ಜೀತು ಜೋಸೆಫ್ ನಿರ್ದೇಶನದಲ್ಲಿ 2013ರಲ್ಲಿ ಮಲಯಾಳಂ ಸಿನಿಮಾ ದೃಶ್ಯಂ ತೆರೆಗೆ ಬಂದಿತ್ತು. ಈ ಚಿತ್ರ ಸೂಪರ್ ಹಿಟ್ ಆದ ನಂತರ ದಕ್ಷಿಣ ಭಾರತ ಹಾಗೂ ಹಿಂದಿಯಲ್ಲಿ ರಿಮೇಕ್‌ಗಳಾಗಿ ಸೂಪರ್ ಹಿಟ್ ಆಗಿದ್ದವು. ಕೊಲೆ ಮಾಡಿ ಶವವನ್ನು ಹೂತ್ತಿಟ್ಟದ ಕತೆ ಅದಾಗಿತ್ತು. ಈಗ ಅದೇ ಸಿನಿಮಾ ರೀತಿಯಲ್ಲಿ ಮಹಾರಾಷ್ಟ್ರದಲ್ಲಿ ಅಪರಾಧ ಕೃತ್ಯವೊಂದು ವರದಿಯಾಗಿದೆ.
ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ತನ್ನ ಸ್ನೇಹಿತನ ಸಹಾಯದಿಂದ ತನ್ನ ಗಂಡನನ್ನು ಕೊಲೆ ಮಾಡಿ, ಮನೆಯೊಳಗೆ ಹೂತು ಹಾಕಿದ್ದಾರೆ.
ವಿಜಯ್ ಚವಾಣ್ – ಕೋಮಲ್ ಚವಾಣ್ ದಂಪತಿಗೆ 8 ವರ್ಷದ ಪುತ್ರನಿದ್ದಾನೆ. 35 ವರ್ಷದ ವಿಜಯ್ ಚವಾಣ್ ಕಳೆದ 15 ದಿನಗಳಿಂದ ಕಾಣೆಯಾಗಿದ್ದರು. ಅವರು ಮುಂಬೈನಿಂದ ಸುಮಾರು 70 ಕಿಲೋಮೀಟರ್ ದೂರದಲ್ಲಿರುವ ನಲಸೋಪರ ಪೂರ್ವದ ಗದ್ಗಪದ ಪ್ರದೇಶದಲ್ಲಿ ತಮ್ಮ 28 ವರ್ಷದ ಪತ್ನಿ ಕೋಮಲ್ ಚವಾಣ್ ಅವರೊಂದಿಗೆ ವಾಸಿಸುತ್ತಿದ್ದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಪ್ರತಿಭಟಿಸಿದರೆ ಸಾಕು ಜೈಲು ಶಿಕ್ಷೆ; ಇದು ಬಿಜೆಪಿಯ ಅಸಲಿ ಮುಖವೇ?
ವಿಜಯ್ ಕಾಣೆಯಾಗಿದ್ದಾರೆ ಎನ್ನುವುದನ್ನು ಅರಿತ ಅವರ ಸಹೋದರರು ಕಳೆದ ಕೆಲ ದಿನಗಳಿಂದ ಅವರಿಗಾಗಿ ಹುಡಕಾಟ ನಡೆಸುತ್ತಿದ್ದರು. ಸೋಮವಾರ (ಜು.21) ರಂದು ವಿಜಯ್ ಅವರ ಸಹೋದರ ಗದ್ಗಪದಲ್ಲಿರುವ ನಿವಾಸಕ್ಕೆ ಬಂದಿದ್ದಾರೆ. ಈ ವೇಳೆ ಮನೆಯ ನೆಲದ ಟೈಲ್ಸ್‌ಗಳ ಕೆಲ ಭಾಗವು ಹೊಸದಾಗಿ ಹಾಕಲ್ಪಟ್ಟಿದ್ದು ಮತ್ತು ಬಣ್ಣದಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡಿರುವುದನ್ನು ಗಮನಿಸಿದ್ದಾರೆ. ಟೈಲ್ಸ್ ಎತ್ತಿ ಪರಿಶೀಲಿಸಿದಾಗ ಅಲ್ಲಿಂದ ಕೆಟ್ಟ ವಾಸನೆ ಬರಲು ಶುರುವಾಗಿದೆ. ಆ ಬಳಿಕ ಬಟ್ಟೆಯ ತುಂಡೊಂದು ಪತ್ತೆಯಾಗಿದೆ. ಇದರಿಂದ ಅನುಮಾನ ಇನ್ನಷ್ಟು ಹೆಚ್ಚಾಗಿದೆ. ಕೊನೆಗೆ ಇನ್ನಷ್ಟು ಅಳದಲ್ಲಿ ನೋಡಿದಾಗ ಅದರಲ್ಲಿ ವಿಜಯ್ ಅವರ ದೇಹ ಹೂತು ಹಾಕಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ.
ವಿಜಯ್ ಅವರ ಸಹೋದರ ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ, ತನಿಖೆ ಶುರುವಾಗಿದೆ. ಕೋಮಲ್ ಪಕ್ಕದ ಮನೆಯ ಮೋನು ಎಂಬಾತನ ಜತೆ ಕೆಲ ದಿನಗಳ ಹಿಂದೆ ಹೋಗಿದ್ದು ವಾಪಸ್ ಬಾರದ ಹಿನ್ನೆಲೆ ಈ ಕೃತ್ಯವನ್ನು ಅವರಿಬ್ಬರು ಸೇರಿಕೊಂಡು ಮಾಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.
ಕಳೆದ ಕೆಲ ದಿನಗಳ ಹಿಂದಷ್ಟೇ ಶೌಚಾಲಯದ ಡ್ರೈನೇಜ್ ಮುಚ್ಚಿಹೋಗಿದೆ ಎಂದು ಕೋಮಲ್ ಹೇಳಿಕೊಂಡಿದ್ದರು ಮತ್ತು ಆ ಪ್ರದೇಶವನ್ನು ಅಗೆಯಲು ಕಾರ್ಮಿಕರನ್ನು ಕರೆದಿದ್ದರು ಎಂದು ನೆರೆಹೊರೆಯವರು ಪೊಲೀಸರಿಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಈ ನಿಟ್ಟಿನಲ್ಲಿ ಅನುಮಾನ ಮತ್ತಷ್ಟು ದೃಢವಾಗಿದೆ. ಸದ್ಯ ಕೋಮಲ್ – ಮೋನುಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.