9 ಸಾವಿರ ಎಕರೆ ಪೈಕಿ 1 ಸಾವಿರಕ್ಕೂ ಹೆಚ್ಚು ಜಮೀನು ಈಗಾಗಲೇ ಕೆಐಎಡಿಬಿಗೆ ನೀಡಲಾಗಿದೆ. ಅದಕ್ಕೆ ರೈತರು ಪರಿಹಾರ ಸಹ ಪಡೆದಿದ್ದಾರೆ. ಆಗ ಹೋರಾಟ ಮಾಡದೆ ಈಗ ಯಾಕೆ? ಇದರಲ್ಲೂ 75% ಜನ ತಮಗೆ ಏನು ಪರಿಹಾರ ಬೇಕು ಎಂದು ಕೇಳಿದ್ದಾರೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದರು.
ಬಿಡದಿ ಟೌನ್ ಶಿಪ್‌ಗೆ ಕೆಲವು ಪಂಚಾಯ್ತಿ ರೈತರು ವಿರೋಧ ವ್ಯಕ್ತಪಡಿಸಿರುವ ಬಗ್ಗೆ ಸುದ್ದಿಗಾಗರು ಕೇಳಿದಾಗ ಪ್ರತಿಕ್ರಿಯಿಸಿದ ಅವರು, “ಈ ಯೋಜನೆ ನಾನು ಮಾಡಿದ್ದಲ್ಲ. ಕುಮಾರಸ್ವಾಮಿ ಅವರು ಮಾಡಿರುವುದು. ಅದನ್ನು ನಾನು ಡಿನೋಟಿಫಿಕೇಷನ್ ಮಾಡಲು ಬರಲ್ಲ. ರೈತರಿಗೆ ನ್ಯಾಯ ಒದಗಿಸಿಕೊಡುವ ಕೆಲಸವನ್ನು ನಾನು ಮಾಡುತ್ತೇವೆ. ಅವತ್ತಿನಿಂದ ಹೋರಾಟ ಮಾಡದೇ, ನಾನು ಬಂದಾಗ ಮಾತ್ರ ಯಾಕೆ ಹೋರಾಟ ಮಾಡಬೇಕು” ಎಂದು ಪ್ರಶ್ನಿಸಿದರು.
ರೈತರನ್ನು ಕರೆದು ಚರ್ಚೆ ಮಾಡುತ್ತಿಲ್ಲ ಎಂದು ಕೇಳಿದಾಗ, “ರೈತರ ಜೊತೆ ಚರ್ಚೆ ಮಾಡುತ್ತೇನೆ. ಅವರನ್ನು ಕರೆಯುವುದಿಲ್ಲ. ನಾನೇ ಅವರ ಬಳಿ ಹೋಗಿ ಚರ್ಚೆ ಮಾಡುವೆ. ಅವರಿಗೆ ಮನವರಿಕೆ ಮಾಡಿಕೊಡುತ್ತೇನೆ. ಅವರು ಕೂಡ ನಮ್ಮ ರೈತರು” ಎಂದು ತಿಳಿಸಿದರು.
“ಇ.ಡಿ ಸಂಸ್ಥೆಯನ್ನು ರಾಜಕೀಯವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿರುವುದಕ್ಕೆ ನನ್ನ ಪ್ರಕರಣವೇ ಸಾಕ್ಷಿ. ನನ್ನ ಮೇಲೆ ಕೇಸ್ ಹಾಕಿ ತಿಹಾರ್ ಜೈಲಿಗೆ ಕಳುಹಿಸಿದರು. ನಂತರ ಆ ಕೇಸ್ ರದ್ದಾಯಿತು. ರಾಜಕೀಯ ಒತ್ತಡಕ್ಕೆ ಸಿಲುಕುವ ಬಗ್ಗೆ ಇ.ಡಿ ಪರಿಶೀಲನೆ ನಡೆಸಬೇಕು. ಈ ಪ್ರಕರಣದಲ್ಲಿ ಬಿ ರಿಪೋರ್ಟ್ ಸಲ್ಲಿಕೆಯಾದ ಬಳಿಕ ಮೇಲ್ಮನವಿ ಸಲ್ಲಿಸುವ ಪ್ರಶ್ನೆ ಇರಲಿಲ್ಲ. ಹೀಗಾಗಿ ಸುಪ್ರೀಂ ಕೋರ್ಟ್ ಮುಡಾ ವಿಚಾರದಲ್ಲಿ ಈ ರೀತಿ ಹೇಳಿರಬೇಕು” ಎಂದರು.
