ಬಿಹಾರದಲ್ಲಿ ನಡೆಯುವ ಅಪರಾಧಗಳನ್ನು ನಿಯಂತ್ರಿಸಲಾಗದಿದ್ದರೆ ನಿತೀಶ್ ಕುಮಾರ್ ಸರ್ಕಾರವು ಅವರ ಪುತ್ರ ನಿಶಾಂತ್ ಕುಮಾರ್ ಅವರಿಗೆ ಹಸ್ತಾಂತರಿಸಲಿ ಎಂದು ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಸೋಮವಾರ ಹೇಳಿದ್ದಾರೆ. ಇನ್ನು ಒಂದು ದಿನದ ಹಿಂದೆಯಷ್ಟೇ ರಾಷ್ಟ್ರೀಯ ಲೋಕ ಮೋರ್ಚಾ(ಆರ್‌ಎಲ್‌ಎಂ) ಮುಖ್ಯಸ್ಥ ಉಪೇಂದ್ರ ಕುಶ್ವಾಹ ಇದೇ ಹೇಳಿಕೆಯನ್ನು ನೀಡಿದ್ದರು.
ಬಿಹಾರ ವಿಧಾನಸಭೆಯ ಮುಂಗಾರು ಅಧಿವೇಶನದ ಮೊದಲ ದಿನದಂದು ವಿಧಾನಸಭೆ ಆವರಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರಾಬ್ರಿ ಅವರು, “ಬಿಹಾರದಲ್ಲಿ ಹೆಚ್ಚುತ್ತಿರುವ ಅಪರಾಧ ಘಟನೆಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ನಿತೀಶ್ ಅವರು ಸರ್ಕಾರವನ್ನು ನಡೆಸಲು ಅಸಮರ್ಥರಾಗಿದ್ದರೆ, ಜನರ ಹಿತದೃಷ್ಟಿಯಿಂದ ತಮ್ಮ ಮಗನಿಗೆ ಜವಾಬ್ದಾರಿಯನ್ನು ಹಸ್ತಾಂತರಿಸಬೇಕು” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಆಧ್ಯಾತ್ಮಿಕತೆಯತ್ತ ಸಾಗುತ್ತಿದ್ದೇನೆ: ರಾಜಕೀಯ ಪ್ರವೇಶ ವದಂತಿಗೆ ತೆರೆ ಎಳೆದ ಬಿಹಾರ ಸಿಎಂ ನಿತೀಶ್ ಕುಮಾರ್ ಪುತ್ರ
“ನಿತೀಶ್ ಕುಮಾರ್ ನೇತೃತ್ವದ ಎನ್‌ಡಿಎ ಸರ್ಕಾರ ಅಪರಾಧಗಳನ್ನು ತಡೆಯಲು ಸಾಧ್ಯವಾಗಿಲ್ಲ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿವೆ. ನಿತೀಶ್ ಗೃಹ ಖಾತೆಯನ್ನೂ ಹೊಂದಿದ್ದಾರೆ. ಅವರು ಹುದ್ದೆಗೆ ರಾಜೀನಾಮೆ ನೀಡಲು ಸಿದ್ಧರಿಲ್ಲದ ಕಾರಣ, ಅವರು ಕನಿಷ್ಠ ತಮ್ಮ ಮಗನಿಗೆ ಜವಾಬ್ದಾರಿಯನ್ನು ಹಸ್ತಾಂತರಿಸಬೇಕು, ಅವನು ಚಿಕ್ಕವನಾಗಿದ್ದು ಜವಾಬ್ದಾರಿ ಹೊಂದಿರುತ್ತಾನೆ” ಎಂದು ಅಭಿಪ್ರಾಯಿಸಿದ್ದಾರೆ.
