- ‘ರಾಜ್ಯದ ಹಿತದೃಷ್ಟಿಯಿಂದ ಅನುಮತಿ ನೀಡಬಾರದು’
- ‘ಬೆಂಗಳೂರಿನ ಎಲ್ಲ ಭಾಗಗಳಲ್ಲಿ ಮೆಟ್ರೋ ಆಗಲಿ’
ರಾಜ್ಯ ಸರ್ಕಾರವು ಸಾರಿಗೆ ವ್ಯವಸ್ಥೆಯನ್ನು ವಿಸ್ತಾರಗೊಳಿಸುವ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಂಪರ್ಕ ಒಳಗೊಂಡಂತೆ ಬೆಂಗಳೂರು ಮಹಾನಗರದ ಎಲ್ಲ ಭಾಗಗಳಲ್ಲಿ ಮೆಟ್ರೋ ವ್ಯವಸ್ಥೆ ಜಾರಿಗೊಳಿಸಲಿ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಹೊಸೂರು-ಬೆಂಗಳೂರು ಮೆಟ್ರೋ ರೈಲು ಸಂಪರ್ಕದ ಯಾವುದೇ ಪ್ರಸ್ತಾಪಕ್ಕೆ ರಾಜ್ಯ ಸರ್ಕಾರ ರಾಜ್ಯದ ಹಿತದೃಷ್ಟಿಯಿಂದ ಅನುಮತಿ ನೀಡಬಾರದು ಎಂದು ಮಾಜಿ ಎಂಎಲ್‌ಸಿ ರಮೇಶ್ ಬಾಬು ಆಗ್ರಹಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಪತ್ರ ಬರೆದಿರುವ ಅವರು, “ಅನೇಕ ಕನ್ನಡ ಸಂಘಟನೆಗಳು ಮತ್ತು ಜನಪರ ಸಂಘಟನೆಗಳು ಬೆಂಗಳೂರಿನ ಮತ್ತು ಕರ್ನಾಟಕದ ಹಿತರಕ್ಷಣೆಯ ದೃಷ್ಟಿಯಿಂದ ಹೊಸೂರು-ಬೆಂಗಳೂರು ಮೆಟ್ರೋ ಸಂಪರ್ಕಕ್ಕೆ ಅವಕಾಶ ನೀಡದಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ಒತ್ತಾಯ ರಾಜ್ಯದ ಹಿತಾಸಕ್ತಿಯ ಸಂರಕ್ಷಣೆಯ ದೃಷ್ಟಿಯಿಂದ ಸಮಂಜಸವಾಗಿದೆ” ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕ್ಯಾಂಪಸ್ಸುಗಳಲ್ಲಿ ಜಾತಿ ನಿಂದನೆ- ಬಿಗಿ ಕಾಯಿದೆ ಜಾರಿಯಾಗಲಿ
ರಾಜ್ಯದ ಹಿತದೃಷ್ಟಿಯಿಂದ ಮತ್ತು ಬೆಂಗಳೂರು ಮಹಾನಗರದಲ್ಲಿ ಸಾರಿಗೆ ದಟ್ಟಣೆಯ ಕಾರಣಕ್ಕಾಗಿ ಇತರೆ ರಾಜ್ಯದ ವಲಸಿಗರ ಮೇಲೆ ಅನಿವಾರ್ಯವಾಗಿ ನಿಯಂತ್ರಣವನ್ನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಹೇರಬೇಕಾಗಿರುತ್ತದೆ. ಬೆಂಗಳೂರು ಬೆಳವಣಿಗೆಯ ಮೇಲೆ ಆರೋಗ್ಯಕರವಾದ ನಿಯಂತ್ರಣ ಹಾಕದಿದ್ದರೆ ನಗರದಲ್ಲಿ ಸಾರಿಗೆ ಸಮಸ್ಯೆ ಜೊತೆಗೆ ಕುಡಿಯುವ ನೀರು, ವಿದ್ಯುತ್ ಪೂರೈಕೆ, ರಸ್ತೆ ನಿರ್ಮಾಣ ಹಾಗು ಇತರೆ ಮೂಲ ಸೌಕರ್ಯಗಳ ಸಮಸ್ಯೆ ಹೆಚ್ಚಾಗುತ್ತದೆ. ಇವುಗಳ ಹಿನ್ನೆಲೆಯಲ್ಲಿ ತಮಿಳುನಾಡು ರಾಜ್ಯವು ಚೆನ್ನೈ ಮೆಟ್ರೋ ರೈಲ್ವೆ ಸಂಸ್ಥೆಯ ಮೂಲಕ ಹೊಸೂರು-ಬೆಂಗಳೂರು ಮಹಾನಗರದ ದೃಷ್ಟಿಯಿಂದ ತಡೆಯಬೇಕು” ಎಂದು ಕೋರಿದ್ದಾರೆ.
ಬೆಂಗಳೂರು ಮಹಾನಗರಕ್ಕೆ ನಮ್ಮ ರಾಜ್ಯದ ಜನರು ಉದ್ಯೋಗ ಮತ್ತು ವ್ಯಾಪಾರದ ಕಾರಣಕ್ಕಾಗಿ ವಲಸೆ ಬಂದರೆ ರಾಜ್ಯದ ಹಿತದೃಷ್ಟಿಯಿಂದ ಕನ್ನಡಿಗರ ಹಿತರಕ್ಷಣೆಯನ್ನು ರಾಜ್ಯ ಸರ್ಕಾರ ಮಾಡಬೇಕಾಗಿರುತ್ತದೆ. ಅದೇ ರೀತಿ ಬೆಂಗಳೂರು ಮಹಾನಗರದಲ್ಲಿ ನೆಲೆಸಿರುವ ಜನಸಾಮಾನ್ಯರಿಗೆ ಸಾರಿಗೆ ವ್ಯವಸ್ಥೆ ಸೇರಿದಂತೆ ಎಲ್ಲ ರೀತಿಯ ಮೂಲ ಸೌಲಭ್ಯ ಒದಗಿಸಬೇಕು” ಎಂದು ಪತ್ರದಲ್ಲಿ ವಿವರಿಸಿದ್ದಾರೆ.