ಕೇಂದ್ರ ಸರ್ಕಾರ ಇ.ಡಿ ಸಂಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆಯೇ ಎಂದು ಕೇಳಿದಾಗ, “ಈ ಕಾರಣಕ್ಕೆ ಈ ರೀತಿ ಮೇಲ್ಮನವಿ ಸಲ್ಲಿಸಲಾಗುತ್ತಿದೆ. ಬಿಜೆಪಿ ನಾಯಕರ ಮೇಲೆ ಮಾತ್ರ ಇ.ಡಿ ಕೇಸ್ ದಾಖಲಾಗುತ್ತಿಲ್ಲ ಯಾಕೆ? ಕೇವಲ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ರಾಬರ್ಟ್ ವಾದ್ರಾ, ಕಾಂಗ್ರೆಸ್ ನಾಯಕರ ಮೇಲೆ ಮಾತ್ರ ಯಾಕೆ ಕೇಸ್ ಹಾಕಲಾಗುತ್ತಿದೆ. ಬಿಜೆಪಿಗೆ ಹೋದವರೆಲ್ಲಾ ಶುದ್ಧರೇ? ಇದೇ ಅಲ್ಲವೇ ಬಿಜೆಪಿ ವಾಷಿಂಗ್ ಮಷಿನ್” ಎಂದು ಹರಿಹಾಯ್ದರು.
ಟನಲ್ ಕಾರಿಡಾರ್ ಅಗತ್ಯವಿದೆಯೇ ಎಂಬ ತೇಜಸ್ವಿ ಸೂರ್ಯ ಹೇಳಿಕೆ ಬಗ್ಗೆ ಕೇಳಿದಾಗ, “ಪಾಪ ಸಣ್ಣ ಹುಡುಗ, ಅವರ ಪಕ್ಷದಲ್ಲಿ ದೊಡ್ಡ ದೊಡ್ಡ ನಾಯಕರಿದ್ದಾರಲ್ಲಾ ಅವರ ಮೂಲಕ ಸದನದಲ್ಲಿ ಚರ್ಚೆ ಮಾಡಿಸಲಿ” ಎಂದು ತಿರುಗೇಟು ನೀಡಿದರು.
ಜನಸ್ಪಂದನ ಕಾರ್ಯಕ್ರಮದ ಬಗ್ಗೆ ಕೇಳಿದಾಗ, “ನಮ್ಮ ಕ್ಷೇತ್ರದಲ್ಲಿ ಹೆಚ್ಚಿನ ಸಮಸ್ಯೆ ಏನು ಇಲ್ಲ. ನಮ್ಮ ಕಾರ್ಯಕರ್ತರು, ಸ್ಥಳೀಯ ನಾಯಕರು ಇಲ್ಲಿ ಜನರ ಸಂಪರ್ಕ ಸಾಧಿಸಿ ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ. ಇಂದು ಬಂದಿರುವ ಅರ್ಜಿಗಳನ್ನು ಪರಿಶೀಲಿಸಿ ಪರಿಹಾರ ನೀಡುತ್ತೇವೆ. ಕೆಲವು ಅರ್ಜಿಗಳು ಪಿಂಚಣಿ, ಇ-ಖಾತಾ, ಜಿಎಸ್ ಟಿ ವಿಚಾರವಾಗಿ ಬಂದಿವೆ” ಎಂದು ತಿಳಿಸಿದರು.