ಅಕ್ಟೋಬರ್-ನವೆಂಬರ್ ನಡುವೆ ವಿಧಾನಸಭೆ ಚುನಾವಣೆಯನ್ನು ಎದುರಿಸಲಿರುವ ಬಿಹಾರದಲ್ಲಿ ಇದು ಅಧಿವೇಶನ ನಡೆಯುತ್ತಿದ್ದು ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ಗಂಭೀರ ಪ್ರಶ್ನೆಗಳನ್ನು ವಿಪಕ್ಷಗಳು ಎತ್ತಿವೆ. ಶುಕ್ರವಾರದವರೆಗೆ ಅಧಿವೇಶನ ನಡೆಯಲಿದ್ದು, ಪೂರಕ ಬಜೆಟ್ ಅನ್ನು ಅಂಗೀಕರಿಸಲಾಗುತ್ತದೆ.
ಇದನ್ನು ಓದಿದ್ದೀರಾ? ಬಿಹಾರ ಮತದಾರರ ಪಟ್ಟಿಯಲ್ಲಿ ಬಾಂಗ್ಲಾ, ಮ್ಯಾನ್ಮಾರ್, ನೇಪಾಳದವರ ಹೆಸರುಗಳು ಪತ್ತೆ; ಚುನಾವಣಾ ಆಯೋಗ
ಈ ನಡುವೆ ಮಾಜಿ ಕೇಂದ್ರ ಸಚಿವ ಮತ್ತು ಆರ್‌ಎಲ್‌ಎಂ ಮುಖ್ಯಸ್ಥ ಕುಶ್ವಾಹ ನಿತೀಶ್ ಅವರ ಬಳಿ ಜೆಡಿ(ಯು) ನಾಯಕತ್ವವನ್ನು ನಿಶಾಂತ್‌ಗೆ ಹಸ್ತಾಂತರಿಸುವಂತೆ ವಿನಂತಿಸಿದ್ದಾರೆ. ಆದರೆ ತಾನು ರಾಜಕೀಯದಿಂದ ದೂರು ಉಳಿಯುವುದಾಗಿ ಈ ಹಿಂದೆಯೇ ನಿಶಾಂತ್ ಸ್ಪಷ್ಟಪಡಿಸಿದ್ದಾರೆ. ಹಾಗೆಯೇ ತಾನು ಆಧ್ಯಾತ್ಮಿಕತೆಯತ್ತ ಸಾಗುತ್ತಿರುವುದಾಗಿ ಹೇಳಿದ್ದಾರೆ.
ಕಳೆದ ವರ್ಷ ಜುಲೈನಲ್ಲಿಯೂ ನಿಶಾಂತ್ ರಾಜಕೀಯ ಸೇರುವ ಬಗ್ಗೆ ವದಂತಿಗಳು ಹರಡಿದ್ದವು ಈ ಬಗ್ಗೆ ಪಟನಾ ಮಾರುಕಟ್ಟೆಯಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದ ನಿಶಾಂತ್, “ನಾನು ಆಧ್ಯಾತ್ಮಿಕತೆಯತ್ತ ಸಾಗುತ್ತಿದ್ದೇನೆ. ಹರೇ ರಾಮ ಹರೇ ಕೃಷ್ಣ ಭಜನೆಯನ್ನು ಕೇಳಲು ಸ್ಪೀಕರ್ ಖರೀದಿಸಲು ನಾನು ಇಲ್ಲಿಗೆ ಬಂದಿದ್ದೇನೆ. ನಾನು ಪ್ರತಿದಿನ ಬೆಳಿಗ್ಗೆ ನನ್ನ ಫೋನ್‌ನಲ್ಲಿ ಈ ಭಜನೆಯನ್ನು ಕೇಳುತ್ತೇನೆ. ಹೊಸ ಸಾಧನದೊಂದಿಗೆ, ನಾನು ಭಜನೆಯನ್ನು ಇನ್ನಷ್ಟು ಸುಲಭವಾಗಿ ಕೇಳಲು ಈ ಸ್ಪೀಕರ್ ನನಗೆ ಸಹಾಯ ಮಾಡುತ್ತದೆ” ಎಂದು ಹೇಳಿದ್ದರು.
