ಅಕ್ರಮ ಬೆಟ್ಟಿಂಗ್ ಆ್ಯಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ(ಇಡಿ) ಸೋಮವಾರ ನಟರಾದ ರಾಣಾ ದಗ್ಗುಬಾಟಿ, ಪ್ರಕಾಶ್ ರಾಜ್, ವಿಜಯ್ ದೇವರಕೊಂಡ ಮತ್ತು ನಟಿ ಲಕ್ಷ್ಮಿ ಮಂಚು ಅವರಿಗೆ ಸಮನ್ಸ್ ಜಾರಿ ಮಾಡಿದೆ.
ಜುಲೈ 23ರಂದು ವಿಚಾರಣೆಗೆ ಹಾಜರಾಗುವಂತೆ ನಟ ದಗ್ಗುಬಾಟಿ ಅವರಿಗೆ ತಿಳಿಸಲಾಗಿದೆ. ಜುಲೈ 30ರಂದು ಪ್ರಕಾಶ್ ರಾಜ್, ಆಗಸ್ಟ್ 6ರಂದು ದೇವರಕೊಂಡ ಮತ್ತು ಆಗಸ್ಟ್ 13ರಂದು ಮಂಚು ಅವರನ್ನು ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿದೆ.
ಇದನ್ನು ಓದಿದ್ದೀರಾ? 100 ಕೋಟಿ ರೂ. ಪೋಂಜಿ ಹಗರಣ: ನಟ ಪ್ರಕಾಶ್ ರಾಜ್‌ಗೆ ಇಡಿ ಸಮನ್ಸ್
ಈ ಹಿಂದೆ ಸೈಬರಾಬಾದ್ ಪೊಲೀಸರು ಹೈದರಾಬಾದ್‌ನಲ್ಲಿ ದಾಖಲಿಸಿದ ಎಫ್‌ಐಆರ್ ಆಧರಿಸಿ, ತನಿಖಾ ಸಂಸ್ಥೆಯು ಈ ಪ್ರಕರಣದಲ್ಲಿ 29 ಸೆಲೆಬ್ರಿಟಿಗಳ ವಿರುದ್ಧ ಪ್ರಕರಣ ದಾಖಲಿಸಿತ್ತು. ದೇವರಕೊಂಡ, ದಗ್ಗುಬಾಟಿ, ಮಂಚು, ರಾಜ್, ನಿಧಿ ಅಗರ್ವಾಲ್, ಅನನ್ಯ ನಾಗಲ್ಲ ಮತ್ತು ಟಿವಿ ನಿರೂಪಕಿ ಶ್ರೀಮುಖಿ ಹೆಸರು ಕಾಣಿಸಿಕೊಂಡಿದೆ.
ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 49, ತೆಲಂಗಾಣ ರಾಜ್ಯ ಗೇಮಿಂಗ್ ಕಾಯ್ದೆ (ಟಿಎಸ್‌ಜಿಎ) ಸೆಕ್ಷನ್ 4 ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66-ಡಿ ಜೊತೆಗೆ ಹಲವು ಸೆಕ್ಷನ್‌ಗಳ ಅಡಿ ನಟರು ಮತ್ತು ಮಾಧ್ಯಮ ಪ್ರಭಾವಿಗಳ ಮೇಲೆ ಎಫ್‌ಐಆರ್ ದಾಖಲಾಗಿದೆ ಎಂದು ವರದಿಯಾಗಿದೆ.
ನಟರು ಮತ್ತು ಪ್ರಭಾವಿಗಳು ಆನ್‌ಲೈನ್ ಪಾಪ್-ಅಪ್ ಜಾಹೀರಾತುಗಳ ಮೂಲಕ ಈ ಬೆಟ್ಟಿಂಗ್ ಪ್ಲಾಟ್‌ಫಾರ್ಮ್‌ಗಳನ್ನು ಪ್ರಚಾರ ಮಾಡಿದ್ದಾರೆ. ಇದು ಬಳಕೆದಾರರನ್ನು ಅಕ್ರಮ ಜೂಜಾಟದಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸುತ್ತದೆ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಎಕ್ಸ್‌ನಲ್ಲಿ ಸ್ಪಷ್ಟಣೆ ನೀಡಿರುವ ಪ್ರಕಾಶ್ ರಾಜ್, “2016ರಲ್ಲಿ ಗೇಮಿಂಗ್ ಅಪ್ಲಿಕೇಶನ್ ಅನ್ನು ಪ್ರಚಾರ ಮಾಡಿದ್ದೇನೆ. ಆದರೆ ಆ ರೀತಿ ಮಾಡುವುದು ಸರಿಯಲ್ಲ ಎಂದು ಅರಿತು ನಂತರ 2017ರಲ್ಲಿ ಪ್ರಚಾರವನ್ನು ನಿಲ್ಲಿಸಿದೆ. ಅಂದಿನಿಂದ, ನಾನು ಯಾವುದೇ ಗೇಮಿಂಗ್ ಅಪ್ಲಿಕೇಶನ್‌ಗಳನ್ನು ಪ್ರಚಾರ ಮಾಡಿಲ್ಲ. ಈ ವಿಚಾರದಲ್ಲಿ ಪೊಲೀಸರು ಸಂಪರ್ಕಿಸಿದರೆ ಪ್ರತಿಕ್ರಿಯಿಸುತ್ತೇನೆ” ಎಂದು ತಿಳಿಸಿದ್ದಾರೆ.
