‌ ಬೊಮ್ಮಾಯಿ, ರಾಮಕೃಷ್ಣ ಹೆಗಡೆ ನಡುವಿನ ಕಾಳಗ 1994ರಲ್ಲಿ ಕಾಂಗ್ರೆಸ್‌ನೊಳಗೆ ವೀರಪ್ಪ ಮೊಯಿಲಿ- ಎಸ್‌ ಬಂಗಾರಪ್ಪ, ವಿರೇಂದ್ರ ಪಾಟೀಲ್‌ ಹಾಗೂ ಎಸ್‌ ಎಂ ಕೃಷ್ಣ ನಡುವಿನ ಸಂಘರ್ಷ, 1999ರಲ್ಲಿ ಜನತಾದಳದಲ್ಲಿನ ಹೆಚ್‌ ಡಿ ದೇವೇಗೌಡ- ಜೆ ಎಚ್‌ ಪಟೇಲ್‌ ನಡುವಿನ ಗುದ್ದಾಟ, 2008, 2013 ಎಚ್‌ ಡಿ ಕುಮಾರಸ್ವಾಮಿ, ಬಿ ಎಸ್‌ ಯಡಿಯೂರಪ್ಪ, ಸದಾನಂದಗೌಡ, ಜಗದೀಶ್‌ ಶೆಟ್ಟರ್‌ ಕದನ ಹಾಗೂ 2023ರಲ್ಲಿ ಬಿ ಎಸ್‌ ಯಡಿಯೂರಪ್ಪ, ಬಸನಗೌಡ ಪಾಟೀಲ್‌ ಯತ್ನಾಳ್‌, ಬಸವರಾಜ ಬೊಮ್ಮಾಯಿ ಸಂಘರ್ಷ ತಮ್ಮ ಪಕ್ಷದ ಒಳಜಗಳದಿಂದಲೇ ಭೀಕರವಾಗಿ ಸೋತ ಇತಿಹಾಸ ಕಣ್ಮುಂದಿದೆ. ಇದನ್ನು ಅರಿತು ನಡೆಯದೇ ಸಂಘರ್ಷವನ್ನು ಬರೀ ಜೀವಂತವಾಗಿಟ್ಟುಕೊಂಡರೆ, ಜನರೇ ಅದಕ್ಕೆ ತಕ್ಕ ಪಾಠ ಕಲಿಸುತ್ತಾರೆ. ಇದಕ್ಕೆ ಕಾಂಗ್ರೆಸ್‌ ಸಹ ಹೊರತಾಗಿಲ್ಲ.

WhatsApp Image 2023 04 01 at 3.53.40 PM e1680350106945
+ posts

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಶರಣು ಚಕ್ರಸಾಲಿ
ಶರಣು ಚಕ್ರಸಾಲಿ
ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

Download Eedina App Android / iOS

X